Advertisement

QS Asia University Rankings: ಚೀನಾಕ್ಕಿಂತ ಹೆಚ್ಚು ವಿಶ್ವವಿದ್ಯಾಲಯ ಭಾರತದಲ್ಲಿ

10:24 PM Nov 08, 2023 | Team Udayavani |

ನವದೆಹಲಿ: ಶೈಕ್ಷಣಿಕವಾಗಿ ಭಾರತ ಅತಿವೇಗವಾಗಿ ಅಭಿವೃದ್ಧಿ ಪಥದತ್ತ ಸಾಗುತ್ತಿದ್ದು ಇದೀಗ ಏಷ್ಯಾದಲ್ಲೇ ಅತಿಹೆಚ್ಚು ಉನ್ನತ ಶಿಕ್ಷಣ ಸಂಸ್ಥೆಗಳನ್ನು ಹೊಂದಿರುವ ರಾಷ್ಟ್ರವೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

Advertisement

ಅಲ್ಲದೆ, ನೆರೆ ರಾಷ್ಟ್ರ ಚೀನಾವನ್ನೂ ಹಿಂದಿಕ್ಕಿ ಅತಿಹೆಚ್ಚು ಶ್ರೇಯಾಂಕಿತ ವಿಶ್ವವಿದ್ಯಾಲಯಗಳನ್ನು ಒಳಗೊಂಡಿರುವ ಖ್ಯಾತಿ ಮುಡಿಗೇರಿಸಿಕೊಂಡಿದೆ.

ಕ್ಯೂಎಸ್‌ ವರ್ಲ್ಡ್ ಯೂನಿವರ್ಸಿಟಿ ರ್‍ಯಾಂಕಿಂಗ್ಸ್‌ -ಏಷ್ಯಾ ಪ್ರಕಟಿಸಿರುವ ರ್‍ಯಾಂಕಿಂಗ್‌ಗಳ ಪ್ರಕಾರ- 148 ವೈಶಿಷ್ಟ್ಯ ಪೂರ್ಣ ವಿವಿಗಳನ್ನು ದೇಶ ಒಳಗೊಂಡಿದೆ ಕಳೆದ ವರ್ಷಕ್ಕಿಂತಲೂ ಈ ವರ್ಷ ಹೆಚ್ಚುವರಿಯಾಗಿ 37 ವಿವಿಗಳನ್ನು ಒಳಗೊಂಡಿದ್ದು, ನಂತರದ ಸ್ಥಾನದಲ್ಲಿ 133 ವಿವಿಗಳಿರುವ ಚೀನಾ, 96 ವಿವಿಗಳಿರುವ ಮ್ಯಾನ್ಮಾರ್‌, ಕಾಂಬೋಡಿಯಾ ಹಾಗೂ ನೇಪಾಳ ರಾಷ್ಟ್ರಗಳು ಸ್ಥಾನ ಪಡೆದಿವೆ.

ಅಗ್ರ ನೂರರಲ್ಲಿ ಬೆಂಗಳೂರು : ಕಳೆದ ವರ್ಷದಂತೆಯೇ ಐಐಎಸ್‌ಸಿ ಬೆಂಗಳೂರು, ದೆಹಲಿ ವಿವಿ ಹಾಗೂ ಬಾಂಬೆ, ದೆಹಲಿ, ಮದ್ರಾಸ್‌, ಖರಗ್‌ಪುರ ಮತ್ತು ಕಾನ್ಪುರ ಐಐಟಿಗಳು ಏಷ್ಯಾದ ಅಗ್ರ 100 ಉನ್ನತ ಶಿಕ್ಷಣ ಸಂಸ್ಥೆಗಳ ಪೈಕಿ ಸ್ಥಾನ ಪಡೆದಿವೆ. ದೇಶದ ಅತ್ಯುನ್ನತ ಶಿಕ್ಷಣ ಸಂಸ್ಥೆಗಳ ಸಾಲಿನಲ್ಲಿ ಐಐಟಿ ಬಾಂಬೆ ಅಗ್ರಸ್ಥಾನ ಉಳಿಸಿಕೊಂಡಿದೆ.

ವಿದೇಶಿ ಕ್ಯಾಂಪಸ್‌ಗೆ ಯುಜಿಸಿ ಮಾರ್ಗಸೂಚಿ
ವಿದೇಶಿ ವಿಶ್ವವಿದ್ಯಾಲಯಗಳು ಭಾರತದಲ್ಲಿ ಕ್ಯಾಂಪಸ್‌ ಸ್ಥಾಪಿಸಲು ಮತ್ತು ಕಾರ್ಯನಿರ್ವಹಿಸಲು ಅಗತ್ಯವಾದಂಥ ನಿಯಮಾವಳಿಗಳನ್ನು ಬುಧವಾರ ವಿಶ್ವ ವಿದ್ಯಾಲಯಗಳ ಧನಸಹಾಯ ಆಯೋಗ (ಯುಜಿಸಿ) ಪ್ರಕಟಿಸಿದೆ. ಆ ಪ್ರಕಾರ, ವಿದೇಶಿ ವಿವಿಗಳು ಜಾಗತಿಕ ಶ್ರೇಯಾಂಕಗಳ ಪೈಕಿ 500ರ ಒಳಗೆ ಸ್ಥಾನ ಪಡೆದಿರಬೇಕು, ವಿದೇಶಿ ಕೊಡುಗೆಯನ್ನು ಸ್ವೀಕರಿಸಲು ಅಥವಾ ಬಳಸಿಕೊಳ್ಳಲು ಬಯಸಿದರೆ ಎಫ್ಸಿಆರ್‌ಎ ಅನ್ವಯ ನೋಂದಾಯಿಸಿಕೊಳ್ಳಬೇಕು, ತಮ್ಮ ಮೂಲ ಸಂಸ್ಥೆಗಳನ್ನು ಪ್ರಚಾರ ಮಾಡುವಂಥ ಯಾವುದೇ ಕೇಂದ್ರ, ಫ್ರಾಂಚೈಸಿಯನ್ನು ಪೂರ್ವಾನುಮತಿ ಇಲ್ಲದೆ ತೆರೆಯುವಂತಿಲ್ಲ ಹಾಗೂ ಯಾವುದೇ ಹೊಸ ಉಪಕ್ರಮವನ್ನು ಆರಂಭಿಸಲು ಆಯೋಗದ ಅನುಮತಿ ಪಡೆಯಬೇಕು ಮತ್ತು ಆನ್‌ಲೈನ್‌, ದೂರಶಿಕ್ಷಣಗಳಿಗೂ ನಿಗದಿತ ಮಿತಿ ಸೂಚಿಸಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next