Advertisement

ಮೂರೇ ತಿಂಗಳಲ್ಲಿ ವಿಶ್ವದ ಜನಭರಿತ ರಾಷ್ಟ್ರವಾಗಲಿದೆ ಭಾರತ!

09:10 PM Jan 17, 2023 | Team Udayavani |

ಬೀಜಿಂಗ್‌/ನವದೆಹಲಿ:ಇನ್ನು ಕೇವಲ ಮೂರೇ ತಿಂಗಳಲ್ಲಿ ಅಂದರೆ ಏಪ್ರಿಲ್‌ ಮಧ್ಯಭಾಗದಲ್ಲಿ ಭಾರತವು ಜಗತ್ತಿನಲ್ಲೇ ಅತಿ ಹೆಚ್ಚು ಜನಸಂಖ್ಯೆಯಿರುವ ರಾಷ್ಟ್ರ ಎಂಬ ಪಟ್ಟಕ್ಕೇರಲಿದೆ!

Advertisement

ಹೌದು, ವಿಶ್ವದ ಅತಿ ಜನನಿಬಿಡ ರಾಷ್ಟ್ರ ಎಂಬ ಖ್ಯಾತಿ ಗಳಿಸಿರುವ ಚೀನದಲ್ಲಿ ಕಳೆದ 6 ದಶಕಗಳಲ್ಲಿ ಇದೇ ಮೊದಲ ಬಾರಿಗೆ ಜನಸಂಖ್ಯೆ ಇಳಿಮುಖವಾಗಿದೆ.

2021ಕ್ಕೆ ಹೋಲಿಸಿದರೆ 2022ರಲ್ಲಿ ಚೀನದ ಒಟ್ಟು ಜನಸಂಖ್ಯೆಯಲ್ಲಿ 8.50 ಲಕ್ಷ ಕಡಿಮೆಯಾಗಿದೆ. ವೃದ್ಧರ ಸಂಖ್ಯೆ ಹೆಚ್ಚಳ ಹಾಗೂ ಜನನ ಪ್ರಮಾಣ ಇಳಿಕೆಯೇ ಇದಕ್ಕೆ ಕಾರಣ ಎಂದು ಚೀನದ ರಾಷ್ಟ್ರೀಯ ಸಾಂಖ್ಯಿಕ ಸಂಸ್ಥೆ ಹೇಳಿದೆ.

ಈ ಹಿಂದೆ ಚೀನದಲ್ಲಿ ಜನಸಂಖ್ಯೆ ಇಳಿಕೆಯಾಗಿದ್ದು 1950ರ ಅಂತ್ಯದಲ್ಲಿ. 50ರ ದಶಕದಲ್ಲಿ ಆಡಳಿತ ನಡೆಸುತ್ತಿದ್ದ ಮಾವೋ ಝೆಡಾಂಗ್‌ ಅವರು ಸಾಮೂಹಿಕ ಕೃಷಿ ಮತ್ತು ಕೈಗಾರಿಕೀಕರಣದಂಥ ವಿನಾಶಕಾರಿ ನಿರ್ಧಾರವನ್ನು ಜಾರಿ ಮಾಡಿದಾಗ, ಚೀನದಾದ್ಯಂತ ಭೀಕರ ಬರಗಾಲ ಎದುರಾಗಿ ಲಕ್ಷಗಟ್ಟಲೆ ಮಂದಿ ಮೃತಪಟ್ಟಿದ್ದರು. ಆಗ ಜನಸಂಖ್ಯೆ ಭಾರೀ ಪ್ರಮಾಣದಲ್ಲಿ ಇಳಿಕೆಯಾಗಿತ್ತು. ಅದಾದ 6 ದಶಕಗಳ ಬಳಿಕ ಈಗ ಮತ್ತೆ ಡ್ರ್ಯಾಗನ್‌ ರಾಷ್ಟ್ರದಲ್ಲಿ ಜನಸಂಖ್ಯೆ ಕುಸಿತಗೊಂಡಿದೆ.

2030ರವರೆಗೆ ಯುವ ರಾಷ್ಟ್ರ:
ಕಳೆದ ವರ್ಷ ಚೀನದ ಜನಸಂಖ್ಯೆ 1.426 ಶತಕೋಟಿ ಆಗಿದ್ದರೆ, ಭಾರತದ್ದು 1.412 ಶತಕೋಟಿಯಾಗಿತ್ತು. ಈಗ ಚೀನದಲ್ಲಿ ಜನರ ಸಂಖ್ಯೆ ಇಳಿಮುಖವಾಗುತ್ತಿರುವ ಕಾರಣ, ಏಪ್ರಿಲ್‌ ವೇಳೆಗೆ ಭಾರತವು ಚೀನವನ್ನು ಮೀರಿಸಿ, ಜಗತ್ತಿನ ಜನಭರಿತ ರಾಷ್ಟ್ರ ಎಂಬ ಹೆಗ್ಗಳಿಕೆ ಗಳಿಸಲಿದೆ. 2030ರವರೆಗೂ ಭಾರತವು ಜಗತ್ತಿನಲ್ಲೇ ಅತಿ ಹೆಚ್ಚು “ಯುನ ಜನರು’ ಇರುವ ದೇಶವಾಗಿ ಮುಂದುವರಿಯಲಿದೆ ಎಂದು ವಿಶ್ವಸಂಸ್ಥೆಯ ವರದಿ ಹೇಳಿದೆ.

Advertisement

2022ರಲ್ಲಿ ಭಾರತದ ಜನಸಂಖ್ಯೆ- 1.412 ಶತಕೋಟಿ
2022ರಲ್ಲಿ ಚೀನದ ಜನಸಂಖ್ಯೆ – 1.426 ಶತಕೋಟಿ
2050ರ ವೇಳೆಗೆ ಭಾರತದ ಜನಸಂಖ್ಯೆ- 1.668 ಶತಕೋಟಿ
2050ರ ವೇಳೆಗೆ ಚೀನದ ಜನಸಂಖ್ಯೆ- 1.317 ಶತಕೋಟಿ

ಭಾರತಕ್ಕೆ ಎಚ್ಚರಿಕೆಯ ಕರೆಗಂಟೆ
ಚೀನ ಕೈಗೊಂಡ ಕಠಿಣ ಜನಸಂಖ್ಯಾ ನಿಯಂತ್ರಣ ಕ್ರಮಗಳೇ ಅದಕ್ಕೆ ಮುಳುವಾಗಿ ಪರಿಣಮಿಸಿತು. ಇದು ಭಾರತಕ್ಕೂ ಎಚ್ಚರಿಕೆಯ ಕರೆಗಂಟೆ. ಏಕೆಂದರೆ, ಈಗಾಗಲೇ ಸಿಕ್ಕಿಂ, ಗೋವಾ, ಜಮ್ಮು ಮತ್ತು ಕಾಶ್ಮೀರ, ಕೇರಳ, ಪುದುಚೇರಿ, ಪಂಜಾಬ್‌, ಲಡಾಖ, ಪಶ್ಚಿಮ ಬಂಗಾಳ ಮತ್ತು ಲಕ್ಷದ್ವೀಪಗಳು ಕೂಡ ಹಿರಿಯ ನಾಗರಿಕರ ಜನಸಂಖ್ಯೆ ಹೆಚ್ಚಳದ ಸವಾಲನ್ನು ಎದುರಿಸುತ್ತಿವೆ. ಈ ರಾಜ್ಯಗಳಲ್ಲಿ ದುಡಿಯಲು ಶಕ್ತರಾದ ಜನರ ಕೊರತೆ, ಫ‌ಲವತ್ತತೆ ದರ ಕುಸಿತದಂಥ ಸಮಸ್ಯೆಗಳೂ ಕಾಣಿಸಿಕೊಂಡಿವೆ. ಹೀಗಾಗಿ, ಜನಸಂಖ್ಯೆ ನಿಯಂತ್ರಣಕ್ಕಾಗಿ ಕೈಗೊಳ್ಳುವ ಕ್ರಮಗಳು ತಿರುಗುಬಾಣವಾಗುವ ಸಾಧ್ಯತೆಯಿದೆ ಎಂದು ತಜ್ಞರು ಎಚ್ಚರಿಸಿದ್ದಾರೆ.

 

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next