ನವದೆಹಲಿ: ಭಾರತ ಸೋಮವಾರ(ಡಿಸೆಂಬರ್ 06) ರಷ್ಯಾದ ಜತೆ ಪ್ರಮುಖ ಎರಡು ಒಪ್ಪಂದಗಳಿಗೆ ಸಹಿ ಹಾಕಿದೆ. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಇಂದು ಭಾರತಕ್ಕೆ ಭೇಟಿ ನೀಡಿರುವ ರಷ್ಯಾ ರಕ್ಷಣಾ ಸಚಿವ ಸೆರ್ಗೆಯ್ ಶೋಯಿಗು ಅವರ ಜತೆ ಮಾತುಕತೆ ನಡೆಸಿ ಮಹತ್ವದ ಒಪ್ಪಂದಕ್ಕೆ ಉಭಯ ದೇಶಗಳು ಸಹಿ ಹಾಕಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:ಟೆಸ್ಟ್ ತಂಡಕ್ಕೂ ರೋಹಿತ್ ಶರ್ಮ ಉಪನಾಯಕ? ರಹಾನೆಗೆ ಕೊಕ್ ಸಾಧ್ಯತೆ
ಉತ್ತರಪ್ರದೇಶದ ಅಮೇಠಿಯಲ್ಲಿ ರಷ್ಯಾ ಸಹಭಾಗಿತ್ವದೊಂದಿಗೆ ಸುಮಾರು 6 ಲಕ್ಷ AK 203 ರೈಫಲ್ಸ್ ಉತ್ಪಾದಿಸಲಿರುವ ಒಪ್ಪಂದಕ್ಕೆ ಭಾರತ, ರಷ್ಯಾ ಸಹಿ ಹಾಕಿದೆ. ಇದು 5,000ಕ್ಕೂ ಅಧಿಕ ಕೋಟಿ ರೂಪಾಯಿಗಳ ಒಪ್ಪಂದವಾಗಿದೆ.
ಅಲ್ಲದೇ 2021ರಿಂದ 2031ರವರೆಗಿನ ಸೇನಾ ತಂತ್ರಜ್ಞಾನದ ಸಹಕಾರ ಮುಂದುವರಿಸಲಿರುವ ಒಪ್ಪಂದಕ್ಕೂ ಭಾರತ ಮತ್ತು ರಷ್ಯಾ ಸಹಿ ಹಾಕಿದೆ. ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಭಾರತಕ್ಕೆ ಭೇಟಿ ನೀಡಿದ್ದು, ಪ್ರಧಾನಿ ನರೇಂದ್ರ ಮೋದಿ ಅವರನ್ನು ಇಂದು ಸಂಜೆ ಭೇಟಿಯಾಗಿ ಮಾತುಕತೆ ನಡೆಸುವ ಕೆಲವು ಗಂಟೆಗಳ ಮೊದಲು ಈ ಒಪ್ಪಂದಕ್ಕೆ ಸಹಿ ಹಾಕಲಾಗಿದೆ ಎಂದು ವರದಿ ತಿಳಿಸಿದೆ.
ಭಾರತ ರಷ್ಯಾದೊಂದಿಗೆ ವಿಶೇಷ ಬಾಂಧವ್ಯ ಹೊಂದಿರುವುದಾಗಿ ಉಭಯ ದೇಶಗಳ ನಾಯಕರ ಮಾತುಕತೆ ಬಳಿಕ ರಾಜನಾಥ್ ಸಿಂಗ್ ಟ್ವೀಟ್ ನಲ್ಲಿ ತಿಳಿಸಿದ್ದಾರೆ. ರಷ್ಯಾ ಭಾರತಕ್ಕೆ ನೀಡಿರುವ ಬಲವಾದ ಬೆಂಬಲಕ್ಕೆ ಭಾರತ ಅಭಿನಂದನೆ ಸಲ್ಲಿಸುವುದಾಗಿ ಮತ್ತೊಂದು ಟ್ವೀಟ್ ನಲ್ಲಿ ಸಿಂಗ್ ತಿಳಿಸಿದ್ದಾರೆ.