ದುಬೈ: ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ) ಟೆಸ್ಟ್ ರಾಕಿಂಗ್ ಪಟ್ಟಿ ಬಿಡುಗಡೆ ಮಾಡಿದೆ. ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ಅಗ್ರ ಸ್ಥಾನದಲ್ಲಿಯೇ ಮುಂದುವರಿದ್ದರೆ, ನ್ಯೂಜಿಲ್ಯಾಂಡ್ ತಂಡ ಎರಡನೇ ಸ್ಥಾನದಲ್ಲಿದೆ.
ಸದ್ಯ ಪ್ರಮುಖ ದೇಶಗಳು ಯಾವುದೇ ಟೆಸ್ಟ್ ಆಡದೇ ಹೋದರು ಐಸಿಸಿ ಈ ಪಟ್ಟಿ ಬಿಡುಗಡೆ ಮಾಡಿದೆ. ಮೇ 2020 ರ ನಂತರ ಆಡಿದ ಎಲ್ಲಾ ಪಂದ್ಯಗಳನ್ನು 100 ಪ್ರತಿಶತ ಮತ್ತು ಹಿಂದಿನ ಎರಡು ವರ್ಷಗಳ ಶೇಕಡಾ 50 ರಂತೆ ಅಂಕ ನೀಡುವ ಮೂಲಕ ಈ ನವೀಕೃತ ಸ್ಥಾನಪಟ್ಟಿ ಬಿಡುಗಡೆ ಮಾಡಿದೆ.
ಟೀಂ ಇಂಡಿಯಾ ಒಂದು ಅಂಕ ಹೆಚ್ಚಿಸಿಕೊಂಡು ಮೊದಲ ಸ್ಥಾನದಲ್ಲಿದೆ. (121 ಅಂಕ) ಎರಡನೇ ಸ್ಥಾನದಲ್ಲಿರುವ ನ್ಯೂಜಿಲ್ಯಾಂಡ್ ಭಾರತಕ್ಕಿಂತ ಕೇವಲ ಒಂದು ಅಂಕದ ಹಿನ್ನಡೆಯಲ್ಲಿದೆ.
ಇಂಗ್ಲೆಂಡ್ ತಂಡ ಮೂರು ಅಂಕ ಪಡೆದು ಮೂರನೇ ಸ್ಥಾನಕ್ಕೆ ಭಡ್ತಿ ಪಡೆದರೆ, ಐದು ಅಂಕ ಕಳೆದುಕೊಂಡಿರುವ ಆಸ್ಟ್ರೇಲಿಯಾ ನಾಲ್ಕನೇ ಸ್ಥಾನಕ್ಕೆ ಕುಸಿದಿದೆ. ತಲಾ ಮೂರು ಅಂಕ ಪಡೆದಿರುವ ಪಾಕಿಸ್ಥಾನ ಮತ್ತು ವೆಸ್ಟ್ ಇಂಡೀಸ್ ಕ್ರಮವಾಗಿ ಐದು ಮತ್ತು ಆರನೇ ಸ್ಥಾನದಲ್ಲಿದೆ.
ದಕ್ಷಿಣ ಆಪ್ರಿಕಾ ತಂಡ ಬರೋಬ್ಬರಿ 9 ಅಂಕ ಕಳೆದುಕೊಂಡಿದ್ದು, ಏಳನೇ ಸ್ಥಾನಕ್ಕೆ ಕುಸಿದಿದೆ. ಟೆಸ್ಟ್ ಇತಿಹಾಸದಲ್ಲಿ ಹರಿಣಗಳು ಇದು ಕಳಪೆ ಸಾಧನೆ. ಶ್ರೀಲಂಕಾ ಮತ್ತು ಬಾಂಗ್ಲಾದೇಶ ತಂಡಗಳು ತಲಾ ಐದು ಅಂಕ ಕಳೆದುಕೊಂಡಿದ್ದು, ಕ್ರಮವಾಗಿ ಎಂಟು ಮತ್ತು ಒಂಬತ್ತನೇ ಸ್ಥಾನದಲ್ಲಿದೆ. ಹತ್ತನೇ ಸ್ಥಾನದಲ್ಲಿ ಜಿಂಬಾಬ್ವೆ ತಂಡವಿದೆ.