ನವದೆಹಲಿ:ಭಾರತದಲ್ಲಿ ಕಳೆದ 24ಗಂಟೆಗಳಲ್ಲಿ 47,092 ಹೊಸ ಕೋವಿಡ್ ಪ್ರಕರಣಗಳು ಪತ್ತೆಯಾಗಿದ್ದು, ಇದರೊಂದಿಗೆ ದೇಶದಲ್ಲಿ ಕೋವಿಡ್ ಪ್ರಕರಣಗಳ ಒಟ್ಟು ಸಂಖ್ಯೆ 3.28 ಕೋಟಿಗೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಗುರುವಾರ(ಸೆಪ್ಟೆಂಬರ್ 02) ಬಿಡುಗಡೆಗೊಳಿಸಿರುವ ಅಂಕಿಅಂಶದಲ್ಲಿ ತಿಳಿಸಿದೆ.
ಇದನ್ನೂ ಓದಿ:ಅಫ್ಗಾನಿಸ್ತಾನದಲ್ಲಿ ತಾಲಿಬಾನ್ ಸರ್ಕಾರ : ಉಗ್ರ ಪಡೆಗೆ ಮುಲ್ಲಾ ಹಿಬತುಲ್ಲಾ ಅಖುಂಡಜಾದ ನಾಯಕ.!
24ಗಂಟೆಗಳಲ್ಲಿ ಶೇ.12ರಷ್ಟು ಕೋವಿಡ್ ಪ್ರಕರಣಗಳು ಹೆಚ್ಚಳವಾಗಿವೆ. ಅಲ್ಲದೇ ಕಳೆದ ಎರಡು ತಿಂಗಳ ಬಳಿಕ ಒಂದೇ ದಿನದಲ್ಲಿ ಗರಿಷ್ಠ ಪ್ರಮಾಣದ ಕೋವಿಡ್ ಪ್ರಕರಣ ವರದಿಯಾಗಿದೆ. ಕಳೆದ 24 ಗಂಟೆಗಳಲ್ಲಿ 509 ಮಂದಿ ಕೋವಿಡ್ ನಿಂದ ಸಾವನ್ನಪ್ಪಿದ್ದು, ಒಟ್ಟು ಈವರೆಗೆ ದೇಶಾದ್ಯಂತ 4,39,529 ಮಂದಿ ಸಾವನ್ನಪ್ಪಿದ್ದಾರೆ.
ದೇಶದಲ್ಲಿ ಒಟ್ಟು ಸಕ್ರಿಯ ಕೋವಿಡ್ ಪ್ರಕರಣಗಳ ಸಂಖ್ಯೆ 3,89,583ಕ್ಕೆ ಏರಿಕೆಯಾಗಿದೆ. ಸಕ್ರಿಯ ಕೋವಿಡ್ ಪ್ರಕರಣಗಳ ಸಂಖ್ಯೆಯಲ್ಲಿಯೂ ಶೇ.1.15ರಷ್ಟು ಹೆಚ್ಚಳವಾಗಿದೆ. ಭಾರತದಲ್ಲಿನ ಕೋವಿಡ್ 19 ಚೇತರಿಕೆ ಪ್ರಮಾಣ ಶೇ.97.48ಕ್ಕೆ ಏರಿಕೆಯಾಗಿದೆ ಎಂದು ವರದಿ ತಿಳಿಸಿದೆ.
ಪ್ರತಿ ದಿನದ ಪಾಸಿಟಿವಿಟಿ ದರ ಶೇ.2.80ರಷ್ಟಿದ್ದು, ಬುಧವಾರ(ಸೆ.01) ಸಂಜೆ 7ಗಂಟೆವರೆಗೆ ದೇಶದಲ್ಲಿ 69 ಲಕ್ಷ ಮಂದಿಗೆ ಕೋವಿಡ್ ಲಸಿಕೆ ನೀಡಿಲಾಗಿದ್ದು, ಇದರೊಂದಿಗೆ ದೇಶಾದ್ಯಂತ ಒಟ್ಟು 66 ಕೋಟಿ ಡೋಸ್ ಲಸಿಕೆ ನೀಡಲಾಗಿದೆ ಎಂದು ಅಂಕಿಅಂಶ ವಿವರಿಸಿದೆ.