Advertisement

India ಕಾಲಿಟ್ಟ ಎಂಪಾಕ್ಸ್‌? ವಿದೇಶದಿಂದ ಬಂದ ವ್ಯಕ್ತಿಗೆ ಸೋಂಕಿನ ಶಂಕೆ;ಸದ್ಯ ಆರೋಗ್ಯ ಸ್ಥಿರ

01:24 AM Sep 09, 2024 | Team Udayavani |

ಹೊಸದಿಲ್ಲಿ: ಆಫ್ರಿಕಾದ ದೇಶಗಳಲ್ಲಿ ಇತ್ತೀಚೆಗೆ ಬಹಳವಾಗಿ ಆತಂಕ ಸೃಷ್ಟಿ ಮಾಡಿರುವ ಮಂಗನ ಸಿಡುಬು (ಎಂಪಾಕ್ಸ್‌) ಭಾರತಕ್ಕೂ ಕಾಲಿಟ್ಟಿರುವ ಶಂಕೆ ವ್ಯಕ್ತವಾಗಿದೆ.

Advertisement

ವಿದೇಶದಿಂದ ಭಾರತಕ್ಕೆ ಆಗಮಿಸಿದ ವ್ಯಕ್ತಿಯೊಬ್ಬರಿಗೆ ಎಂಪಾಕ್ಸ್‌ ತಗಲಿರುವುದಾಗಿ ಶಂಕಿಸಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಪ್ರಕಟಿಸಿದೆ. ಇದರ ಬೆನ್ನಲ್ಲೇ ಆ ವ್ಯಕ್ತಿಯನ್ನು ಆಸ್ಪತ್ರೆಯೊಂದರಲ್ಲಿ ಪ್ರತ್ಯೇಕವಾಗಿ ಇರಿಸಲಾಗಿದ್ದು, ಸದ್ಯ ಅವರ ಆರೋಗ್ಯ ಸ್ಥಿರವಾಗಿದೆ. ಆತಂಕದ ಅಗತ್ಯವಿಲ್ಲ ಎಂದು ಸಚಿವಾಲಯ ತಿಳಿಸಿದೆ.

ಎಂಪಾಕ್ಸ್‌ ಇರುವ ಬಗ್ಗೆ ಖಚಿತಪಡಿಸಿಕೊಳ್ಳಲು ರೋಗಿಯ ರಕ್ತದ ಮಾದರಿಯನ್ನು ಸಂಗ್ರಹಿಸಿ ಪರೀಕ್ಷಿಸಲಾಗುತ್ತಿದೆ. ಶಿಷ್ಟಾಚಾರದಂತೆ ಈ ಪ್ರಕರಣವನ್ನು ನಿರ್ವಹಣೆ ಮಾಡಲಾಗುತ್ತಿದೆ. ರೋಗಿಯ ಸಂಪರ್ಕ ಪತ್ತೆ ಹಚ್ಚುವಿಕೆ ಕಾರ್ಯ ನಡೆಯುತ್ತಿದೆ ಎಂದು ಸಚಿವಾಲಯ ಮಾಹಿತಿ ನೀಡಿದೆ. ಅಲ್ಲದೇ ಇಂತಹ ಪ್ರಕರಣಗಳನ್ನು ನಿರ್ವಹಿಸಲು ದೇಶವು ಸಂಪೂರ್ಣ ಸಜ್ಜಾಗಿದ್ದು, ಯಾವುದೇ ಸಂಭಾವ್ಯ ಅಪಾಯವನ್ನು ತಪ್ಪಿಸಲು ದೃಢವಾದ ಕ್ರಮ ಕೈಗೊಳ್ಳಲಿದೆ ಎಂದೂ ಹೇಳಿದೆ.

ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ)ಯು 12 ಆಫ್ರಿಕನ್‌ ದೇಶಗಳಲ್ಲಿ ತುರ್ತು ಪರಿಸ್ಥಿತಿ ಘೋಷಣೆ ಮಾಡಿದ 3 ವಾರಗಳ ಬಳಿಕ ಭಾರತದಲ್ಲಿ ಶಂಕಿತ ಎಂಪಾಕ್ಸ್‌ ಪ್ರಕರಣ ಪತ್ತೆಯಾಗಿದೆ.

ಏನಿದು ಎಂಪಾಕ್ಸ್‌?
ಆಥೋಪಾಕ್ಸ್‌ ವೈರಸ್‌ ಕುಲಕ್ಕೆ ಸೇರಿದ ಈ ಸೋಂಕು ಸಿಡುಬು ರೋಗದ ಸಾಮ್ಯತೆ ಹೊಂದಿದೆ. ಇದನ್ನು 2 ಕ್ಲೇಡ್‌ಗಳಲ್ಲಿ ವಿಂಗಡಿಸಲಾಗಿದ್ದು, ಕಾಂಗೊ ಬೇಸಿನ್‌ ಒಂದು ಕ್ಲೇಡ್‌ ಆದರೆ ಮತ್ತೊಂದು ಪಶ್ಚಿಮ ಆಫ್ರಿಕಾ ಕ್ಲೇಡ್‌. ಕಾಂಗೊ ಬೇಸಿನ್‌ ಕ್ಲೇಡ್‌ ಹಲವು ಗಂಭೀರ ಆರೋಗ್ಯ ಸಮಸ್ಯೆಗಳಾದ ನ್ಯುಮೋನಿಯಾ, ಬ್ಯಾಕ್ಟೀರಿಯಾ ಸೋಂಕು ಹಾಗೂ ಉಸಿರಾಟದ ತೊಂದರೆ ಉಂಟು ಮಾಡುತ್ತದೆ. ಪಶ್ಚಿಮ ಆಫ್ರಿಕಾ ಕ್ಲೇಡ್‌ ಕೊಂಚ ಕಡಿಮೆ ಅಪಾಯಕಾರಿಯಾಗಿದ್ದು, ದೇಹದಲ್ಲಿ ಗುಳ್ಳೆಗಳು ಹಾಗೂ ಜ್ವರದಂತಹ ಲಕ್ಷಣಗಳಿರುತ್ತವೆ.

Advertisement

ಚಿಕಿತ್ಸೆ ಏನು?
ಪ್ರಸ್ತುತ ಈ ಸೋಂಕಿಗೆ ಯಾವುದೇ ನಿರ್ದಿಷ್ಟ ಚಿಕಿತ್ಸೆ ಇಲ್ಲ. ಆದರೆ ಸೂಕ್ತ ಆರೈಕೆ ಹಾಗೂ ಔಷಧಗಳಿಂದ ರೋಗದ ಲಕ್ಷಣಗಳನ್ನು ಕ್ಷೀಣಗೊಳಿಸಬಹುದು. ಸೋಂಕು ಹರಡುವುದನ್ನು ತಡೆಯಲು ಕಾಡುಪ್ರಾಣಿಗಳ ಸಂಪರ್ಕ ತಪ್ಪಿಸಬೇಕು. ಸೋಂಕಿತ ವ್ಯಕ್ತಿಯನ್ನು ಪ್ರತ್ಯೇಕವಾಗಿರಿಸಿ ಆದಷ್ಟು ಸಂಪರ್ಕದಿಂದ ದೂರವಿರಬೇಕು.

ರೋಗ ಲಕ್ಷಣಗಳು
ಗುಳ್ಳೆಗಳು ,ಜ್ವರ, ಉಬ್ಬಿದ ಗಂಟಲು, ತಲೆನೋವು, ಸ್ನಾಯುಸೆಳೆತ ,ಬೆನ್ನುನೋವು ,ದುಗ್ಧರಸ ಗ್ರಂಥಿ ಊತ

ಹರಡುವಿಕೆ ಹೇಗೆ?
ಸೋಂಕುಪೀಡಿತ ಪ್ರಾಣಿಗಳ ನೇರ ಸಂಪರ್ಕ ದಿಂದ ಮನುಷ್ಯರಿಗೆ ಮಂಗನ ಸಿಡುಬು ಹರಡು ತ್ತದೆ. ಜತೆಗೆ ಸೋಂಕಿತ ಪ್ರಾಣಿಯ ಮಾಂಸ ಸೇವನೆಯಿಂದಲೂ ಹರಡ ಬಹುದು. ಇದಲ್ಲದೆ ಸೋಂಕುಪೀಡಿತ ಮನುಷ್ಯನ ಉಸಿರಾಟದಿಂದ ಹೊರಬರುವ ಸೋಂಕಿನ ಕಣಗಳು ಬೇರೆಯವರಿಗೆ ತಗಲಿ ಹರಡಬಹುದು. ಗರ್ಭಿಣಿಗೆ ಸೋಂಕು ತಗಲಿದರೆ ಆಕೆಯಿಂದ ಭ್ರೂಣಕ್ಕೂ ತಗಲುವ ಸಾಧ್ಯತೆ ಇದೆ.

Advertisement

Udayavani is now on Telegram. Click here to join our channel and stay updated with the latest news.

Next