ಜಮ್ಮು-ಕಾಶ್ಮಿರ:ಆಕಸ್ಮಿಕವಾಗಿ ಭಾರತದ ಗಡಿ ಪ್ರವೇಶಿಸಿದ್ದ ಪಾಕ್ ಪ್ರಜೆಯನ್ನು ಭಾರತೀಯ ಸೇನಾಧಿಕಾರಿಗಳು ತವರಿಗೆ ಕಳುಹಿಸಿ ಕೊಟ್ಟಿದ್ದಾರೆ. ಪಾಕಿಸ್ತಾನದ ಲಿಪಾ ಪ್ರದೇಶದ ನಿವಾಸಿ ಮಂಜೂರ್ ಅಹ್ಮದ್ ಎಂಬುವರ ಪುತ್ರ ಮೌಸಮ್ ಹೆಸರಿನ ಯುವಕ ಏಪ್ರಿಲ್ 5 ರಂದು ಭಾರತದ ಗಡಿ ಪ್ರವೇಶಿಸಿದ್ದ.
ಜಮ್ಮು-ಕಾಶ್ಮಿರದ ಕುಪ್ವಾರಾದ ಕರ್ಣ ಎಂಬಲ್ಲಿ ಭಾರತದ ಗಡಿ ನಿಯಂತ್ರಣ ರೇಖೆ( ಎಲ್‍ಒಸಿ) ಯನ್ನು ದಾಟಿ ಭಾರತಕ್ಕೆ ಆಗಮಿಸಿದ್ದ. ಈತನನ್ನು ವಶಕ್ಕೆ ಪಡೆದ ಭಾರತೀಯ ಸೇನೆ ಪಾಕಿಸ್ತಾನ್ ಅಧಿಕಾರಿಗಳ ಗಮನಕ್ಕೆ ತಂದಿತ್ತು.
ಉಭಯ ರಾಷ್ಟ್ರಗಳ ಅಧಿಕಾರಿಗಳ ನಡುವೆ ಮಾತುಕತೆ ನಡೆದು ಇಂದು (ಏ.7) ಬೆಳಿಗ್ಗೆ 11.50ರ ವೇಳೆ ತೀತ್ ವಾಲ್ ಎಂಬಲ್ಲಿ ಮೌಸಮ್‍ನನ್ನು ಪಾಕ್ ಅಧಿಕಾರಿಗಳಿಗೆ ಹಸ್ತಾಂತರಿಸಲಾಯಿತು. ಮೌಸಮ್ ತಾಯಿನಾಡಿಗೆ ಮರಳಿಸಿದ ಅಧಿಕಾರಿಗಳಿಗೆ ಬಟ್ಟೆ ಹಾಗೂ ಸಿಹಿತಿಂಡಿ ನೀಡಿ ಕೃತಜ್ಞತೆ ಸಲ್ಲಿಸಿದ್ದಾನೆ.
ಇನ್ನು ಈ ಬಗ್ಗೆ ಮಾಧ್ಯಮಗಳಿಗೆ ಮಾತಾಡಿರುವ ಭಾರತೀಯ ಸೇನಾಧಿಕಾರಿಗಳು ಮಾನವೀಯತೆಯ ನೆಲೆಗಟ್ಟಿನಲ್ಲಿ ತವರಿಗೆ ಮರಳಿ ಕಳುಹಿಸಿದ್ದೇವೆ ಎಂದಿದ್ದಾರೆ.