Advertisement

ಭಾರತ ಭಾರತವಾಗೇ ಉಳಿಯುತ್ತೆ: ಡಾ|ಅಂಧಾರೆ

11:09 AM Jan 23, 2018 | Team Udayavani |

ಕಲಬುರಗಿ: ಯಾರು ಏನೇ ಬೊಗಳಲಿ. ಕಚ್ಚಲಿ ಹಾಗೂ ಬೊಬ್ಬಿಡಲಿ ಭಾರತ ಎಂದೆಂದಿಗೂ ಭಾರತವಾಗಿಯೇ ಇರುತ್ತದೆ. ಇದನ್ನು ಹಿಂದೂ ರಾಷ್ಟ್ರವಾಗಿ ಮಾಡಲು ಆಗಲಿ. ಅಂಬೇಡ್ಕರ್‌ ಅವರು ಬರೆದ ಸಂವಿಧಾನ ಬದಲಾಯಿಸುವುದಾಗಲಿ ಸಾಧ್ಯವಿಲ್ಲದ ಮಾತು ಎಂದು ಮಹಾರಾಷ್ಟ್ರದ ಅಂಬೇಡ್ಕರ್‌ ವಾದಿ ಹಾಗೂ ಚಿಂತಕಿ ಡಾ| ಸುಷ್ಮಾ ಅಂಧಾರೆ ಹೇಳಿದರು.

Advertisement

ನಗರದ ದೀಕ್ಷಾಭೂಮಿ ಎಂ.ಎಸ್‌.ಕೆ ಮಿಲ್‌ ಮೈದಾನದಲ್ಲಿ ಭೀಮಾ ಕೋರೆಗಾಂವ ವಿಜಯೋತ್ಸವ 200ನೇ ವರ್ಷಾಚರಣೆ ಅಂಗವಾಗಿ ಏರ್ಪಡಿಸಿದ್ದ ಬೃಹತ್‌ ಸಮಾವೇಶದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಕೆಲವು ಕೇಂದ್ರ ಮಂತ್ರಿಗಳು ಸಂವಿಧಾನ ಬದಲಿಸುವ ಕುರಿತು ಸುದ್ದಿ ಮಾಡುತ್ತಿದ್ದಾರೆ. ಇನ್ನೂ ಕೆಲವರು ವಿಚಾರವಾದಿಗಳ ರಕ್ತ ಮತ್ತು ನಾಯಕರ ಪ್ರಾಮಾಣಿಕತೆ ಪ್ರಶ್ನಿಸುತ್ತಾರೆ. ಆದರೆ, ಅದಕ್ಕೊಂದು ಕ್ರಮ ಇರಬೇಕು. ಬೇಕಾಬಿಟ್ಟಿಯಾಗಿ ಸಿಕ್ಕಸಿಕ್ಕಲೆಲ್ಲ ಹೇಳಿಕೊಂಡು ಓಡಾಡುವುದು ಆಂತರ್ಯದ ಸಂಸ್ಕೃತಿ ಬಯಲಾಗುತ್ತದೆ ಎಂದು ಹೇಳಿದರು.

ಯುಗ ಪುರುಷ ಡಾ| ಬಿ.ಆರ್‌. ಅಂಬೇಡ್ಕರ ಅವರ ಸ್ಮಾರಕಗಳ ರಕ್ಷಣೆ ಮಾಡುವುದು ನಮ್ಮನ್ನಾಳುವ ಸರಕಾರದ ರಾಷ್ಟ್ರೀಯ ಜವಾಬ್ದಾರಿಯಾಗಿದೆ ಎಂದು ಹೇಳಿದರು. ಪಂಚಾಯತ ರಾಜ್‌ ಯೋಜನಾ ವಿಭಾಗ ಕಾರ್ಯಪಾಲಕ ಅಭಿಯಂತರ ಸುರೇಶ ಶರ್ಮಾ ಸಮ್ಮೇಳನ ಉದ್ಘಾಟಿಸಿದರು. ಮುಖ್ಯ ಅತಿಥಿ ಬೆಂಗಳೂರಿನ ಅಂಬೇಡ್ಕರವಾದಿ ಬಿ.ಆರ್‌ .ಭಾಸ್ಕರ ಪ್ರಸಾದ ಮಾತನಾಡಿ, 1818ರಲ್ಲಿ ಕೋರೆಗಾಂವ ಯುದ್ಧ ಅಸ್ಪೃಶ್ಯರು ಮತ್ತು ಮನುವಾದದ ವಿರುದ್ಧ ನಡೆದಂತದ್ದು, ಅಲ್ಲಿಂದ ಹಿಡಿದು ಇಲ್ಲಿಯವರೆಗೂ ಯಾವ ಬದಲಾವಣೆ ಕಂಡಿಲ್ಲ. ಆದರೆ ಅದರ ಸ್ವರೂಪಗಳು ಮಾತ್ರ
ಬದಲಾಗಿವೆ. ಆದ್ದರಿಂದ ಇವತ್ತು ನಾವೆಲ್ಲರೂ ಇಂದಿನ ಆಧುನಿಕ ಪೇಶ್ವೆಗಳ ವಿರುದ್ಧ ಒಗ್ಗಟ್ಟಾಗಿ ನಿಜವಾದ ಹೋರಾಟ ಕಟ್ಟಬೇಕಾಗಿದೆ ಎಂದು ಹೇಳಿದರು.

ಭಂತೆ ಜ್ಞಾನಸಾಗರ ಮತ್ತು ಪೂಜ್ಯ ಭಂತೆ ಧಮ್ಮದೀಪ ಸಮಾವೇಶದ ಸಾನ್ನಿಧ್ಯ ಮತ್ತು ದಲಿತ ಹಿರಿಯ ಮುಖಂಡ ಡಾ| ವಿಠ್ಠಲ ದೊಡ್ಡಮನಿ ಅಧ್ಯಕ್ಷತೆ ವಹಿಸಿದ್ದರು. ಯುವ ಮುಖಂಡ ಸಂತೋಷ ಮೇಲ್ಮನಿ ಪ್ರಾಸ್ತಾವಿಕವಾಗಿ ಮಾತನಾಡಿದರು. ದಿನೇಶ ದೊಡ್ಡಮನಿ ಸ್ವಾಗತಿಸಿದರು.

ನೂತನವಾಗಿ ಕೆ.ಎ.ಎಸ್‌. ಅಧಿಕಾರಿಗಳಾಗಿ ನೇಮಕವಾದ ಸುರೇಶ ವರ್ಮಾ, ವರ್ಷಾ ಡಿ. ಒಡೆಯಾರ, ನೀಲಗಂಗಾ ಎಸ್‌. ಬಬಲಾದ, ನೀಲಪ್ರಭಾ ಎಸ್‌. ಬಬಲಾದ, ಪಲ್ಲವಿ ಹರಸೂರಕರ್‌, ನಾಗಮ್ಮ ಕಟ್ಟಿಮನಿ ಮತ್ತು ಮಹೇಂದ್ರ ಮದರಕಲ್‌ ಅವರನ್ನು ಸನ್ಮಾನಿಸಲಾಯಿತು.

Advertisement

ಧಾರವಾಡದ ಗಣಕರಂಗ ಪ್ರಸ್ತುತಪಡಿಸಿದ ಆಯುಧ ನಾಟಕ ಪ್ರದರ್ಶನಕ್ಕೆ ಜಿಪಂ ಉಪಾಧ್ಯಕ್ಷೆ ಶೋಭಾ ಸಿದ್ದು ಶಿರಸಗಿ ಮತ್ತು ಮಹಾನಗರ ಪಾಲಿಕೆ ಸದಸ್ಯ ಸಿದ್ಧಾರ್ಥ ಪಟ್ಟೇದಾರ ತಮಟೆ ಬಾರಿಸುವ ಮೂಲಕ ಚಾಲನೆ ನೀಡಿದರು.

ಮಾಜಿ ಮಹಾಪೌರರಾದ ಸೋಮಶೇಖರ ಮೇಲಿನಮನಿ, ಪ್ರಕಾಶ ಔರಾದಕರ್‌, ಜೈಭಾರತ ಕಾಂಬ್ಳೆ, ದೇವಿಂದ್ರ ಸಿನೂರ, ಸಂತೋಷ ಹಾದಿಮನಿ, ಪ್ರಕಾಶ ಕಪನೂರ, ಲಕ್ಷ್ಮೀಕಾಂತ ಹುಬಳಿ, ಹಣಮಂತ ಇಟಗಿ, ರಾಣೊಜಿ ದೊಡ್ಡಮನಿ ಸೇರಿದಂತೆ ಸಾವಿರಾರು ಜನರು ಸಮಾವೇಶದಲ್ಲಿ ಭಾಗವಹಿಸಿದ್ದರು. ಕುಮಾರಿ ಶೃತಿ ಕೆಂಬಾವಿ ನಿರೂಪಿಸಿದರು. ಅನೀಲ ಟೆಂಗಳಿ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next