Advertisement

ನಮ್ಮ ಧ್ವನಿ ಹತ್ತಿಕ್ಕಿದರೆ ದಿಲ್ಲಿ ಗದ್ದುಗೆ ಹೋಗುತ್ತೆ

12:45 PM Apr 14, 2018 | |

ಕಲಬುರಗಿ: ದಲಿತರ-ಶೋಷಿತರ ಧ್ವನಿ ಹತ್ತಿಕ್ಕಲು ಇನ್ನೂ ಮುಂದೆ ಹೋದರೆ ರಾಷ್ಟ್ರದ ದಿಲ್ಲಿ ಗದ್ದುಗೆ ನಾವು ಹಿಡಿದೇ ಹಿಡಿಯುತ್ತೇವೆ. ಇದರಲ್ಲಿ ಅನುಮಾನವೇ ಬೇಡ ಎಂದು ಖ್ಯಾತ ಚಿತ್ರನಟ ಪ್ರಕಾಶ ರೈ ಗುಡುಗಿದರು.

Advertisement

ನಗರದ ಜಗತ್‌ ವೃತ್ತದ ಡಾ| ಅಂಬೇಡ್ಕರ್‌ ಪುತ್ಥಳಿ ಬಳಿ ಅಂಬೇಡ್ಕರ್‌ ಜಯಂತ್ಯುತ್ಸವ ಸಮಿತಿಯು ಸಂವಿಧಾನ ಶಿಲ್ಪಿ ಡಾ| ಬಿ.ಆರ್‌. ಅಂಬೇಡ್ಕರ್‌ರ 127ನೇ ಜಯಂತ್ತುತ್ಸವ ಅಂಗವಾಗಿ ಹಮ್ಮಿಕೊಂಡಿದ್ದ ವಿಶೇಷ ಉಪನ್ಯಾಸ ಹಾಗೂ ಕ್ರಾಂತಿಗೀತೆಗಳ ಕಾರ್ಯಕ್ರಮ ಉದ್ದೇಶಿಸಿ ಅವರು ಮಾತನಾಡಿದರು.

ನಮ್ಮ ಧ್ವನಿ ಹತ್ತಿಕ್ಕಲು ಕಲ್ಲು ಹೊಡೆದರೆ ಅವುಗಳಿಂದ ಮನೆ ಕಟ್ಟುತ್ತೇವೆ. ಬೆಂಕಿ ಹಚ್ಚಿದರೆ ಅದರಿಂದ ದೀಪ ಹಚ್ಚುತ್ತೇವೆ. ಇದರಿಂದ ಹೆಚ್ಚಿನ ಧೈರ್ಯ ಬರುತ್ತದೆ. ಅಲ್ಲದೇ ಕಾರ್ಯಪ್ರವೃತ್ತರಾಗಲು ಪ್ರೇರಣೆ ನೀಡುತ್ತದೆ. ಈ ಹಿನ್ನೆಲೆಯಲ್ಲಿ ದಲಿತರು-ಶೋಷಿತ ಬಂಧುಗಳು ರಾಜಕೀಯ ಪ್ರಜ್ಞೆ ಬೆಳೆಸಿಕೊಳ್ಳುವ ಮೂಲಕ ಬದಲಾವಣೆಗೆ ನಾಂದಿ ಹಾಡಬೇಕೆಂದು ಕರೆ ನೀಡಿದರು. ನಮ್ಮನ್ನು ಪ್ರಾಣಿ ಎಂದು
ಹೀಯಾಳಿಸುವವರನ್ನು ಹಾಗೂ ಸಂವಿಧಾನ ಬದಲಾಯಿಸುತ್ತೇವೆ ಎನ್ನುವವರನ್ನು ನಾವೇ ಬದಲಾಯಿಸಬೇಕು. ನಿಜ ನಾವು ಮನುಷ್ಯ ಪ್ರಾಣಿಗಳು. ಖಂಡಿತ ನಿಮ್ಮನ್ನು ತಿನ್ನದೇ ಬಿಡುವುದಿಲ್ಲ. ಪ್ರಮುಖವಾಗಿ ಇವರನ್ನು ಬದಲಾವಣೆ ಮೂಲಕ ನಮ್ಮ ಕೈಗೆ ಮತ್ತೆ ಅಧಿಕಾರ ತೆಗೆದುಕೊಳ್ಳಬೇಕಾಗಿದೆ ಎಂದರು. ಕಲಬುರಗಿಯಲ್ಲಿ ಗುರುವಾರ ರಾತ್ರಿ ತಮ್ಮ ಧ್ವನಿ ಹತ್ತಿಕ್ಕುವ ನಿಟ್ಟಿನಲ್ಲಿ ಮುತ್ತಿಗೆ ಹಾಕಿರುವ ಘಟನೆ ಮತ್ತಷ್ಟು ಧೈರ್ಯ ತರುವಂತೆ ಮಾಡಿದೆ. ಹೀಗಾಗಿ ತಮಗೆ ಧನ್ಯವಾದಗಳು ಎಂದು ಟಾಂಗ್‌ ನೀಡಿದ ಅವರು, 2019ರಲ್ಲಿ ಅಧಿಕಾರಕ್ಕೆ ಬರೋಲ್ಲ ಎನ್ನುವ ಹತಾಶೆಯಿಂದ ಈ ರೀತಿ ನಡೆದುಕೊಳ್ಳಲಾಗುತ್ತಿದೆ ಎಂದು ಟೀಕಿಸಿದರು.

ತಾವು ಹೋದ ಕಡೆ ಗಣ್ಯರ ಹೆಸರು ಬಳಸದಿರುವಂತೆ ತಾಕೀತು ಮಾಡಲಾಗುತ್ತಿದೆ. ಆದರೆ ಮಾನ-ಮರ್ಯಾದೆ ಹಾಗೂ ಯಾವುದೇ ವ್ಯಕ್ತಿತ್ವ ಇರದವರಿಗೆ ಹೆಸರು ಎಲ್ಲಿ ಇರುತ್ತೇ? ಕೋಮುವಾದ ಬಗ್ಗೆ ಮಾತನಾಡಿದರೆ ಇವರಿಗೇಕೆ ಸಿಟ್ಟು. ಕುಂಬಳಕಾಯಿ ಕಳ್ಳ ಎಂದರೆ ಇವರೇಕೆ ಹೆಗಲು ಮುಟ್ಟಿಕೊಳ್ಳುತ್ತಾರೆ ಎಂದು ವಾಗ್ಧಾಳಿ ನಡೆಸಿದರು. ಪ್ರಗತಿಪರ ಚಿಂತಕ ಅನಂತ ನಾಯಕ ಮಾತನಾಡಿ, ಇಂದು ರಾಜಕೀಯವೇ ಎಲ್ಲ ನಿರ್ಧಾರ ಮಾಡುತ್ತಿರುವಾಗ ನಾವೇಕೆ ರಾಜಕೀಯ ನಿರ್ಧಾರಗಳನ್ನು ತೆಗೆದುಕೊಳ್ಳುವಂತೆ ಆಗಬಾರದು ಎಂದು ಜನತೆಯನ್ನು ಪ್ರಶ್ನಿಸಿದರು.
 
ಕೇಂದ್ರೀಯ ವಿಶ್ವವಿದ್ಯಾಲಯ ಪ್ರಾಧ್ಯಾಪಕ ಡಾ| ಅಪ್ಪಗೆರೆ ಸೋಮಶೇಖರ್‌ ಮಾತನಾಡಿ, ಮಹಾತ್ಮಾಗಾಂಧಿಗಿಂತ ಡಾ| ಅಂಬೇಡ್ಕರ್‌ ನಿಜವಾದ ಅಹಿಂಸಾವಾದಿ. ಏಕೆಂದರೆ ಮಹಾತ್ಮಾಗಾಂಧಿ ಅವರು ಅಂಬೇಡ್ಕರ್‌ ಅವರಷ್ಟು ಹಿಂಸೆ ಹಾಗೂ ಅವಮಾನಕ್ಕೆ ಒಳಗಾಗಿಲ್ಲ. ನೋವು ತನ್ನೊಳಗೆ ತುಂಬಿಕೊಂಡು ಬಡಿದಾಡಿದರು ಎಂದರು. ಕೆ. ನೀಲಾ ಮಾತನಾಡಿದರು. 

ಜಯಂತ್ಯುತ್ಸವ ಸಮಿತಿ ಗೌರವಾಧ್ಯಕ್ಷ ಡಾ| ವಿಠ್ಠಲ ದೊಡ್ಡಮನಿ, ಸಮಿತಿ ಅಧ್ಯಕ್ಷರಾಗಿರುವ ಪಾಲಿಕೆ ಸದಸ್ಯ ರಾಜಕುಮಾರ ಕಪನೂರ, ಕಾರ್ಯಾಧ್ಯಕ್ಷ ಸುರೇಶ ಬಡಿಗೇರ್‌, ದಲಿತ ಸೇನೆಯ ಹಣಮಂತ ಯಳಸಂಗಿ, ಸುರೇಶ ಹಾದಿಮನಿ, ದೇವೇಂದ್ರ ಸಿರನೂರ, ಅರ್ಜುನ ಗಾಯಕವಾಡ ಮುಂತಾದವರಿದ್ದರು. ಮಂಜುನಾಥ ಹಿರೋಳಿ ನಿರೂಪಿಸಿದರು. 

Advertisement
Advertisement

Udayavani is now on Telegram. Click here to join our channel and stay updated with the latest news.

Next