ಹೊಸದಿಲ್ಲಿ : ಇಸ್ಲಾಮಾಬಾದ್ ನಲ್ಲಿ ನಡೆಯಲಿರುವ ಸಾರ್ಕ್ ಶೃಂಗ ಸಭೆಗೆ ಪಾಕಿಸ್ಥಾನ ನೀಡಿರುವ ಆಹ್ವಾನವನ್ನು ಭಾರತ ತಿರಸ್ಕರಿಸಿದೆ.
ಪಾಕಿಸ್ಥಾನದಲ್ಲಿ ನಡೆಯಲಿರುವ ಸಾರ್ಕ್ ಶೃಂಗದಲ್ಲಿ ಪಾಲ್ಗೊಳ್ಳದಿರುವ ತನ್ನ ನಿಲುವನ್ನು ಭಾರತ ಬದಲಾಯಿಸುವ ಸಾಧ್ಯತೆ ಇಲ್ಲ; ಅಂತೆಯೇ ಅದು ಇಸ್ಲಾಮಾಬಾದ್ ಸಾರ್ಕ್ ಶೃಂಗದಲ್ಲಿ ಪಾಲ್ಗೊಳ್ಳುವ ಸಾದ್ಯತೆಗಳು ಇಲ್ಲ ಎಂದು ಮೂಲಗಳು ಹೇಳಿವೆ.
ಇಸ್ಲಾಮಾಬಾದ್ ಸಾರ್ಕ್ ಶೃಂಗದಲ್ಲಿ ಭಾರತ ಪಾಲ್ಗೊಳ್ಳದಿರುವ ವಿದ್ಯಮಾನವನ್ನು ದೃಢೀಕರಿಸಿರುವ ವಿದೇಶ ವ್ಯವಹಾರಗಳ ಸಚಿವೆ ಸುಶ್ಮಾ ಸ್ವರಾಜ್ ಅವರು “ಭಯೋತ್ಪಾದನೆ ಮತ್ತು ಮಾತುಕತೆ ಜತೆಜತೆಗೆ ಸಾಗುವಂತಿಲ್ಲ’ ಎಂಬ ಭಾರತದ ನಿಲುವನ್ನು ಪುನರುಚ್ಚರಿಸಿದ್ದಾರೆ.
“ಕರ್ತಾರ್‌ಪುರ ಕಾರಿಡಾರ್ ಬಗ್ಗೆ ಭಾರತ ಸರಕಾರ ಈ ಹಿಂದೆ ಅನೇಕ ಬಾರಿ ಪಾಕಿಸ್ಥಾನವನ್ನು ಕೇಳಿಕೊಂಡಿತ್ತು. ಆದರೆ ಅದು ಸ್ಪಂದಿಸಿರಲಿಲ್ಲ. ಈಗ ಅದು ಧನಾತ್ಮಕವಾಗಿ ಸ್ಪಂದಿಸಿದೆ. ಆದರೆ ಇದರರ್ಥ ಉಭಯ ದೇಶಗಳ ನಡುವೆ ದ್ವಿಪಕ್ಷೀಯ ಮಾತುಕತೆಗಳು ಆರಂಭವಾಗುತ್ತದೆ ಎಂದಲ್ಲ. ಭಯೋತ್ಪಾದನೆ ಮತ್ತು ಮಾತುಕತೆಗಳು ಜತೆಜತೆಗೆ ಸಾಗಲಾರವು’ ಎಂದು ಸುಶ್ಮಾ ಸ್ವರಾಜ್ ಹೇಳಿದರು.
ಸಾರ್ಕ್ ಶೃಂಗ ಸಭೆಗಳನ್ನು ಸಾಮಾನ್ಯವಾಗಿ ಎರಡು ವರ್ಷಕ್ಕೊಮ್ಮೆ ನಡೆಸಲಾಗುತ್ತದೆ. ಇದರ ಆತಿಥೇಯತ್ವವು ಸದಸ್ಯರಿಗೆ ವರ್ಣಮಾಲೆ ಕ್ರಮಾಂಕದಲ್ಲಿ ಲಭಿಸುತ್ತದೆ. ಆತಿಥೇಯ ವಹಿಸುವ ಸದಸ್ಯ ರಾಷ್ಟ್ರವು ಆ ಸರದಿಯಲ್ಲಿ ಸಾರ್ಕ್ ಅಧ್ಯಕ್ಷತೆಯನ್ನು ಹೊಂದಿರುತ್ತದೆ.
ಹಿಂದಿನ ಸಾರ್ಕ್ ಶೃಂಗ ಸಭೆ 2014ರಲ್ಲಿ ನೇಪಾಲದ ಕಾಠ್ಮಂಡುವಿನಲ್ಲಿ ನಡೆದಿತ್ತು ಮತ್ತು ಪ್ರಧಾನಿ ಮೋದಿ ಅವರು ಅದರಲ್ಲಿ ಪಾಲ್ಗೊಂಡಿದ್ದರು.
2016ರ ಶೃಂಗ ಸಭೆ ಇಸ್ಲಾಮಾಬಾದ್ ನಲ್ಲಿ ನಡೆಯಬೇಕಿತ್ತು. ಆದರೆ ಆ ವರ್ಷ ಸೆ.18ರಂದು ಜಮ್ಮು ಕಾಶ್ಮೀರದ ಉರಿ ಯಲ್ಲಿನ ಭಾರತೀಯ ಸೇನಾ ಶಿಬಿರದ ಮೇಲೆ ಪಾಕ್ ಉಗ್ರರಿಂದ ದಾಳಿ ನಡೆದಿತ್ತು. ಉಗ್ರರ ದಾಳಿಗೆ 19 ಮಂದಿ ಭಾರತೀಯ ಯೋಧರು ಬಲಿಯಾಗಿದ್ದರು. ಆ ಸನ್ನಿವೇಶದಲ್ಲಿ ತನಗೆ ಸಾರ್ಕ್ ಶೃಂಗದಲ್ಲಿ ಪಾಲ್ಗೊಳ್ಳಲು ಅಸಾಧ್ಯವೆಂದು ಭಾರತ ಹೇಳಿತ್ತಲ್ಲದೆ ಪಾಕಿಸ್ಥಾನದ ಮೇಲೆ ರಾಜತಾಂತ್ರಿಕ ಒತ್ತಡವನ್ನು ಹೆಚ್ಚಿಸಿತ್ತು.