ನವದೆಹಲಿ: ಭಾರತದಲ್ಲಿ ಕೋವಿಡ್ 19 ಸೋಂಕು ಪ್ರಕರಣ ಸತತವಾಗಿ ಇಳಿಕೆಯಾಗುತ್ತಿದ್ದು, ಕಳೆದ 24ಗಂಟೆಗಳಲ್ಲಿ 86,498 ಕೋವಿಡ್ ಸೋಂಕು ಪ್ರಕರಣ ವರದಿಯಾಗಿದೆ. ಅಲ್ಲದೇ ಇದು ಕಳೆದ 66ದಿನಗಳ ಬಳಿಕ ಪತ್ತೆಯಾದ ಅತೀ ಕಡಿಮೆ ಪ್ರಮಾಣದ ಪ್ರಕರಣವಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಂಗಳವಾರ(ಜೂನ್ 08) ಬಿಡುಗಡೆಗೊಳಿಸಿರುವ ಅಂಕಿಅಂಶದಲ್ಲಿ ತಿಳಿಸಿದೆ.
ಇದನ್ನೂ ಓದಿ:ಇಂಗ್ಲೆಂಡ್ ನ ಮತ್ತೋರ್ವ ಆಟಗಾರನ ಮೇಲೆ ರೇಸಿಸ್ಟ್ ಟ್ವೀಟ್ ತೂಗುಗತ್ತಿ! ಇಸಿಬಿಯಿಂದ ತನಿಖೆ
ಕಳೆದ 63 ದಿನಗಳ ಬಳಿಕ ಇದೇ ಮೊದಲ ಬಾರಿಗೆ ಒಂದು ಲಕ್ಷಕ್ಕಿಂತ (86,498) ಕಡಿಮೆ ಕೋವಿಡ್ ಪ್ರಕರಣ ಪತ್ತೆಯಾಗಿದೆ. ಈ ನಿಟ್ಟಿನಲ್ಲಿ ವಾರದ ಪಾಸಿಟಿವಿಟಿ ದರ ಪ್ರಸ್ತುತ 5.94ರಷ್ಟಿದ್ದು, ದಿನದ ಪಾಸಿಟಿವಿಟಿ ದರ 4.62ಕ್ಕೆ ಕುಸಿದಿರುವುದಾಗಿ ವರದಿ ವಿವರಿಸಿದೆ.
ಭಾರತದಲ್ಲಿ ಒಟ್ಟು ಕೋವಿಡ್ ಸೋಂಕು ಪ್ರಕರಣಗಳ ಸಂಖ್ಯೆ 2,89,96,473ಕ್ಕೆ ಏರಿಕೆಯಾಗಿದ್ದು, ಇದರಲ್ಲಿ 13,03,702 ಸಕ್ರಿಯ ಕೋವಿಡ್ ಪ್ರಕರಣಗಳಿವೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಬಿಡುಗಡೆ ಮಾಡಿರುವ ಅಂಕಿ ಅಂಶದಲ್ಲಿ ತಿಳಿಸಿದೆ.
ಕಳೆದ 24ಗಂಟೆಯಲ್ಲಿ ಕೋವಿಡ್ ಸೋಂಕಿನಿಂದ 2,123 ಮಂದಿ ಸಾವನ್ನಪ್ಪಿದ್ದು, ಇದರೊಂದಿಗೆ ದೇಶದಲ್ಲಿ ಒಟ್ಟು ಕೋವಿಡ್ ಸೋಂಕಿನಿಂದ ಸಾವನ್ನಪ್ಪಿದವರ ಸಂಖ್ಯೆ 3,51,309ಕ್ಕೆ ಏರಿಕೆಯಾಗಿದೆ.
ಕಳೆದ 24ಗಂಟೆಗಳಲ್ಲಿ 1,82,282 ಮಂದಿ ಕೋವಿಡ್ ಸೋಂಕಿನಿಂದ ಗುಣಮುಖರಾಗಿದ್ದಾರೆ. ಇದರೊಂದಿಗೆ ದೇಶದಲ್ಲಿ ಕೋವಿಡ್ ಸೋಂಕಿನಿಂದ ಚೇತರಿಸಿಕೊಂಡವರ ಸಂಖ್ಯೆ 2.73 ಕೋಟಿಗೆ ಏರಿಕೆಯಾಗಿದೆ. ಅಲ್ಲದೇ ಇದೀಗ ದೇಶದಲ್ಲಿ ಚೇತರಿಕೆ ಪ್ರಮಾಣ ಶೇ.94.29ಕ್ಕೆ ಏರಿಕೆಯಾಗಿದೆ ಎಂದು ವರದಿ ತಿಳಿಸಿದೆ.