ನವದೆಹಲಿ: ಭಾರತದಲ್ಲಿ ಕಳೆದ 24ಗಂಟೆಗಳಲ್ಲಿ 36,571 ಹೊಸ ಕೋವಿಡ್ ಪ್ರಕರಣಗಳು ಪತ್ತೆಯಾಗಿದ್ದು, 36,555 ಮಂದಿ ಕೋವಿಡ್ ನಿಂದ ಚೇತರಿಸಿಕೊಂಡಿರುವುದಾಗಿ ಕೇಂದ್ರ ಆರೋಗ್ಯ ಸಚಿವಾಲಯ ಶುಕ್ರವಾರ (ಆಗಸ್ಟ್ 20) ಬಿಡುಗಡೆ ಮಾಡಿರುವ ಅಂಕಿ ಅಂಶದಲ್ಲಿ ತಿಳಿಸಿದೆ.
ಇದನ್ನೂ ಓದಿ:ಶನಿ ದೋಷದ ಬಗ್ಗೆ ಜನರಲ್ಲಿ ಅಪನಂಬಿಕೆಗಳೇ ಹೆಚ್ಚು…ಶುಭ, ಅಶುಭ ಫಲಗಳಿಗೆ ಕಾರಣವೇನು?
ದೇಶದಲ್ಲಿ ಈವರೆಗೆ ಕೋವಿಡ್ ನಿಂದ ಒಟ್ಟು 3,15,61,635 ಮಂದಿ ಗುಣಮುಖರಾಗಿದ್ದಾರೆ. ಕಳೆದ 24 ಗಂಟೆಗಳಲ್ಲಿ ಕೋವಿಡ್ ಸೋಂಕಿನಿಂದ 540 ಮಂದಿ ಸಾವನ್ನಪ್ಪಿದ್ದು, ಈವರೆಗೆ ಒಟ್ಟು 4,33,589 ಮಂದಿ ಕೋವಿಡ್ ನಿಂದ ಸಾವನ್ನಪ್ಪಿದ್ದಾರೆ.
ಭಾರತದಲ್ಲಿ ಸಕ್ರಿಯ ಕೋವಿಡ್ ಪ್ರಕರಣಗಳ ಸಂಖ್ಯೆ 3,63,605ಕ್ಕೆ ಇಳಿಕೆಯಾಗಿದೆ. ಇದು ಕಳೆದ 150 ದಿನಗಳ ಬಳಿಕದ ಕನಿಷ್ಠ ಪ್ರಮಾಣದ್ದಾಗಿದೆ. 2020ರ ಮಾರ್ಚ್ ಬಳಿಕ ಇದೀಗ ದೇಶದಲ್ಲಿ ಶೇ.97.54ರಷ್ಟು ಚೇತರಿಕೆ ಪ್ರಮಾಣವಿದೆ ಎಂದು ಅಂಕಿಅಂಶ ತಿಳಿಸಿದೆ.
ದೇಶದಲ್ಲಿನ ಪ್ರತಿದಿನ ಪಾಸಿಟಿವಿಟಿ ದರ ಶೇ.1.94ಕ್ಕೆ ಇಳಿಕೆಯಾಗಿದ್ದು, ವಾರದ ಪಾಸಿಟಿವಿಟಿ ದರವೂ ಕೂಡಾ ಶೇ.1.94ಕ್ಕೆ ಇಳಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ. ಆಗಸ್ಟ್ 19ರವರೆಗೆ 50,26,99,702 ಸ್ಯಾಂಪಲ್ಸ್ ಪರೀಕ್ಷಿಸಲಾಗಿದೆ ಎಂದು ಐಸಿಎಂಆರ್ ಮಾಹಿತಿ ನೀಡಿದೆ.