ನವದೆಹಲಿ: ಭಾರತದಲ್ಲಿ ಕಳೆದ 24ಗಂಟೆಯಲ್ಲಿ 30,757 ಕೋವಿಡ್ 19 ಪ್ರಕರಣ ಪತ್ತೆಯಾಗಿದ್ದು, 541 ಮಂದಿ ಕೋವಿಡ್ ಸೋಂಕಿನಿಂದ ಸಾವನ್ನಪ್ಪಿದ್ದಾರೆ. ಇದರೊಂದಿಗೆ ದೇಶದಲ್ಲಿ ಕೋವಿಡ್ ನಿಂದ ಸಾವನ್ನಪ್ಪಿರುವವರ ಒಟ್ಟು ಸಂಖ್ಯೆ 5,10,413ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಗುರುವಾರ (ಫೆ.17) ಬಿಡುಗಡೆಗೊಳಿಸಿರುವ ಅಂಕಿಅಂಶದಲ್ಲಿ ತಿಳಿಸಿದೆ.
ಇದನ್ನೂ ಓದಿ:ಉತ್ತರಪ್ರದೇಶ: ಮದುವೆ ಮನೆಯಲ್ಲಿ ಹಳದಿ ಶಾಸ್ತ್ರದ ಸಂಭ್ರಮ, ಬಾವಿಗೆ ಬಿದ್ದು 13 ಮಹಿಳೆಯರ ಸಾವು
24ಗಂಟೆಯ ಅವಧಿಯಲ್ಲಿ 37,322 ಸಕ್ರಿಯ ಕೋವಿಡ್ ಪ್ರಕರಣಗಳ ಸಂಖ್ಯೆ ಇಳಿಕೆಯಾಗಿದೆ. ಭಾರತದಲ್ಲಿನ ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 3,32,918ಕ್ಕೆ ತಲುಪಿದೆ. ಒಂದೇ ದಿನದಲ್ಲಿ 67,538 ಮಂದಿ ಕೋವಿಡ್ ಸೋಂಕಿನಿಂದ ಗುಣಮುಖರಾಗಿದ್ದಾರೆ.
ದೇಶಾದ್ಯಂತ ಈವರೆಗೆ ಕೋವಿಡ್ ಸೋಂಕಿನಿಂದ ಒಟ್ಟು 4,19,10,984 ಮಂದಿ ಚೇತರಿಸಿಕೊಂಡಿದ್ದಾರೆ. ದೇಶದಲ್ಲಿನ ಕೋವಿಡ್ 19 ಚೇತರಿಕೆ ದರ ಶೇ.98.03ರಷ್ಟಿದೆ ಎಂದು ಸಚಿವಾಲಯ ತಿಳಿಸಿದೆ.
ಪ್ರತಿದಿನದ ಪಾಸಿಟಿವಿಟಿ ದರ ಶೇ.2.61ಕ್ಕೆ ಇಳಿಕೆಯಾಗಿದ್ದು, ವಾರದ ಪಾಸಿಟಿವಿಟಿ ದರ ಶೇ.3.04ರಷ್ಟಿದೆ. ಅಲ್ಲದೇ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶದಲ್ಲಿ ಬಳಕೆಯಾಗದ ಸುಮಾರು 11.73 ಕೋಟಿಗಿಂತಲೂ ಅಧಿಕ ಕೋವಿಡ್ ಲಸಿಕೆ ಇದ್ದಿರುವುದಾಗಿ ಕೇಂದ್ರ ಸರಕಾರ ಗುರುವಾರ ತಿಳಿಸಿದೆ.