ನವದೆಹಲಿ: ವಿಶ್ವದಲ್ಲೇ ಅತಿ ಮಲಿನ ದೇಶ ಭಾರತ ಎಂಬ ಕುಖ್ಯಾತಿ ಈಗ ಭಾರತಕ್ಕೆ ಬಂದು ಅಂಟಿಕೊಂಡಿದ್ದು, 2015ರಲ್ಲಿ ಮಾ ಲಿನ್ಯ ಮಾತ್ರದಿಂದಲೇ ಭಾರತದಲ್ಲಿ ಸುಮಾರು 25 ಲಕ್ಷ ಮಂದಿ ಸಾವಿಗೀಡಾಗಿದ್ದಾರೆಂದು ಸಮೀಕ್ಷಾ ವರದಿಯೊಂದು ಹೇಳಿದೆ.
ಕ್ಷಿಪ್ರ ಕೈಗಾರಿಕಾ ಬೆಳವಣಿಗೆಗೆ ಆಸ್ಪದ ನೀಡಿರುವ ಭಾರತ, ಚೀನಾ, ಪಾಕಿಸ್ತಾನ, ಬಾಂಗ್ಲಾದೇಶ, ಮಡಗಾಸ್ಕರ್ ಹಾಗೂ ಕೀನ್ಯಾ ದಂತಹ ರಾಷ್ಟ್ರಗಳಲ್ಲಿ ಸಮೀಕ್ಷೆ ನಡೆಸಿರುವ “ದ ಲಾರ್ಸನ್ ಕಮೀಷನ್ ಆನ್ ಪೊಲ್ಯೂಷನ್ ಆ್ಯಂಡ್ ಹೆಲ್ತ್’ ಸಂಸ್ಥೆಯು ಈ ಸಮೀಕ್ಷಾ ವರದಿ ಬಿಡುಗಡೆ ಮಾಡಿದೆ. ಈ ಸಮೀಕ್ಷೆಯು 2015ರಲ್ಲೇ ನಡೆಸಲಾಗಿದ್ದರೂ, ಇದರ ಆಧಾರದ ಮೇಲೆ, ಪ್ರಸ್ತುತ ಸನ್ನಿವೇಶದಲ್ಲಿ ವಿಶ್ವ ಮಟ್ಟದಲ್ಲಿ ಆಗುತ್ತಿರುವ ಮಾಲಿನ್ಯದ ಸಾವುಗಳ ವಾರ್ಷಿಕ ಸಂಖ್ಯೆ 90 ಲಕ್ಷದಷ್ಟಿರಬಹುದು ಎಂದು ಅಂದಾಜಿಸಲಾಗಿದೆ.
ವರದಿ ಪ್ರಕಾರ, 2015ರಲ್ಲಿ ವಿಶ್ವದಾದ್ಯಂತ ವಾಯು ಮಾಲಿನ್ಯದಿಂದ 65 ಲಕ್ಷ ಮಂದಿ ಮೃತಪಟ್ಟಿದ್ದಾರೆ. ಇನ್ನು ಕಲುಷಿತ ನೀರು ಕುಡಿದ ಪರಿಣಾಮ 18 ಲಕ್ಷ ಮಂದಿ ಮೃತರಾಗಿದ್ದರೆ, 80 ಸಾವಿರ ಮಂದಿ ತಮ್ಮ ಕರ್ತವ್ಯ ಸ್ಥಳಗಳಲ್ಲಿನ ಕಲುಷಿತ ವಾತಾವರಣದ ಪ್ರಭಾವದಿಂದ ಸಾವಿಗೀಡಾಗಿದ್ದಾರೆ. ಇದು ಯುದ್ಧ, ಏಡ್ಸ್, ಕ್ಯಾನ್ಸರ್‌ಗಳಿಂದ ಸಂಭ ವಿಸುವ ಒಟ್ಟು ವಾರ್ಷಿಕ ಸಾವಿನ ಸಂಖ್ಯೆಗಿಂ ತಲೂ ಅತ್ಯಧಿಕ ಎಂದಿದೆ ವರದಿ.
ಭಾರತದ ಬಗ್ಗೆ ಹೇಳುವುದಾದರೆ, 2015ರಲ್ಲಿ ಇಲ್ಲಿ ಮಾಲಿನ್ಯದಿಂದ ಮೃತ ಪಟ್ಟವರ ಸಂಖ್ಯೆ 25 ಲಕ್ಷ. ಇವರಲ್ಲಿ ವಾಯು ಮಾಲಿನ್ಯದಿಂದ 18 ಲಕ್ಷ, ಜಲ ಮಾಲಿನ್ಯದಿಂದ 64 ಸಾವಿರ ಮಂದಿ ಸಾವಿಗೀಡಾಗಿದ್ದಾರೆ. ಭಾರತದಲ್ಲಿ ಸಂಭವಿಸುವ ಪ್ರತಿ 4 ಅಕಾಲಿಕ ಸಾವುಗಳಲ್ಲಿ ಒಂದು ಸಾವು ಮಾಲಿನ್ಯದಿಂದಲೇ ಆಗುತ್ತಿದೆ ಎಂದು ಹೇಳಿರುವುದು ಇಲ್ಲಿನ ಭಯಾನಕ ವಾತಾವರಣವನ್ನು ಅನಾವರಣ ಮಾಡಿದೆ.
ಏಷ್ಯಾದ ಮತ್ತೂಂದು ಪ್ರಮುಖ ರಾಷ್ಟ್ರವಾದ ಚೀನಾ (1.8 ಮಿಲಿಯನ್) ಈ ಪಟ್ಟಿಯ 2ನೇ ಸ್ಥಾನದಲ್ಲಿದೆ. ಇದೇ ಪಟ್ಟಿಯ ಟಾಪ್ 10ರಲ್ಲಿ ಪ್ರತಿಷ್ಠಿತ ರಾಷ್ಟ್ರಗಳಾದ ರಷ್ಯಾ, ಅಮೆರಿಕಾ, ಯುಕೆ, ಜಪಾನ್ ಕೂಡ ಸೇರಿವೆ.