ನವದೆಹಲಿ: ಮಾರಣಾಂತಿಕ ಕೋವಿಡ್ 19 ಸೋಂಕಿನ ವಿರುದ್ಧ “ಮೇಡ್ ಇನ್ ಇಂಡಿಯಾ” ಲಸಿಕೆಯನ್ನು ಅಭಿವೃದ್ದಿಪಡಿಸಿದ ಹಾಗೂ ಸೋಂಕು ಹರಡಿದ ಒಂದು ವರ್ಷದೊಳಗೆ ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಲು ಇತರ ಕ್ರಮಗಳನ್ನು ಹೆಚ್ಚಿಸಿದ ಭಾರತೀಯ ವಿಜ್ಞಾನಿಗಳ ಸಾಧನೆಯನ್ನು ಪ್ರಧಾನಿ ನರೇಂದ್ರ ಮೋದಿ ಶ್ಲಾಘಿಸಿದ್ದಾರೆ.
ಇದನ್ನೂ ಓದಿ:ಮೈಸೂರಿನ ಐಎಎಸ್ ಅಧಿಕಾರಿಗಳ ಸಂಘರ್ಷ ನನ್ನ ಕೈ ಮೀರಿದೆ: ಅಸಹಾಯಕತೆ ತೋರಿದ ಸಚಿವ ಸೋಮಶೇಖರ್
ವಿಡಿಯೋ ಕಾನ್ಫರೆನ್ಸ್ ಮೂಲಕ ಸಿಎಸ್ ಐಆರ್ (ಕೌನ್ಸಿಲ್ ಆಫ್ ಸೈಂಟಿಫಿಕ್ ಆ್ಯಂಡ್ ಇಂಡಸ್ಟ್ರಿಯಲ್ ರಿಸರ್ಚ್) ಸೊಸೈಟಿಯ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಹಿಂದಿನ ಶತಮಾನದ ಭಾರತದ ಅನುಭವವನ್ನು ಉಲ್ಲೇಖಿಸಿ ವಿದೇಶದಲ್ಲಿ ಸಾಧಿಸಿದ ಆವಿಷ್ಕಾರಗಳ ಮೇಲೆ ಕೈಯಾಡಿಸಲು ಕಾಯುತ್ತಲೇ ಇದ್ದೆ. ಆದರೆ ನಮ್ಮ ವಿಜ್ಞಾನಿಗಳು ಈಗ ತಾವೇ ಖುದ್ದಾಗಿ ಭಾರತದಲ್ಲಿಯೇ ಕಾರ್ಯನಿರ್ವಹಿಸುವ ಮೂಲಕ ವಿದೇಶದ ಅವಲಂಬನೆ ದೂರ ಮಾಡಿದ್ದಾರೆ ಎಂದು ಹೇಳಿದರು.
ಕೃಷಿಯಿಂದ ಖಗೋಳ ವಿಜ್ಞಾನ, ವಿಪತ್ತು ನಿರ್ವಹಣೆ, ರಕ್ಷಣಾ ತಂತ್ರಜ್ಞಾನ, ಲಸಿಕೆ ಸೇರಿದಂತೆ ಪ್ರತಿಯೊಂದು ಕ್ಷೇತ್ರದಲ್ಲಿಯೂ ಭಾರತ ಸ್ವಾವಲಂಬಿಯಾಗಲು ಬಯಸುತ್ತದೆ. ಇದರೊಂದಿಗೆ ಸುಸ್ಥಿರ ಅಭಿವೃದ್ಧಿಯಿಂದ ಭಾರತ ಜಗತ್ತನ್ನು ಮುನ್ನಡೆಸಲಿದೆ ಎಂದು ಪ್ರಧಾನಿ ಹೇಳಿದರು.
ಶತಮಾನಗಳ ನಂತರ ಇಡೀ ಜಗತ್ತು ಅತೀ ದೊಡ್ಡ ಸವಾಲನ್ನು ಎದುರಿಸುವಂತಹ ಸಂದರ್ಭದಲ್ಲಿ ವಿಜ್ಞಾನಿಗಳ ಕೊಡುಗೆಯನ್ನು ಪ್ರಧಾನಿ ನರೇಂದ್ರ ಮೋದಿ ಶ್ಲಾಘಿಸಿದರು. ಕೇವಲ ಒಂದು ವರ್ಷದೊಳಗೆ ನಮ್ಮ ವಿಜ್ಞಾನಿಗಳು ಲಸಿಕೆಯನ್ನು ಸಿದ್ಧಪಡಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದರು.