ಮುಂಬೈ: ವಿಕಿಪೀಡಿಯಾ ಅಂತರ್ಜಾಲದಲ್ಲಿ ಜಗತ್ತಿನ ಅತಿ ದೊಡ್ಡ ಮಾಹಿತಿ ಮೂಲ. ಅದನ್ನು ಲಕ್ಷಾಂತರ ಮಂದಿ ಓದುತ್ತಾರೆ. ಲಕ್ಷಾಂತರ ಲೇಖನಗಳು, ನಂಬಲರ್ಹ ಸಂಗತಿಗಳು ಅಲ್ಲಿವೆ. ಅಂತಹ ವಿಕಿಪೀಡಿಯಾ ಆಗಾಗ ತಪ್ಪು ಮಾಡುತ್ತದೆ. ಅದೂ ಅಂತಿಂತಹ ತಪ್ಪಲ್ಲ ಬೆಚ್ಚಿ ಬೀಳುವಂತಹ ತಪ್ಪು. ಈಗ ಆಗಿದ್ದಾದರೂ ಏನು ಎಂದು ಕೇಳುತ್ತೀರಾ? ಭಾರತ-ಇಂಗ್ಲೆಂಡ್ ಮಹಿಳಾ ವಿಶ್ವಕಪ್ ಕ್ರಿಕೆಟ್ ಫೈನಲ್ ಪಂದ್ಯ ನಡೆದಿದ್ದು ಜು.23ರ ಭಾನುವಾರ. ಅದಕ್ಕೂ ಎರಡು ಮುನ್ನವೇ ಈ ಕೂಟದ ಚಾಂಪಿಯನ್ ಭಾರತ, ಇಂಗ್ಲೆಂಡ್ ರನ್ನರ್ ಅಪ್ ಎಂಬ ಮಾಹಿತಿ ವಿಕಿಪೀಡಿಯಾದಲ್ಲಿ ಪ್ರಕಟವಾಗಿದೆ. ಈ ಬಗ್ಗೆ ಕೆಲ ವರದಿಗಳಾದ ನಂತರವೂ ವಿಕಿಪೀಡಿಯಾ ಮಾಹಿತಿಯನ್ನು ತಿದ್ದಲು ಹೋಗಿಲ್ಲ. ಬದಲಿಗೆ ವಿಶ್ವಕಪ್ ಪಂದ್ಯ ನಡೆದ
ಭಾನುವಾರವೂ ಅದು ಯಥಾಸ್ಥಿತಿಯಲ್ಲೇ ಇತ್ತು.
ಇದುವರೆಗೆ ನಡೆದ ಎಲ್ಲ ಮಹಿಳಾ ವಿಶ್ವಕಪ್ ಕ್ರಿಕೆಟ್ ಕುರಿತ ಸಮಗ್ರ ಮಾಹಿತಿಯಿರುವ “ವುಮೆನ್ ಕ್ರಿಕೆಟ್ ವರ್ಲ್ಡ್ ಕಪ್’ ಎಂಬ ವಿಕಿಪೀಡಿಯಾ ಪುಟದಲ್ಲಿ ಇಂತಹದೊಂದು ದೊಡ್ಡ ತಪ್ಪಾಗಿದೆ. ಯಾರು ಬೇಕಾದರೂ ವಿಕಿಪೀಡಿಯಾದಲ್ಲಿ ಮಾಹಿತಿ ಗಳನ್ನು ತಿದ್ದಬಹುದು, ಪ್ರಕಟಿಸ ಬಹುದು ಎಂಬ ಸುಲಭ ಅವಕಾಶ ವಿರುವುದರಿಂದ ಈ ತಪ್ಪು ಸಂಭವಿಸಿದೆ. ಇಷ್ಟಾದರೂ ವಿಕಿಪೀಡಿಯಾದ ಗಮನಕ್ಕೆ ಬಂದಿಲ್ಲ, ಅದು ತಿದ್ದಿಕೊಳ್ಳಲಿಲ್ಲ ಎನ್ನುವುದನ್ನು
ಗಮನಿಸಿದಾಗ ಅದರ ವಿಶ್ವಸಾರ್ಹತೆ ಕುರಿತೇ ಪ್ರಶ್ನೆಯೇಳುತ್ತದೆ. ಅತ್ಯಂತ ಪ್ರಮುಖ ಸಂದರ್ಭಗಳಲ್ಲಿ ಅದನ್ನು ನಂಬುವುದು ಹೇಗೆ ಎಂಬ ಪ್ರಶ್ನೆಯೇಳುತ್ತದೆ.