Advertisement

31 ಅಂಚೆ ಶಾಖೆಗಳಲ್ಲಿ ಐಪಿಪಿಬಿಗೆ ಚಾಲನೆ

06:30 AM Sep 01, 2018 | |

ಬೆಂಗಳೂರು: ಬ್ಯಾಂಕಿಂಗ್‌ ಸೇವೆ ವಂಚಿತ ಸಾಮಾನ್ಯರಿಗೂ ಸರಳವಾಗಿ ಬ್ಯಾಂಕಿಂಗ್‌ ಸೇವೆ ಕಲ್ಪಿಸುವ ಅಂಚೆ ಇಲಾಖೆಯ “ಭಾರತೀಯ ಅಂಚೆ ಪಾವತಿ ಬ್ಯಾಂಕ್‌” (ಇಂಡಿಯಾ ಪೋಸ್ಟ್‌ ಪೇಮೆಂಟ್ಸ್‌ ಬ್ಯಾಂಕ್‌- ಐಪಿಪಿಬಿ) ಸೇವೆಗೆ ದೇಶಾದ್ಯಂತ ಶನಿವಾರ ಚಾಲನೆ ಸಿಗಲಿದ್ದು, ರಾಜ್ಯದಲ್ಲಿ 31 ಜಿಲ್ಲಾ ಶಾಖೆಗಳಲ್ಲಿನ 155 ಸೇವಾ ಕೇಂದ್ರಗಳಲ್ಲಿ ಕಾರ್ಯಾರಂಭವಾಗಲಿದೆ.

Advertisement

ಸಾಮಾನ್ಯ ಜನ ಸರಳವಾಗಿ ಕನಿಷ್ಠ ಠೇವಣಿಯಿಲ್ಲದೆ ಶೂನ್ಯ ಶಿಲ್ಕುವಿನೊಂದಿಗೆ ಕೇವಲ ಆಧಾರ್‌, ಮೊಬೈಲ್‌ ಸಂಖ್ಯೆ ಆಧರಿಸಿ ಖಾತೆ ತೆರೆದು ಬ್ಯಾಂಕಿಂಗ್‌ ಸೇವೆ ಪಡೆಯುವ ಪರಿಕಲ್ಪನೆಯ ಸೇವೆಗೆ ಪ್ರಧಾನಿ ಮೋದಿ ದೆಹಲಿಯಲ್ಲಿ ಶನಿವಾರ ಚಾಲನೆ ನೀಡಲಿದ್ದಾರೆ.

ರಾಜ್ಯದ 31 ಶಾಖೆಗಳಲ್ಲಿ ಶನಿವಾರ ಪಾವತಿ ಬ್ಯಾಂಕಿಂಗ್‌ ಸೇವೆ ಆರಂಭವಾಗಲಿದ್ದು, ಡಿಸೆಂಬರ್‌ ವೇಳೆಗೆ ರಾಜ್ಯದ
ಎಲ್ಲ 9000 ಸೇವಾ ಕೇಂದ್ರಗಳಲ್ಲೂ ಐಪಿಪಿಬಿ ಸೇವೆ ಶುರುವಾಗಲಿದೆ.

ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಕರ್ನಾಟಕ ವೃತ್ತದ ಚೀಫ್ ಪೋಸ್ಟ್‌ ಮಾಸ್ಟರ್‌ ಜನರಲ್‌ ಡಾ. ಚಾರ್ಲ್ಸ್‌ ಲೋಬೋ, ದೇಶಾದ್ಯಂತ 1.55 ಲಕ್ಷ ಅಂಚೆ ಕಚೇರಿ ಶಾಖೆಗಳಿದ್ದು, ಈ ಪೈಕಿ 650 ಪ್ರಮುಖ (ಜಿಲ್ಲಾ) ಶಾಖೆಗಳಲ್ಲಿ ಶನಿವಾರ ಐಪಿಪಿಬಿ ಸೇವೆ ಶುರುವಾಗಲಿದೆ.ದೇಶಾದ್ಯಂತ 3250 ಸೇವಾ ಕೇಂದ್ರಗಳಲ್ಲಿ ಸೇವೆ ಆರಂಭವಾಗಲಿದೆ ಎಂದರು.

ಐಪಿಪಿಬಿ ಖಾತೆಯಲ್ಲಿ ಗರಿಷ್ಠ 1 ಲಕ್ಷ ರೂ.ವರೆಗೆ ಠೇವಣಿಗೆ ಅವಕಾಶವಿದ್ದು, ತ್ತೈಮಾಸಿಕ ಶೇ.4ರಷ್ಟು ಬಡ್ಡಿ ಸಿಗಲಿದೆ. ಐಪಿಪಿಬಿ ಖಾತೆಯನ್ನು ಅಂಚೆ ಕಚೇರಿ ಉಳಿತಾಯ ಖಾತೆಗೆ ಜೋಡಣೆ ಮಾಡುವುದರಿಂದ 1 ಲಕ್ಷಕ್ಕಿಂತ ಹೆಚ್ಚು ಮೊತ್ತವಿದ್ದರೆ ಹೆಚ್ಚುವರಿ ಮೊತ್ತ ಉಳಿತಾಯ ಖಾತೆಗೆ ವರ್ಗಾವಣೆಯಾಗುತ್ತದೆ ಎಂದು ವಿವರಿಸಿದರು.

Advertisement

“ಮನೆ ಮನೆಗೆ ತಮ್ಮ ಬ್ಯಾಂಕ್‌’: ವಿಮಾನಯಾನ ಟಿಕೆಟ್‌, ರೈಲ್ವೆ ಟಿಕೆಟ್‌, ಬಸ್‌ ಟಿಕೆಟ್‌, ಬುಕ್‌ ಮೈ ಶೋ,ಟೆಲಿಕಾಂ ಬಿಲ್‌, ಬೆಸ್ಕಾಂ, ಜಲಮಂಡಳಿ, ಬಿಎಸ್‌ಎನ್‌ ಎಲ್‌ ಸೇರಿ ಇತರೆ ಸೇವಾ ಬಿಲ್‌ ಪಾವತಿಗೆ ಅವಕಾಶವಿರಲಿದೆ. ಆನ್‌ಲೈನ್‌ ಎನ್‌ಇಎಫ್ಟಿ, ಆರ್‌ಟಿಜಿಎಸ್‌, ಐಎಂಪಿಎಸ್‌ ಸೌಲಭ್ಯವೂ ಇದೆ. ಫ‌ಲಾನುಭವಿಗೆ ನೇರ ಪಾವತಿ (ಡಿಬಿಟಿ) ಕಾರ್ಯಕ್ಕೂ
ಬಳಕೆಯಾಗಲಿದೆ.

ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆ, ಮಾಸಾಶನ,ಸಹಾಯಧನ, ಪಿಂಚಣಿ, ವಿದ್ಯಾರ್ಥಿ ವೇತನ, ಸಬ್ಸಿಡಿ ಇತರೆ ಆರ್ಥಿಕ ನೆರವನ್ನು ನೇರವಾಗಿ ಐಪಿಪಿಬಿ ಖಾತೆಗೆ ವರ್ಗಾಹಿಸಲು ಅವಕಾಶವಿರಲಿದೆ ಹಾಗಾಗಿ ಇದನ್ನು “ಮನೆ ಮನೆಗೆ ತಮ್ಮ ಬ್ಯಾಂಕ್‌’ (ಆಪ್‌ ಕಾ ಬ್ಯಾಂಕ್‌ ಆಪೆR ದ್ವಾರ್‌) ಎನ್ನಬಹುದು ಎಂದರು.

ಸರ್ಕಾರದ ಸೇವೆಗಳಿಗೂ ಬಳಸಿಕೊಳ್ಳುವಂತೆ ಕೋರಿ ರಾಜ್ಯ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ.ಬಿಬಿಎಂಪಿ ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆ ಪಾವತಿಗೂ ಸೇವೆ ಬಳಸಿಕೊಳ್ಳುವತ್ತ ಮಾತುಕತೆ ನಡೆಸಲು ಚಿಂತಿಸಲಾಗಿದೆ. ನಾನಾ ಸಂಸ್ಥೆಗಳಿಗೆ ಒದಗಿಸುವ ಸೇವೆಗೆ ಸೇವಾ ಶುಲ್ಕ ಪಡೆಯಲಾಗುವುದು ಎಂದು ತಿಳಿಸಿದರು.

ಶೇ. 100ರಷ್ಟು ಸರ್ಕಾರದ ಬ್ಯಾಂಕ್‌: ಐಪಿಪಿಬಿ ಸಂಪೂರ್ಣ ಕೇಂದ್ರ ಸರ್ಕಾರದ ಪಾವತಿ ಬ್ಯಾಂಕ್‌ ಆಗಿದೆ. ಅದಕ್ಕೆಂದೇ ಈ ಸೇವೆಗಾಗಿ ಒಟ್ಟು 1435 ಕೋಟಿ ರೂ. ಅನುದಾನ ನೀಡಿದೆ. 3 ವರ್ಷಗಳ ಕಾರ್ಯ ನಿರ್ವಹಣೆ ಪರಿಗಣಿಸಿ ಆರ್‌ಬಿಐ ಪೂರ್ಣ ಪ್ರಮಾಣದ ಬ್ಯಾಂಕ್‌ ಆಗಿ ಪರಿವರ್ತಿಸಲು ಅನುಮತಿ ನೀಡಬಹುದು ಎಂದು ಮಾಹಿತಿ ನೀಡಿದರು.

ಅಂಚೆ ಕಚೇರಿಗಳಲ್ಲಿ ಈಗಾಗಲೇ 26 ಲಕ್ಷ ಉಳಿತಾಯ ಖಾತೆಗಳಿವೆ. ತಿಂಗಳಲ್ಲಿ ಈ ಖಾತೆಗಳಿಗೆ ಐಪಿಪಿಬಿ ಸೇವೆ ಸಂಪರ್ಕಿಸಲಾಗುವುದು. ಇನ್ನೂ 14 ಲಕ್ಷ ಉಳಿತಾಯ ಖಾತೆ ಮಾಡಿಸುವ ಗುರಿ ಇದೆ. ಆ. 20ರಿಂದ ಐಪಿಪಿಬಿ ಖಾತೆ ತೆರೆಯಲು ಅವಕಾಶ ಕಲ್ಪಿಸಲಾಗಿದ್ದು, ಈವರೆಗೆ 45,000 ಮಂದಿ ಖಾತೆ ತೆರೆದಿದ್ದಾರೆ. ಬೆಂಗಳೂರಿನಲ್ಲಿ 5,000 ಮಂದಿ ಖಾತೆ ಹೊಂದಿದ್ದಾರೆ. 70,000 ಖಾತೆ ತೆರೆಯುವ ಮೂಲಕ ತೆಲಂಗಾಣ ದೇಶದಲ್ಲಿ ಪ್ರಥಮ ಸ್ಥಾನದಲ್ಲಿದ್ದರೆ ಕರ್ನಾಟಕ 2ನೇ ಸ್ಥಾನದಲ್ಲಿದೆ ಎಂದು ಹೇಳಿದರು.

ಬೆಂಗಳೂರು ಪೂರ್ವ ವಿಭಾಗದ ಹಿರಿಯ ಅಂಚೆ ಅಧೀಕ್ಷಕ ಸಂದೇಶ್‌ ಮಹದೇವಪ್ಪ, ಐಪಿಪಿಬಿ ಹಿರಿಯ ವ್ಯವಸ್ಥಾಪಕ ಸುರೇಶ್‌, ಕರ್ನಾಟಕ ಅಂಚೆ ವೃತ್ತದ ಸಹಾಯಕ ನಿರ್ದೇಶಕ ವೆಂಕಟಾಚಲ ಭಟ್‌, ಎಪಿಎಂಜಿ (ತಾಂತ್ರಿಕ ವಿಭಾಗ) ಟಿ.ಎಸ್‌.ಅಶ್ವತ್ಥ ನಾರಾಯಣ ಉಪಸ್ಥಿತರಿದ್ದರು.

ಕ್ರಮೇಣ “ಮನಿ ಆರ್ಡರ್‌’ ಸ್ಥಗಿತ?
ಐಪಿಪಿಬಿ ವ್ಯವಸ್ಥೆಯಿಂದಾಗಿ ತ್ವರಿತವಾಗಿ ಹಣ ವರ್ಗಾವಣೆಗೆ ಅವಕಾಶವಿರಲಿದೆ. ಇದು ಯಶಸ್ವಿಯಾಗಿನಡೆದರೆ “ಮನಿ ಆರ್ಡರ್‌’ ಸೇವೆ ಕ್ರಮೇಣ ಸ್ಥಗಿತವಾಗುವ ಸಾಧ್ಯತೆ ಇದೆ. “ಕ್ಯಾಶ್‌ ಆನ್‌ ಡೆಲಿವರಿ’ ಸೇವೆಯನ್ನು ಡಿಜಿಟಲ್‌ ವ್ಯವಹಾರದಡಿ ನಿರ್ವಹಿಸಲು ಐಪಿಪಿಬಿ ಸಹಕಾರಿ. ಗ್ರಾಹಕರು ಆನ್‌ಲೈನ್‌ನಲ್ಲಿ ಖರೀದಿಸಿದ ವಸ್ತುವಿಗೆ ನೇರವಾಗಿ ಹಣ ನೀಡುವ ಬದಲಿಗೆ ಕ್ಯೂಆರ್‌ ಕಾರ್ಡ್‌ ಮೂಲಕ ಅಂಚೆ ಸಿಬ್ಬಂದಿ ಬಳಿ ಬೆರಳಚ್ಚು ಇಲ್ಲವೇ ಎಟಿಪಿ ಮೂಲಕ ಹಣ ವರ್ಗಾವಣೆಯಾಗಲಿದೆ.

ಇಂದು ಚಾಲನೆ
ಬೆಂಗಳೂರಿನ ಪುರಭವನದಲ್ಲಿ ಶನಿವಾರ ಮಧ್ಯಾಹ್ನ 2.30ಕ್ಕೆ ಕೇಂದ್ರ ಸಚಿವ ಅನಂತಕುಮಾರ್‌ ಅವರು ರಾಜ್ಯದಲ್ಲಿ 
“ಐಪಿಪಿಬಿ ‘ ಸೇವೆಗೆ ಚಾಲನೆ ನೀಡಲಿದ್ದಾರೆ. ಸಂಸದ ಪಿ.ಸಿ.ಮೋಹನ್‌, ಶಾಸಕ ಎನ್‌.ಎ.ಹ್ಯಾರಿಸ್‌, ಆರ್‌ಬಿಐ ಪ್ರಾದೇಶಿಕ ಕೇಂದ್ರದ ಪ್ರಧಾನ ವ್ಯವಸ್ಥಾಪಕ ಸತ್ವಂತ್‌ ಸಿಂಗ್‌ ಸಹೋಟ ಇತರರು ಉಪಸ್ಥಿತರಿರುವರು.

ಐಪಿಪಿಬಿ ವಿಶೇಷತೆ
ಖಾತೆ ತೆರೆಯಲು ಅರ್ಜಿ ಭರ್ತಿ ಮಾಡುವ ಅಗತ್ಯವಿಲ್ಲ. ಠೇವಣಿಗೆ, ಹಣ ವರ್ಗಾವಣೆಗೂ ಅರ್ಜಿ ಸಲ್ಲಿಸುವ ಅಗತ್ಯವಿಲ್ಲ. ಕೇವಲ ಆಧಾರ್‌ ಕಾರ್ಡ್‌ಸಂಖ್ಯೆ, ಮೊಬೈಲ್‌ ಸಂಖ್ಯೆ ನೀಡಿ ಖಾತೆ ತೆರೆಯಬಹುದು. ಮನೆ ಬಾಗಿಲಲ್ಲೇ ಅಂಚೆ ಸಿಬ್ಬಂದಿ ಮೂಲಕ ಖಾತೆ ತೆರೆಯಬಹುದು, ಹಣ ಪಡೆಯಬಹುದು. ಖಾತೆ ತೆರೆಯಲು ಕನಿಷ್ಠ ಠೇವಣಿ ಅಗತ್ಯವಿಲ್ಲ. ಬ್ಯಾಂಕ್‌
ವ್ಯವಹಾರಕ್ಕೆ ಪಾಸ್‌ಬುಕ್‌ ಬೇಕಿಲ್ಲ. ಪ್ರತಿ ವ್ಯವಹಾರಕ್ಕೂ ಎಸ್‌ಎಂಎಸ್‌ ಸಂದೇಶ ರವಾನೆ. ಖಾತೆ ಸಂಖ್ಯೆ
ನೆನಪಿಟ್ಟುಕೊಳ್ಳುವ ಅಗತ್ಯವಿಲ್ಲ.

ಕ್ಯೂಆರ್‌ ಕಾರ್ಡ್‌ ಎಲ್ಲ ಮಾಹಿತಿ ನೀಡುತ್ತದೆ. ಎಲ್ಲ ಬಿಲ್‌ ಪಾವತಿಗಳನ್ನೂ ಐಪಿಪಿಬಿ ಖಾತೆಯಿಂದಲೇ ನಿರ್ವಹಿಸಲು ಅವಕಾಶ. ಕಾರ್ಡ್‌ ಬಳಕೆ ವೇಳೆ ಬೆರಳಚ್ಚು ಇಲ್ಲವೇ ಒಟಿಪಿ ವಿವರ ದಾಖಲೀಕರಣ ಅಗತ್ಯ. ಆಧಾರ್‌ ಕಾರ್ಡ್‌ ಅಥವಾ ಒಟಿಪಿ ಇಲ್ಲದಿದ್ದರೆ ಕಾರ್ಡ್‌ ಬಳಸುವ ಅವಕಾಶವಿಲ್ಲದ ಕಾರಣ ದುರ್ಬಳಕೆ ಸಾಧ್ಯವಿಲ್ಲ.

ಅಕೌಂಟ್‌ ಕಾರ್ಡ್‌ ಮಾತ್ರ: ಐಪಿಪಿಬಿ ಖಾತೆದಾರರಿಗೆ ನೀಡುವ ಕ್ಯೂಆರ್‌ ಕಾರ್ಡ್‌ ಅಕೌಂಟ್‌ ಕಾರ್ಡ್‌ ಆಗಿ ಮಾತ್ರ ಬಳಕೆಯಾಗುತ್ತದೆ. ಎಟಿಎಂ/ ಡೆಬಿಟ್‌ ಕಾರ್ಡ್‌ನಂತೆ ಬಳಸಲು ಅವಕಾಶವಿಲ್ಲ. ಸ್ವೆ„ಪ್‌ಗೆ ಅವಕಾಶವಿಲ್ಲದಿದ್ದರೂ ಹಣ
ವರ್ಗಾವಣೆಗೆ ಬಳಸಬಹುದು.

Advertisement

Udayavani is now on Telegram. Click here to join our channel and stay updated with the latest news.

Next