Advertisement

ಮೊದಲ ಪಂದ್ಯದಲ್ಲೇ  ಭಾರತ-ಪಾಕ್‌ ಮುಖಾಮುಖಿ

02:31 PM Nov 29, 2017 | |

ಗೋಲ್ಡ್‌ ಕೋಸ್ಟ್‌ (ಆಸ್ಟ್ರೇಲಿಯ): ಸಾಂಪ್ರದಾಯಿಕ ಎದುರಾಳಿಗಳಾದ ಭಾರತ- ಪಾಕಿಸ್ಥಾನ ತಂಡಗಳು ಮತ್ತೂಮ್ಮೆ ಹಾಕಿಯಲ್ಲಿ ಪರಸ್ಪರ ಎದುರಾಗಲು ಕಾಲ ಕೂಡಿಬಂದಿದೆ. ಮುಂದಿನ ವರ್ಷ ಆಸ್ಟ್ರೇಲಿಯದ ಗೋಲ್ಡ್‌ಕೋಸ್ಟ್‌ನಲ್ಲಿ ನಡೆಯಲಿರುವ ಕಾಮನ್ವೆಲ್ತ್‌ ಗೇಮ್ಸ್‌ನಲ್ಲಿ ಈ ಮುಖಾಮುಖೀಗೆ ಮುಹೂರ್ತ ಫಿಕ್ಸ್‌ ಆಗಿದೆ. ಇಲ್ಲಿ ಭಾರತ ತನ್ನ ಮೊದಲ ಲೀಗ್‌ ಪಂದ್ಯದಲ್ಲೇ ಪಾಕಿಸ್ಥಾನವನ್ನು ಎದುರಿಸುವುದು ವಿಶೇಷ!

Advertisement

ಇಂಟರ್‌ನ್ಯಾಶನಲ್‌ ಹಾಕಿ ಫೆಡರೇಶನ್‌ (ಎಫ್ಐಎಚ್‌) ಮಂಗಳವಾರ ಕಾಮನ್ವೆಲ್ತ್‌ ಗೇಮ್ಸ್‌ ಕೂಟದ ಹಾಕಿ ವೇಳಾಪಟ್ಟಿಯನ್ನು ಪ್ರಕಟಿಸಿದ್ದು, ಪುರುಷರ ವಿಭಾಗದ ಏಶ್ಯನ್‌ ಚಾಂಪಿಯನ್‌ ಆಗಿರುವ ಭಾರತ “ಬಿ’ ವಿಭಾಗದಲ್ಲಿ ಸ್ಥಾನ ಸಂಪಾದಿಸಿದೆ. ಕಳೆದ ಸಲದ ಕಂಚಿನ ಪದಕ ವಿಜೇತ ಇಂಗ್ಲೆಂಡ್‌, ಪಾಕಿಸ್ಥಾನ, ಮಲೇಶ್ಯ ಮತ್ತು ವೇಲ್ಸ್‌ “ಬಿ’ ವಿಭಾಗದ ಉಳಿದ ತಂಡಗಳು. 5 ಬಾರಿಯ ಚಾಂಪಿಯನ್‌ ಆಗಿರುವ ಆತಿಥೇಯ ಆಸ್ಟ್ರೇಲಿಯ, ನ್ಯೂಜಿಲ್ಯಾಂಡ್‌, ದಕ್ಷಿಣ ಆಫ್ರಿಕಾ, ಕೆನಡಾ ಮತ್ತು ಸ್ಕಾಟ್ಲೆಂಡ್‌ “ಎ’ ವಿಭಾಗದಲ್ಲಿವೆ. 

ಭಾರತ-ಪಾಕಿಸ್ಥಾನ ನಡುವಿನ ಪಂದ್ಯ ಎ. 7ರಂದು ನಡೆಯಲಿದೆ. ಬಳಿಕ ವೇಲ್ಸ್‌ (ಎ. 8), ಮಲೇಶ್ಯ (ಎ. 10) ಮತ್ತು ಇಂಗ್ಲೆಂಡ್‌ (ಎ. 11) ತಂಡಗಳ ವಿರುದ್ಧ ಭಾರತ ಸೆಣಸಲಿದೆ. ಭಾರತ ಕಳೆದೆರಡು ಆವೃತ್ತಿಗಳ ಕಾಮನ್ವೆಲ್ತ್‌ ಗೇಮ್ಸ್‌ನಲ್ಲಿ ರನ್ನರ್ ಅಪ್‌ ಆಗಿ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟಿತ್ತು.

ವನಿತಾ ವಿಭಾಗದ ಪಂದ್ಯಗಳು
ಭಾರತ ವನಿತಾ ಹಾಕಿ ತಂಡ ಕೂಡ ಈ ಕೂಟದಲ್ಲಿ ಪಾಲ್ಗೊಳ್ಳಲಿದ್ದು, “ಎ’ ವಿಭಾಗದಲ್ಲಿ ಸ್ಥಾನ ಸಂಪಾದಿಸಿದೆ. ಕಳೆದ ಸಲದ ಬೆಳ್ಳಿ ಪದಕ ವಿಜೇತ ಇಂಗ್ಲೆಂಡ್‌, ದಕ್ಷಿಣ ಆಫ್ರಿಕಾ, ಮಲೇಶ್ಯ ಮತ್ತು ವೇಲ್ಸ್‌ ಈ ವಿಭಾಗದ ಉಳಿದ ತಂಡಗಳು.  ಭಾರತ ಎ. 5ರಂದು ವೇಲ್ಸ್‌ ವಿರುದ್ಧ ಮೊದಲ ಪಂದ್ಯ ಆಡಲಿದೆ. ಬಳಿಕ ಮಲೇಶ್ಯ (ಎ. 6), ಇಂಗ್ಲೆಂಡ್‌ (ಎ. 8) ಮತ್ತು ದಕ್ಷಿಣ ಆಫ್ರಿಕಾ (ಎ. 10) ವಿರುದ್ಧ ಸೆಣಸಲಿದೆ. 

ಹಾಲಿ ಚಾಂಪಿಯನ್‌ ಆಸ್ಟ್ರೇಲಿಯ, ನ್ಯೂಜಿಲ್ಯಾಂಡ್‌, ಸ್ಕಾಟ್ಲೆಂಡ್‌, ಕೆನಡಾ ಮತ್ತು ಘಾನಾ “ಬಿ’ ವಿಭಾಗದಲ್ಲಿವೆ.
ಎಲ್ಲ ವಿಭಾಗಗಳ 2 ಅಗ್ರಸ್ಥಾನಿ ತಂಡಗಳು ಸೆಮಿಫೈನಲ್‌ ಪ್ರವೇಶಿಸಲಿವೆ.  ವನಿತಾ ಸೆಮಿಫೈನಲ್‌ ಎ. 12ರಂದು, ಪುರುಷರ ವಿಭಾಗದ ಸೆಮಿಫೈನಲ್‌ ಎ. 13ರಂದು ನಡೆಯಲಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next