Advertisement

ಭಾರತ-ಪಾಕಿಸ್ಥಾನ ಬಿಗ್‌ ಸೆಮಿಫೈನಲ್‌

09:56 AM Feb 05, 2020 | Sriram |

ಪೊಚೆಫ್ಸೂಮ್‌ (ದಕ್ಷಿಣ ಆಫ್ರಿಕಾ): ಹಾಲಿ ಚಾಂಪಿಯನ್‌ ಭಾರತಕ್ಕೆ ಅಂಡರ್‌-19 ವಿಶ್ವಕಪ್‌ ಪಂದ್ಯಾವಳಿಯಲ್ಲಿ ಮಂಗಳವಾರ ದೊಡ್ಡದೊಂದು ಸವಾಲು ಎದುರಾಗಿದೆ. ಪೊಚೆಫ್ಸೂóಮ್‌ನಲ್ಲಿ ನಡೆಯುವ ಮೊದಲ ಸೆಮಿಫೈನಲ್‌ನಲ್ಲಿ ಪ್ರಿಯಂ ಗರ್ಗ್‌ ಸಾರಥ್ಯದ ಭಾರತದ ಕಿರಿಯರು ಸಾಂಪ್ರದಾಯಿಕ ಎದುರಾಳಿ ಪಾಕಿಸ್ಥಾನ ವಿರುದ್ಧ ಸೆಣಸಲಿದ್ದಾರೆ. ಸೀನಿಯರ್ ವಿಶ್ವಕಪ್‌ ಪಂದ್ಯದಂತೆ ಭಾರತ-ಪಾಕಿಸ್ಥಾನ ನಡುವಿನ ಈ ಪಂದ್ಯ ಕೂಡ “ಹೈ ಪ್ರಶರ್‌ ಹಾಗೂ ಬಿಗ್‌ ಮ್ಯಾಚ್‌’ ಆಗಲಿದೆ ಎಂಬುದು ಎಲ್ಲರ ಲೆಕ್ಕಾಚಾರ.

Advertisement

ಭಾರತ ಅಜೇಯವಲ್ಲ
ಆದರೆ ಸೀನಿಯರ್ ವಿಶ್ವಕಪ್‌ ಕೂಟದಂತೆ ಅಂಡರ್‌-19 ವಿಶ್ವಕಪ್‌ನಲ್ಲಿ ಪಾಕಿಸ್ಥಾನ ವಿರುದ್ಧ ಭಾರತ ಅಜೇಯವಲ್ಲ. ಇಲ್ಲಿ ಪಾಕ್‌ ಕಿರಿಯರೇ ಒಂದು ಹೆಜ್ಜೆ ಮುಂದಿದ್ದಾರೆ. ಆಡಿದ 9 ಪಂದ್ಯಗಳಲ್ಲಿ ಪಾಕಿಸ್ಥಾನ ಐದರಲ್ಲಿ ಜಯಿಸಿದರೆ, ಭಾರತ ನಾಲ್ಕರಲ್ಲಿ ಗೆದ್ದಿದೆ. ಪಾಕಿಸ್ಥಾನಕ್ಕೆ ಒಂದು ಗೆಲುವು ಫೈನಲ್‌ನಲ್ಲಿ ಒಲಿದಿತ್ತು ಎಂಬುದನ್ನು ಮರೆಯುವಂತಿಲ್ಲ. ಹಾಗೆಯೇ ಕಳೆದ 3 ವಿಶ್ವಕಪ್‌ ಪಂದ್ಯಗಳಲ್ಲಿ ಪಾಕ್‌ ವಿರುದ್ಧ ಭಾರತ ಗೆಲುವಿನ ಹ್ಯಾಟ್ರಿಕ್‌ ಸಾಧಿಸಿರುವುದೂ ಉಲ್ಲೇಖನೀಯ.

ಸೆಮಿಯಲ್ಲಿ ಭರ್ಜರಿ ಜಯ
ಭಾರತ-ಪಾಕಿಸ್ಥಾನ 2018ರ ವಿಶ್ವಕಪ್‌ ಕೂಟದ ಸೆಮಿಫೈನಲ್‌ನಲ್ಲೂ ಎದುರಾಗಿದ್ದವು. ಕ್ರೈಸ್ಟ್‌ಚರ್ಚ್‌ನಲ್ಲಿ ನಡೆದ ಈ ಉಪಾಂತ್ಯದಲ್ಲಿ ಭಾರತ 203 ರನ್ನುಗಳ ಪ್ರಚಂಡ ಗೆಲುವು ಸಾಧಿಸಿತ್ತು. ಶುಭಮನ್‌ ಗಿಲ್‌ ಅವರ ಅಜೇಯ ಶತಕ ಸಾಹಸದಿಂದ (102) ಭಾರತ 9ಕ್ಕೆ 272 ರನ್‌ ಪೇರಿಸಿದರೆ, ಪಾಕ್‌ 29.3 ಓವರ್‌ಗಳಲ್ಲಿ 69 ರನ್ನಿಗೆ ಆಲೌಟ್‌ ಆಗಿತ್ತು! ಅನಂತರದ ಕಿರಿಯರ ಏಶ್ಯ ಕಪ್‌ ಕೂಟದಲ್ಲೂ ಪಾಕಿಗೆ ಭಾರತ ಸೋಲಿನೇಟು ನೀಡಿತ್ತು.
ಈ ಸೋಲಿಗೆ ಸೇಡು ತೀರಿಸಿಕೊಳ್ಳುವುದು ಪಾಕಿಸ್ಥಾನದ ಯೋಜನೆ ಆಗಿದ್ದರೆ ಅಚ್ಚರಿಯೇನಿಲ್ಲ. ಆದರೆ ಕೂಟದಲ್ಲೇ ಅತ್ಯಂತ ಬಲಿಷ್ಠ ತಂಡವನ್ನು ಹೊಂದಿರುವ ಭಾರತದ ವಿರುದ್ಧ ಮೇಲುಗೈ ಸಾಧಿಸುವುದು ಅಷ್ಟು ಸುಲಭವಲ್ಲ ಎಂಬುದು ಪಾಕಿಗೂ ತಿಳಿದಿದೆ. ಗರ್ಗ್‌ ಬಳಗ ಈ ಪಂದ್ಯಾವಳಿಯ ಅಜೇಯ ತಂಡ. ಪಾಕ್‌ ಕೂಡ ಸೋತಿಲ್ಲವಾದರೂ ಬಾಂಗ್ಲಾ ಎದುರಿನ ಲೀಗ್‌ ಪಂದ್ಯ ಮಳೆಯಿಂದ ರದ್ದುಗೊಂಡಿತ್ತು. ಭಾರತ ಕ್ವಾರ್ಟರ್‌ ಫೈನಲ್‌ನಲ್ಲಿ ಆಸ್ಟ್ರೇಲಿಯವನ್ನು ಕೆಡವಿದರೆ, ಪಾಕಿಸ್ಥಾನ ಅಫ್ಘಾನಿಸ್ಥಾನದ ಹಾರಾಟವನ್ನು ಕೊನೆಗೊಳಿಸಿತ್ತು.

ಭಾರತ ಹೆಚ್ಚು ಬಲಿಷ್ಠ
ಭಾರತದ ಬ್ಯಾಟಿಂಗ್‌ ಹಾಗೂ ಬೌಲಿಂಗ್‌ ವಿಭಾಗಗಳೆರಡೂ ಅತ್ಯಂತ ಬಲಿಷ್ಠ. ಆರಂಭಕಾರ ಯಶಸ್ವಿ ಜೈಸ್ವಾಲ್‌ 3 ಅರ್ಧ ಶತಕಗಳ ಯಶಸ್ವಿ ಅಭಿಯಾನ. ಉಳಿದವರು ಏರಿಳಿತ ಕಂಡರೂ ಸವಾಲಿನ ಮೊತ್ತ ಪೇರಿಸುವಲ್ಲಿ ಹಿಂದೆ ಬೀಳರು ಎಂಬ ನಂಬಿಕೆ ಇದೆ. ಸಕ್ಸೇನಾ, ಗರ್ಗ್‌, ಜುರೆಲ್‌, ವರ್ಮ, ಸಿದ್ದೇಶ್‌ ಸಿಡಿದು ನಿಲ್ಲಬೇಕಿದೆ. ಭಾರತದ ಬೌಲಿಂಗ್‌ ಹೆಚ್ಚು ವೈವಿಧ್ಯಮಯ, ಅಷ್ಟೇ ಘಾತಕ. ತ್ಯಾಗಿ, ಬಿಶ್ನೋಯ್‌, ಅಂಕೋಲೆಕರ್‌ ಭಾರೀ ಅಪಾಯಕಾರಿಯಾಗಿ ಪರಿಣಮಿಸಿದ್ದಾರೆ.

ಭಾರೀ ಒತ್ತಡದ ಪಂದ್ಯ
ಭಾರತದಂತೆ ಪಾಕ್‌ ಬೌಲಿಂಗ್‌ ಕೂಡ ಬಲಿಷ್ಠ. ವೇಗಿಗಳಾದ ಅಬ್ಟಾಸ್‌ ಅಫ್ರಿದಿ, ಮೊಹಮ್ಮದ್‌ ಅಮಿರ್‌ ಖಾನ್‌, ತಾಹಿರ್‌ ಹುಸೇನ್‌ ಅವರೆಲ್ಲ ಸವಾಲಾಗುವ ಸಾಧ್ಯತೆ ಇದೆ. ಭಾರತವನ್ನು ಮಣಿಸಿದರೆ ರಾತ್ರಿ ಕಳೆಯುವಷ್ಟರಲ್ಲಿ ಸ್ಟಾರ್‌ ಆಗಬಹುದು ಎಂಬ ಪಾಕ್‌ ನಾಯಕ ರೊಹೈಲ್‌ ನಜೀರ್‌ ಅವರ ಹೇಳಿಕೆ ಈ ಪಂದ್ಯದ ಮಹತ್ವ ಹಾಗೂ ಒತ್ತಡಗಳೆರಡಕ್ಕೂ ಸಾಕ್ಷಿ.

Advertisement

“ಇದೊಂದು ಭಾರೀ ಒತ್ತಡದ ಪಂದ್ಯ. ಆದರೆ ನಾವು ಇದನ್ನು ಮೀರಿ ನಿಂತು ಮಾಮೂಲು ಆಟವನ್ನು ಆಡಬಯಸುತ್ತೇವೆ’ ಎಂಬುದು ಆರಂಭಕಾರ ಹುರೈರ ಹೇಳಿಕೆ.

ಮೊದಲು ಬ್ಯಾಟಿಂಗ್‌ ನಡೆಸಿ ದೊಡ್ಡ ಮೊತ್ತ ಪೇರಿಸಿದ ತಂಡಕ್ಕೆ ಇಲ್ಲಿ ಗೆಲುವಿನ ಅವಕಾಶ ಜಾಸ್ತಿ. ಅಕಸ್ಮಾತ್‌ ಮಳೆ ಸುರಿದರೆ ಚೇಸಿಂಗ್‌ ತಂಡಕ್ಕೆ ನಷ್ಟವಾಗುವ ಸಾಧ್ಯತೆ ಇದೆ.

ಭಾರತ: ಯಶಸ್ವಿ ಜೈಸ್ವಾಲ್‌, ದಿವ್ಯಾಂಶ್‌ ಸಕ್ಸೇನಾ, ಪ್ರಿಯಂ ಗರ್ಗ್‌ (ನಾಯಕ), ತಿಲಕ್‌ ವರ್ಮ, ಧ್ರುವ ಜುರೆಲ್‌ (ವಿ.ಕೀ.), ಸಿದ್ದೇಶ್‌ ವೀರ್‌, ಆಕಾಶ್‌ ಸಿಂಗ್‌, ರವಿ ಬಿಶ್ನೋಯ್‌, ಕಾರ್ತಿಕ್‌ ತ್ಯಾಗಿ, ಅಥರ್ವ ಅಂಕೋಲೆಕರ್‌, ಸುಶಾಂತ್‌ ಮಿಶ್ರ.
ಪಾಕಿಸ್ಥಾನ: ರೊಹೈಲ್‌ ನಜೀರ್‌ (ನಾಯಕ, ವಿ.ಕೀ.), ಮೊಹಮ್ಮದ್‌ ಹುರೈರ, ಅಬ್ಟಾಸ್‌ ಅಫ್ರಿದಿ, ಹೈದರ್‌ ಅಲಿ, ಮೊಹಮ್ಮದ್‌ ಹ್ಯಾರಿಸ್‌, ಖಾಸಿಂ ಅಕ್ರಮ್‌, ಅಮಿರ್‌ ಅಲಿ, ಫ‌ಹಾದ್‌ ಮುನೀರ್‌, ಇರ್ಫಾನ್‌ ಖಾನ್‌, ತಾಹಿರ್‌ ಹುಸೇನ್‌, ಮೊಹಮ್ಮದ್‌ ಅಮಿರ್‌ ಖಾನ್‌.

Advertisement

Udayavani is now on Telegram. Click here to join our channel and stay updated with the latest news.

Next