Advertisement

ಭಾರತ-ಪಾಕ್‌ ಡೇವಿಸ್‌ ಕಪ್‌ ಸ್ಥಳಾಂತರವಿಲ್ಲ: ಪಿಟಿಎಫ್

01:59 AM Aug 12, 2019 | Team Udayavani |

ಕರಾಚಿ: ಭಾರತ ವಿರುದ್ಧ ನಡೆಯಲಿರುವ ಡೇವಿಸ್‌ ಕಪ್‌ ಏಶ್ಯ/ಒಶಿಯಾನಿಯ ಬಣ ಒಂದರ ಹೋರಾಟವನ್ನು ತಟಸ್ಥ ತಾಣಕ್ಕೆ ಸ್ಥಳಾಂತರಿಸುವ ಸಾಧ್ಯತೆಯನ್ನು ಪಾಕಿಸ್ಥಾನ ಟೆನಿಸ್‌ ಫೆಡರೇಶನ್‌ (ಪಿಟಿಎಫ್) ತಳ್ಳಿ ಹಾಕಿದೆ.


Advertisement

ಇಸ್ಲಾಮಾಬಾದ್‌ನ ಕ್ರೀಡಾ ಸಂಕೀರ್ಣದಲ್ಲಿ ಸೆ. 14 ಮತ್ತು 15ರಂದು ಡೇವಿಸ್‌ ಕಪ್‌ ಕೂಟವನ್ನು ಆಯೋಜಿಸಲು ಎಲ್ಲ ಸಿದ್ಧತೆ ಮಾಡಲಾಗುತ್ತಿದೆ ಎಂದು ಪಿಟಿಎಫ್ ಮುಖ್ಯಸ್ಥ ಸಲೀಂ ಸೈಫ‌ುಲ್ಲ ಹೇಳಿದ್ದಾರೆ.

‘ಈ ಹಿಂದಿನ ವೇಳಾಪಟ್ಟಿಯಂತೆ ಪಂದ್ಯಾಟವನ್ನು ಆಯೋಜಿಸಲು ನಾವು ಬದ್ಧರಾಗಿದ್ದೇವೆ. ಇಸ್ಲಾಮಾಬಾದ್‌ನಲ್ಲಿ ಭಾರತೀಯ ತಂಡಕ್ಕೆ ಯಾವುದೇ ಸಮಸ್ಯೆ ಎದುರಾಗುವ ಸಾಧ್ಯತೆಯಿಲ್ಲ. ಈ ತಾಣ ಸುರಕ್ಷಿತವಲ್ಲವೆಂದು ಭಾರತೀಯ ತಂಡ ಭಾವಿಸಲು ಯಾವುದೇ ಕಾರಣಗಳಿಲ್ಲ’ ಎಂದು ಸೈಫ‌ುಲ್ಲ ತಿಳಿಸಿದ್ದಾರೆ.

ಪ್ರೇಕ್ಷಕರಿಲ್ಲದೆಯೂ ಪಂದ್ಯಾವಳಿ
‘ಭಾರತೀಯ ತಂಡ ಪಾಕಿಸ್ಥಾನದಲ್ಲಿ ಸುರಕ್ಷಿತವಾಗಿರುತ್ತದೆ ಎಂದು ಸೈಫ‌ುಲ್ಲ ಭರವಸೆ ನೀಡಿದ್ದಾರೆ. ತಂಡ 4 ದಿನ ಸುರಕ್ಷಿತ ತಾಣವಾದ ಇಸ್ಲಾಮಾಬಾದ್‌ನಲ್ಲಿ ಇರಲಿದೆ. ನಾವು ಭಾರತೀಯ ತಂಡ ಉಳಿದುಕೊಳ್ಳುವ ಹೊಟೇಲ್ ಮತ್ತು ಟೆನಿಸ್‌ ಕೋರ್ಟ್‌ಗೆ ಉನ್ನತ ಮಟ್ಟದ ಭದ್ರತಾ ವ್ಯವಸ್ಥೆಯನ್ನು ಕಲ್ಪಿಸಿದ್ದೇವೆ. ಒಂದು ವೇಳೆ ಅವರು ಬಯಸಿದರೆ ಪ್ರೇಕ್ಷಕರಿಲ್ಲದೇ ಪಂದ್ಯಾಟ ನಡೆಸಲು ಸಿದ್ಧರಿದ್ದೇವೆ’ ಎಂದು ಸೈಫ‌ುಲ್ಲಾ ವಿವರಿಸಿದ್ದಾರೆ.

ತಟಸ್ಥ ತಾಣ: ಐಟಿಎಫ್ಗೆ ಭಾರತ ಮನವಿ
ಉಭಯ ರಾಷ್ಟ್ರಗಳ ನಡುವೆ ರಾಜಕೀಯ ಉದ್ವಿಗ್ನ ಸ್ಥಿತಿ ಮುಂದುವರಿದ ಹಿನ್ನೆಲೆಯಲ್ಲಿ ಮುಂಬರುವ ಡೇವಿಸ್‌ ಕಪ್‌ ಹೋರಾಟವನ್ನು ಪಾಕಿಸ್ಥಾನದಿಂದ ತಟಸ್ಥ ಸ್ಥಳಕ್ಕೆ ಸ್ಥಳಾಂತರಿಸುವಂತೆ ಭಾರತವು ಅಂತಾರಾಷ್ಟ್ರೀಯ ಟೆನಿಸ್‌ ಫೆಡರೇಶನ್‌ಗೆ (ಐಟಿಎಫ್) ಮನವಿ ಮಾಡಿದೆ. ಕಾಶ್ಮೀರಕ್ಕೆ ನೀಡಲಾದ ವಿಶೇಷ ಸ್ಥಾನಮಾನವನ್ನು ಭಾರತ ರದ್ದುಮಾಡಿದ ಬಳಿಕ ಉಭಯ ರಾಷ್ಟ್ರಗಳ ನಡುವೆ ಉದ್ವಿಗ್ನ ಸ್ಥಿತಿ ಏರ್ಪಟ್ಟಿದೆ. ಹೀಗಾಗಿ ಡೇವಿಸ್‌ ಕಪ್‌ ಹೋರಾಟವನ್ನು ತಟಸ್ಥ ತಾಣದಲ್ಲಿ ಆಯೋಜಿಸಲು ನಾವು ಐಟಿಎಫ್ ಅನ್ನು ಕೇಳಿಕೊಂಡಿದ್ದೇವೆ ಎಂದು ಆಲ್ ಇಂಡಿಯಾ ಟೆನಿಸ್‌ ಅಸೋಸಿಯೇಶನ್‌ (ಎಐಟಿಎ) ಅಧ್ಯಕ್ಷ ಪ್ರವೀಣ್‌ ಮಹಾಜನ್‌ ಹೇಳಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next