Advertisement

ಇಂಡಿಯಾ ಓಪನ್‌ ಸೂಪರ್‌ ಸೀರೀಸ್‌ : ಸಿಂಧು ಚಾಂಪಿಯನ್‌

11:44 AM Apr 03, 2017 | Karthik A |

ಹೊಸದಿಲ್ಲಿ: ಅಮೋಘ ಆಟದ ಪ್ರದರ್ಶನ ನೀಡಿದ ಭಾರತದ ಪಿವಿ ಸಿಂಧು ಹಾಲಿ ಒಲಿಂಪಿಕ್‌ ಚಾಂಪಿಯನ್‌ ಸ್ಪೇನ್‌ನ ಕರೋಲಿನಾ ಮರಿನ್‌ ಅವರನ್ನು ನೇರ ಗೇಮ್‌ಗಳಿಂದ ಉರುಳಿಸಿ ಚೊಚ್ಚಲ ಬಾರಿ ಇಂಡಿಯಾ ಓಪನ್‌ ಸೂಪರ್‌ ಸೀರೀಸ್‌ ಬ್ಯಾಡ್ಮಿಂಟನ್‌ ಕೂಟದ ಪ್ರಶಸ್ತಿ ಗೆದ್ದುಕೊಂಡಿದ್ದಾರೆ. ಇಲ್ಲಿನ ಸಿರಿಫೋರ್ಟ್‌ ಕ್ರೀಡಾ ಸಂಕೀರ್ಣದಲ್ಲಿ ತವರಿನ ಅಭಿಮಾನಿಗಳ ಸಮ್ಮುಖದಲ್ಲಿ ಪ್ರಬಲ ಹೋರಾಟ ಸಂಘಟಿಸಿದ ಸಿಂಧು ತೀವ್ರ ಪೈಪೋಟಿ ನೀಡಿದ ಮರಿನ್‌ ಅವರನ್ನು 21-19, 21-16 ಗೇಮ್‌ಗಳಿಂದ ಉರುಳಿಸಿ ರಿಯೋ ಒಲಿಂಪಿಕ್ಸ್‌ನ ಸೋಲಿಗೆ ಸೇಡು ತೀರಿಸಿಕೊಂಡರು. ರಿಯೋ ಒಲಿಂಪಿಕ್ಸ್‌ ಫೈನಲ್‌ನಲ್ಲಿ ಮರಿನ್‌ ಅವರು ಸಿಂಧು ಅವರನ್ನು ಕೆಡಹಿ ಚಿನ್ನ ಜಯಿಸಿದ್ದರೆ ಸಿಂಧು ಬೆಳ್ಳಿಗೆ ತೃಪ್ತಿಪಟ್ಟುಕೊಂಡಿದ್ದರು. ಮೂರನೇ ಶ್ರೇಯಾಂಕದ ಸಿಂಧು ಪಂದ್ಯದುದ್ದಕ್ಕೂ ಪ್ರಾಬಲ್ಯ ಸ್ಥಾಪಿಸಿ 46 ನಿಮಿಷಗಳಲ್ಲಿ ಪಂದ್ಯ ವಶಪಡಿಸಿಕೊಂಡರು. ದ್ವಿತೀಯ ಗೇಮ್‌ನಲ್ಲಿ ಸಿಂಧು 4-0, 14-9, 18-13 ಮುನ್ನಡೆ ಸಾಧಿಸಿಕೊಂಡು 21-16ರಿಂದ ಪಂದ್ಯ ಗೆದ್ದು ಸಂಭ್ರಮಿಸಿದರು. 

Advertisement

ಈ ಗೆಲುವಿನಿಂದ ಸಿಂಧು ಅವರು ಮರಿನ್‌ ವಿರುದ್ಧದ ಗೆಲುವಿನ ದಾಖಲೆಯನ್ನು 4-5ಕ್ಕೇರಿಸಿದರು. ಸಿಂಧು ಈ ಹಿಂದೆ ಕಳೆದ ವರ್ಷ ದುಬೈನಲ್ಲಿ ನಡೆದ ಬಿಡಬ್ಲ್ಯುಎಫ್ ಸೂಪರ್‌ ಸೀರೀಸ್‌ ಬ್ಯಾಡ್ಮಿಂಟನ್‌ ಕೂಟದಲ್ಲಿ ಮರಿನ್‌ ಅವರನ್ನು ಕೆಡಹಿದ್ದರು. ಸಿಂಧು ಅವರಿಗಿದು ಎರಡನೇ ಸೂಪರ್‌ ಸೀರೀಸ್‌ ಗೆಲುವು ಆಗಿದೆ. 2016ರಲ್ಲಿ ಅವರು ಚೀನ ಓಪನ್‌ ಸೂಪರ್‌ ಸೀರೀಸ್‌ ಬ್ಯಾಡ್ಮಿಂಟನ್‌ ಕೂಟದ ಪ್ರಶಸ್ತಿ ಜಯಿಸಿದ್ದರು. ಸಿಂಧು ಇದೇ ವರ್ಷ ನಡೆದ ಸಯ್ಯದ್‌ ಮೋದಿ ಇಂಟರ್‌ನ್ಯಾಶನಲ್‌ ಗ್ರ್ಯಾನ್‌ ಪ್ರಿ ಗೋಲ್ಡ್‌ ಕೂಟದ ಪ್ರಶಸ್ತಿ ಜಯಿಸಿದ್ದರು.


ವಿಕ್ಟರ್‌ ಆ್ಯಕ್ಸೆಲ್ಸೆನ್‌ಗೆ ಪ್ರಶಸ್ತಿ

ಈ ಮೊದಲು ನಡೆದ ಪುರುಷರ ಸಿಂಗಲ್ಸ್‌ ಫೈನಲ್‌ನಲ್ಲಿ ಡೆನ್ಮಾರ್ಕ್‌ನ ವಿಕ್ಟರ್‌ ಆ್ಯಕ್ಸೆಲ್ಸೆನ್‌ ಚೈನೀಸ್‌ ತೈಪೆಯ ತಿಯೆನ್‌ ಚೆನ್‌ ಚೋ ಅವರನ್ನು ನೇರ ಗೇಮ್‌ಗಳಿಂದ ಸೋಲಿಸಿ ಪ್ರಶಸ್ತಿ ಜಯಿಸಿದ್ದರು. ಮೂರನೇ ಶ್ರೇಯಾಂಕದ ಆ್ಯಕ್ಸೆಲ್ಸೆನ್‌ 21-13, 21-10 ಗೇಮ್‌ಗಳಿಂದ ಗೆಲುವು ಒಲಿಸಿಕೊಂಡರು. ಫೈನಲ್‌ ಹೋರಾಟ ಕೇವಲ 36 ನಿಮಿಷಗಳಲ್ಲಿ ಮುಗಿದಿತ್ತು. ಇದು ಅವರ ಚೊಚ್ಚಲ ಇಂಡಿಯಾ ಓಪನ್‌ ಮತ್ತು ಎರಡನೇ ಸೂಪರ್‌ ಸೀರೀಸ್‌ ಸರಣಿಯ ಪ್ರಶಸ್ತಿಯಾಗಿದೆ. 

ಮಿಕ್ಸೆಡ್‌ ಡಬಲ್ಸ್‌ನಲ್ಲಿ ಹಾಲಿ ಚಾಂಪಿಯನ್ಸ್‌ ಚೀನದ ಲು ಕೆಯಿ -ಹುವಾಂಗ್‌ ಯಾಕಿಯಾಂಗ್‌ ಅವರು ತಮ್ಮ ದೇಶದವರೇ ಆದ ಝೆಂಗ್‌ ಸಿವೆಯಿ-ಚೆನ್‌ ಕ್ವಿಂಗ್‌ಚೆನ್‌ ಅವರನ್ನು 22-24, 21-14, 21-17 ಗೇಮ್‌ಗಳಿಂದ ಉರುಳಿಸಿ ಪ್ರಶಸ್ತಿ ಜಯಿಸಿದರು. ಇದು ಅವರ ಸತತ ಎರಡನೇ ಇಂಡಿಯಾ ಓಪನ್‌ ಮಿಕ್ಸೆಡ್‌ ಡಬಲ್ಸ್‌ ಪ್ರಶಸ್ತಿಯಾಗಿದೆ. ತೀವ್ರ ಪೈಪೋಟಿಯಿಂದ ಸಾಗಿದ್ದ ಫೈನಲ್‌ನಲ್ಲಿ ದ್ವಿತೀಯ ಶ್ರೇಯಾಂಕದ ಕೆಯಿ ಯಾಕಿಯಾಂಗ್‌ ಅವರು ಆರಂಭದಲ್ಲಿ 4-7 ಹಿನ್ನಡೆಯಲ್ಲಿದ್ದರೂ 12-12 ಸಮಬಲ ಸಾಧಿಸಿ ಪ್ರಶಸ್ತಿ ಗೆಲ್ಲಲು ಯಶಸ್ವಿಯಾಗಿದ್ದರು.

ದಿನದ ಮೊದಲ ಫೈನಲ್‌ ಹೋರಾಟದಲ್ಲಿ ಜಪಾನಿನ ಶಿಹೊ ತಾನಕ-ಕೊಹರು ಯೊನೆಮೊಟೊ ಮತ್ತು ನಾವೊಕೊ ಫ‌ುಕುಮಾನ್‌ – ಕುರುಮಿ ಯೊನಾವೊ ನಡುವೆ ನಡೆಯಿತು. ಏಳನೇ ಶ್ರೇಯಾಂಕದ ತಾನಕ -ಯೊನೆಮೊಟೊ ಅವರು 16 -21, 21-19, 21-10 ಗೇಮ್‌ಗಳಿಂದ ಜಯಭೇರಿ ಬಾರಿಸಿ ಪ್ರಶಸ್ತಿ ಗೆದ್ದರು. ಇದು ಅವರಿಬ್ಬರು ಜತೆಯಾಗಿ ಗೆದ್ದ ಮೊದಲ ಸೂಪರ್‌ ಸೀರೀಸ್‌ ಕೂಟದ ಪ್ರಶಸ್ತಿಯಾಗಿದೆ.

Advertisement

ಸಿಂಧು ಸಾಧನೆ
ರಿಯೋ ಒಲಿಂಪಿಕ್ಸ್‌ ಬೆಳ್ಳಿ ಪದಕ, ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಎರಡು ಕಂಚು, ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲಿ ಕಂಚು, ಚೀನಾ ಓಪನ್‌, ಇಂಡೋನೇಶ್ಯ ಓಪನ್‌, ಮಕಾವ್‌ ಓಪನ್‌…ಸೇರಿದಂತೆ ಹಲವು ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಆದರೆ ಇಂಡಿಯಾ ಓಪನ್‌ ಗೆದ್ದಿರುವುದು ಇದೇ ಮೊದಲು. ಇಲ್ಲಿಯವರೆಗೆ ಭಾರತದಿಂದ ಸೈನಾ ನೆಹ್ವಾಲ್‌ ಮತ್ತು ಕೆ.ಶ್ರೀಕಾಂತ್‌ ಮಾತ್ರ ಇಂಡಿಯಾ ಓಪನ್‌ ಗೆದ್ದಿದ್ದರು. ಇದೀಗ ಈ ಸಾಲಿಗೆ ಸಿಂಧು ಕೂಡ ಸೇರ್ಪಡೆಯಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next