Advertisement

ಭಾರತಕ್ಕೊಂದೇ ಇಂಟರ್‌ನೆಟ್‌

10:01 PM Feb 01, 2020 | Team Udayavani |

ಕೇಂದ್ರ ಸರ್ಕಾರ ಟೆಕ್‌ ವಲಯದತ್ತ, ಅದರಲ್ಲೂ ಡಿಜಿಟಲ್‌ ಟೆಕ್ನಾಲಜಿಯತ್ತ ಹೆಚ್ಚು ಗಮನ ಹರಿಸಿರುವುದು ಈ ಬಾರಿಯ ಬಜೆಟ್‌ನಿಂದ ವೇದ್ಯವಾಗುತ್ತಿದೆ. ಮೊದಲನೆಯದಾಗಿ, ಇಡೀ ಭಾರತವನ್ನು ಒಂದೇ ಆಪ್ಟಿಕಲ್‌ ಫೈಬರ್‌ ಜಾಲದೊಂದಿಗೆ ಬೆಸೆಯುವ ಮಹತ್ವಾಕಾಂಕ್ಷಿ “ಭಾರತ್‌ನೆಟ್‌’ನ ಎಫ್ಟಿಟಿಎಚ್‌ ಸಂಪರ್ಕವನ್ನು ಈ ವರ್ಷಾಂತ್ಯದೊಳಗೆ 1 ಲಕ್ಷ ಹೆಚ್ಚುವರಿ ಗ್ರಾಮಗಳಿಗೆ ವಿಸ್ತರಿಸಲಾಗುವುದು ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಘೋಷಿಸಿದ್ದಾರೆ. ಈ ಕಾಮನ್‌ ಆಪ್ಟಿಕಲ್‌ ಫೈಬರ್‌ ನೆಟ್ವರ್ಕ್‌ ಯೋಜನೆಯು ವಿಶ್ವದಲ್ಲೇ ಅತಿದೊಡ್ಡದಾಗಿದ್ದು, ಅಂಗನವಾಡಿಗಳು, ಆರೋಗ್ಯ ಕೇಂದ್ರಗಳು, ಸರ್ಕಾರಿ ಶಾಲೆಗಳಿಗೆಲ್ಲ ಡಿಜಿಟಲ್‌ ಸಂಪರ್ಕ ಕಲ್ಪಿಸುವಲ್ಲಿ ಈ ಯೋಜನೆ ಗಮನಾರ್ಹ ಯಶಸ್ಸು ಪಡೆಯುತ್ತಿದೆ.

Advertisement

ಡಾಟಾ ಸೆಂಟರ್‌ ಪಾರ್ಕ್‌ ನೀತಿ: ಖಾಸಗಿ ಸಂಸ್ಥೆಗಳು ಸ್ಥಾಪಿಸುವ ಡೇಟಾ ಸೆಂಟರ್‌ಗಳಿಗಾಗಿ ಶೀಘ್ರದಲ್ಲೇ ನೀತಿ ನಿರೂಪಿಸುವ ಘೋಷಣೆ ಮಾಡಿದೆ ಕೇಂದ್ರ ಸರ್ಕಾರ. ಗಮನಾರ್ಹ ಸಂಗತಿಯೆಂದರೆ, ಈಗಾಗಲೇ ಹಲವು ಖಾಸಗಿ ಕಂಪನಿಗಳು ದೇಶದಲ್ಲಿ ಡಾಟಾ ಸೆಂಟರ್‌ಗಳನ್ನು ಸ್ಥಾಪಿಸಲು ಮುಂದಾಗಿದ್ದು, ಇವುಗಳಿಗೆ ಪೂರಕವಾಗುವುದಕ್ಕಾಗಿ ಕೇಂದ್ರ ಈ ನೀತಿಯನ್ನು ರೂಪಿಸುವ ಘೋಷಣೆ ಮಾಡಿದೆ. ವಿದೇಶದ ಟೆಕ್‌ ಕಂಪನಿಗಳು ಮತ್ತು ಭಾರತೀಯ ಸರ್ಕಾರದ ನಡುವೆ ಡಾಟಾ ವಿಚಾರವು ಬಹುಕಾಲದಿಂದ ಚರ್ಚೆಯ, ವಾದ-ವಿವಾದದ ವಿಷಯವಾಗಿದೆ.

ಭಾರತದಲ್ಲಿ ಮೊಬೈಲ್‌ ಟಾರಿಫ್ ದರದಲ್ಲಿನ ಕಡಿತ, ಅಗ್ಗದ ಮೊಬೈಲ್‌ಗಳು, 4ಜಿ ಕ್ರಾಂತಿಯಿಂದಾಗಿ ಅಂತರ್ಜಾಲ ಬಳಕೆದಾರರ ಸಂಖ್ಯೆ ಗಮನಾರ್ಹ ಪ್ರಮಾಣದಲ್ಲಿ ಅಧಿಕವಾಗಿದ್ದು, ಇದುವರೆಗೂ ಭಾರತೀಯರ ಡಾಟಾಗಳನ್ನು(ದತ್ತಾಂಶಗಳನ್ನು) ಶೇಖರಿಸಿಡುವಂಥ ಬೃಹತ್‌ ಘಟಕಗಳನ್ನು ನಮ್ಮಲ್ಲಿ ನಿರ್ಮಿಸಲಾಗಿಲ್ಲ. ಈಗಲೂ ಭಾರತೀಯ ಬಳಕೆದಾರರ ಡಾಟಾ ಸಮುದ್ರದಲ್ಲಿ ಹಾಸಲಾದ ಕೇಬಲ್ಗಳ ಮೂಲಕ ಹೋಗಿ, ವಿದೇಶಗಳ ವಿವಿಧ ಡಾಟಾ ಪಾರ್ಕುಗಳಲ್ಲಿ ಸ್ಟೋರ್‌ ಆಗುತ್ತಿದೆ.

ಭಾರತವು ಈ ನಿಟ್ಟಿನಲ್ಲಿ ಹೆಚ್ಚು ಗಮನ ಹರಿಸಿದರೆ, ಪ್ರಪಂಚದ ಅತಿದೊಡ್ಡ ಡಾಟಾ ಕೇಂದ್ರವಾಗಿ ಬದಲಾಗಬಹುದು ಎನ್ನುತ್ತಾರೆ ಮಹಾರಾಷ್ಟ್ರ ಕೈಗಾರಿಕಾ ಅಭಿವೃದ್ಧಿ ನಿಗಮದ( ಎಂಐಡಿಸಿ) ಸಿಇಒ ಅನ್‌ಬಳಗನ್‌. ಈ ವಿಚಾರದಲ್ಲಿ ಕಳೆದ ತಿಂಗಳಷ್ಟೇ, ಮಹಾರಾಷ್ಟ್ರ ಕೈಗಾರಿಕಾ ಅಭಿವೃದ್ಧಿ ನಿಗಮ(ಎಂಐಡಿಸಿ)ಯು 600 ಎಕರೆ ಜಮೀನಿನಲ್ಲಿ ದೇಶದ ಅತಿದೊಡ್ಡ ಡಾಟಾ ಪಾರ್ಕ್‌ ನಿರ್ಮಿಸುವ ಘೋಷಣೆ ಮಾಡಿರುವುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ಈಗ ಖಾಸಗಿ ಕಂಪನಿಗಳೂ ಸಣ್ಣ ಗಾತ್ರದ ಡಾಟಾ ಪಾರ್ಕ್‌ಗಳನ್ನು ಸ್ಥಾಪಿಸಲಾರಂಭಿಸಿದ್ದು, ಈ ವಿಚಾರದಲ್ಲಿ ನೀತಿ ನಿರೂಪಣೆ ಬಹುಮುಖ್ಯವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next