Advertisement

India; ಒಂದು ದೇಶ, ಎರಡು ಚಿನ್ನ: ಚೆಸ್‌ ವೀರರಿಗೆ ಅಭಿನಂದನೆ

11:03 PM Sep 23, 2024 | Team Udayavani |

ಹೊಸದಿಲ್ಲಿ: ಚೆಸ್‌ ಒಲಿಂಪಿಯಾಡ್‌ನ‌ಲ್ಲಿ ಐತಿಹಾಸಿಕ ಬಂಗಾರ ಗೆದ್ದ ಭಾರತೀಯ ಪುರುಷರ ಮತ್ತು ಮಹಿಳಾ ತಂಡಗಳಿಗೆ ಅಭಿನಂದನೆಗಳ ಮಹಾಪೂರವೇ ಹರಿದುಬಂದಿದೆ. ಪ್ರಧಾನಿ ನರೇಂದ್ರ ಮೋದಿ, ಚೆಸ್‌ ದಂತಕತೆ ವಿಶ್ವನಾಥನ್‌ ಆನಂದ್‌, ಕ್ರಿಕೆಟ್‌ ದಿಗ್ಗಜ ಸಚಿನ್‌ ತೆಂಡುಲ್ಕರ್‌ ಸೇರಿ ಅನೇಕರು ಶುಭ ಹಾರೈಸಿದ್ದಾರೆ. “ಒಂದು ದೇಶ, ಎರಡು ಚಿನ್ನ’ ಎಂಬುದು ತೆಂಡುಲ್ಕರ್‌ ಶ್ಲಾಘನೆ.

Advertisement

ಹಂಗೇರಿಯ ಬುಡಾಪೆಸ್ಟ್‌ನಲ್ಲಿ ಮುಕ್ತಾಯಗೊಂಡ 45ನೇ ಚೆಸ್‌ ಒಲಿಂಪಿಯಾಡ್‌ನ‌ 11ನೇ ಮತ್ತು ಅಂತಿಮ ಸುತ್ತಿನಲ್ಲಿ ಭಾರತ ಪುರುಷರ ತಂಡ ಸ್ಲೊವೇನಿಯಾ ವಿರುದ್ಧ, ಮಹಿಳಾ ತಂಡ ಅಜರ್‌ಬೈಜಾನ್‌ ವಿರುದ್ಧ ಗೆದ್ದು ಎರಡೂ ವಿಭಾಗಳಲ್ಲೂ ಬಂಗಾರದ ಮೆರಗು ಮೂಡಿಸಿತ್ತು. ಈ ಕೂಟದಲ್ಲಿ ಭಾರತದ ಎರಡೂ ತಂಡಗಳಿಗೆ ಒಲಿದ ಚೊಚ್ಚಲ ಬಂಗಾರವಿದು. ಹೀಗಾಗಿ ಇಡೀ ಕ್ರೀಡಾಲೋಕವೇ ಈಗ ಭಾರತೀಯ ಚೆಸ್‌ನತ್ತ ತಿರುಗಿ ನೋಡುತ್ತಿದೆ.

ವಿಶ್ವನಾಥನ್‌ ಆನಂದ್‌ ಮೆಚ್ಚುಗೆ
ಬಂಗಾರ ಗೆದ್ದ ಭಾರತೀಯ ಚೆಸ್‌ ತಂಡದ ಸಾಧನೆಗೆ 5 ಬಾರಿಯ ವಿಶ್ವ ಚಾಂಪಿಯನ್‌ ವಿಶ್ವನಾಥನ್‌ ಆನಂದ್‌ ಭಾರೀ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನಾನೊಂದು ವೇಳೆ ಆಡಲು ಬಯಸಿದ್ದರೆ, ಇಂಥ ತಂಡದೊಂದಿಗೆ ಆಡುತ್ತಿದ್ದೆ ಎಂದು ವಿಶಿ ಹೇಳಿದ್ದಾರೆ. ವಿಜೇತರಿಗೆ ಆನಂದ್‌ ಅವರೇ ಟ್ರೋಫಿ ನೀಡಿದ್ದು ವಿಶೇಷವಾಗಿತ್ತು.

ಡಿ. ಗುಕೇಶ್‌, ಆರ್‌.ಪ್ರಜ್ಞಾನಂದ, ಅರ್ಜುನ್‌ ಎರಿಗೇಸಿ ಮತ್ತು ಆರ್‌. ವೈಶಾಲಿ ಅವರೆಲ್ಲ “ವೆಸ್ಟ್‌ ಬ್ರಿಡ್ಜ್ ಆನಂದ್‌ ಚೆಸ್‌ ಅಕಾಡೆಮಿ’ಯಲ್ಲಿ ಪಳಗಿದವರು ಎನ್ನುವುದು ವಿಶೇಷ.

ಸಚಿನ್‌ ಅಭಿನಂದನೆ
ಚೆಸ್‌ ಬಂಗಾರ ಗೆದ್ದ ಭಾರತೀಯ ತಂಡಗಳಿಗೆ ಅಭಿನಂದಿಸಿರುವ ಸಚಿನ್‌ ತೆಂಡುಲ್ಕರ್‌, “ಒಂದು ದೇಶ, ಎರಡು ಚಿನ್ನ’ ಎಂದು ಶ್ಲಾಘಿಸಿದ್ದಾರೆ.

Advertisement

ರೋಹಿತ್ ಶೈಲಿ ಅನುಕರಣೆ

ಚೆಸ್‌ ಒಲಿಂಪಿಯಾಡ್‌ ಟ್ರೋಫಿ ವಿತರಿಸುವಾಗ ಗುಕೇಶ್‌ ಮತ್ತು ಡಿ. ಹರಿಕಾ ಇಬ್ಬರೂ, ಟಿ20 ವಿಶ್ವಕಪ್‌ ಪ್ರಶಸ್ತಿ ವಿತರಣೆ ವೇಳೆ ಭಾರತದ ನಾಯಕ ರೋಹಿತ್‌ ಶರ್ಮ ಮೆಲ್ಲನೆ ಹೆಜ್ಜೆಯಿಟ್ಟು ಟ್ರೋಫಿಯೆಡೆಗೆ ಬಂದಂತೆ ಅನುಕರಿಸಿ ಗಮನ ಸೆಳೆದರು. ಅಂದು ರೋಹಿತ್‌, ಫ‌ುಟ್‌ಬಾಲ್‌ ದಂತಕತೆ ಲಿಯೋನೆಲ್‌ ಮೆಸ್ಸಿ ಅವರಂತೆ ಸ್ಲೋ ವಾಕ್‌ ಸಂಭ್ರಮಾಚರಣೆ ಮಾಡಿದ್ದರು.

ಭಾರತ ಕನಸುಗಳಿಂದ ತುಂಬಿದೆ: ಮೋದಿ
ಪ್ರಧಾನಿ ನರೇಂದ್ರ ಮೋದಿ ಯವರು ಅಮೆರಿಕದಿಂದಲೇ ಭಾರತದ ಚೆಸ್‌ ತಂಡಗಳಿಗೆ ಅಭಿನಂದಿಸಿದ್ದಾರೆ. ಭಾರತೀಯರ ಚೆಸ್‌ ಸಾಧನೆಯನ್ನು ಮುಂದಿಟ್ಟು ನ್ಯೂಯಾರ್ಕ್‌ನಲ್ಲಿ ಮಾತನಾಡಿ ರುವ ಮೋದಿ, ಭಾರತ ದೇಶ ಶಕ್ತಿ ಮತ್ತು ಕನಸುಗಳಿಂದ ತುಂಬಿದೆ ಎಂದು ಕೊಂಡಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next