ಜಗತ್ತಿನೆದುರು ಇಡೀ ದೇಶವೇ ತಲೆತಗ್ಗಿಸುವಂತಾಗಿದೆ.
Advertisement
ಯಕಶ್ಚಿತ್ ಒಬ್ಬ ಧಾರ್ಮಿಕ ನಾಯಕನ ಬೆಂಬಲಿಗರ ಪುಂಡಾಟಿಕೆಯನ್ನು ನಿಯಂತ್ರಿಸಲು ಸಾಧ್ಯವಾಗದೆ ಹೋದದ್ದು ನಮ್ಮನ್ನಾಳುವ ಒಟ್ಟು ವ್ಯವಸ್ಥೆಯ ವೈಫಲ್ಯಕ್ಕೆ ಹಿಡಿದಿರುವ ಕೈಗನ್ನಡಿ. ನ್ಯಾಯಾಲಯ ಅತ್ಯಾಚಾರ ಪ್ರಕರಣದ ತೀರ್ಪು ಪ್ರಕಟಿಸುವ ದಿನ ರಾಮ್ ರಹೀಂ ಸಿಂಗ್‌ನ ಅನುಯಾಯಿಗಳು ಹಿಂಸಾಚಾರ ಎಸಗಲಿದ್ದಾರೆ ಎಂಬ ವಿಚಾರವನ್ನು ತಿಳಿಸಲು ಗುಪ್ತಚರ ಪಡೆಯ ಅಗತ್ಯವೇನೂ ಇರಲಿಲ್ಲ. ಏಕೆಂದರೆ ಹಿಂದೆಯೂ ಇಂಥ ದೃಷ್ಟಾಂತಗಳಿದ್ದವು. ಅಲ್ಲದೆ ಈ ಸಲ ಸ್ವತಹ ಅನುಯಾಯಿಗಳೇ ನಮ್ಮ ಬಾಬಾಗೆ ಶಿಕ್ಷೆಯಾದರೆ ದೇಶ ಹೊತ್ತಿ ಉರಿಯಲಿದೆ ಎಂದು ಬಹಿರಂಗವಾಗಿ ಬೆದರಿಕೆ ಹಾಕಿದ್ದರು. ಇದರ ಹೊರತಾಗಿಯೂ ಹರ್ಯಾಣ ಸರಕಾರವಾಗಲಿ, ಕೇಂದ್ರ ಸರಕಾರವಾಗಲಿ ಸಾಕಷ್ಟು ಮುನ್ನೆಚ್ಚರಿಕೆ ವಹಿಸಿಕೊಳ್ಳಲಿಲ್ಲ. ತಪ್ಪುಗಳ ಮೇಲೆ ತಪ್ಪುಗಳನ್ನು ಮಾಡುತ್ತಾ ಹೋದ ಸರಕಾರ ನ್ಯಾಯಾಲಯ ನೀಡಿದ ತಪರಾಕಿ ಸರಿಯಾಗಿಯೇ ಇದೆ.
ಬರುವ ಆದಾಯದ ಲೆಕ್ಕವನ್ನು ಯಾವ ಅಧಿಕಾರಿಯೂ ಕೇಳುವುದಿಲ್ಲ. ಕೋಟ್ಯಂತರ ಭಕ್ತರನ್ನು ಹೊಂದಿರುವ ಇಂತಹ ಸ್ವಾಮೀಜಿಗಳನ್ನು ಎದುರು ಹಾಕಿಕೊಳ್ಳುವಂತಹ ದಿಟ್ಟತನ ಯಾವ ರಾಜಕೀಯ ನಾಯಕರಿಗೂ ಇಲ್ಲ. ಚುನಾವಣೆ ಕಾಲದಲ್ಲಿ ರಾಜಕೀಯ ನಾಯಕರು ಧರ್ಮಗುರುಗಳ ಬಳಿ ಬೆಂಬಲ ಯಾಚಿಸುವುದು, ಅಧಿಕಾರಕ್ಕೆ ಬಂದ ನಂತರ ಅವರ ಸೇವೆಗೆ ಟೊಂಕ ಕಟ್ಟಿ ನಿಲ್ಲುವುದು ಇವೆಲ್ಲ ತಪ್ಪು ಎಂದು ಯಾರಿಗೂ ಅನ್ನಿಸುವುದಿಲ್ಲ. ಯೋಗ, ಸಾಂಪ್ರದಾಯಿಕ ಔಷಧ ಪದ್ಧತಿ ಮುಂತಾದ ಸನಾತನ ವಿಚಾರಗಳು ಕೂಡ ಈ ಬಾಬಾಗಳ ಪಾಲಿಗೆ ಅಗಣಿತ ಸಂಪತ್ತು ತಂದುಕೊಡುವ ಸರಕುಗಳಾಗಿ ಬದಲಾಗಿವೆ.
Related Articles
ಧರ್ಮಗುರುವೂ ತನ್ನದೇ ಸಾಮ್ರಾಜ್ಯ ಕಟ್ಟಿಕೊಂಡು ಮೆರೆಯುತ್ತಿರುವ ಪಾಳೇಗಾರನಂತಿದ್ದಾನೆ. ಜನರ ಮುಗ್ಧತೆ, ಅಮಾಯಕತನ ಮತ್ತು ನಂಬಿಕೆಗಳೇ ಇಂತಹ ಧಾರ್ಮಿಕ ಮುಖಂಡರ ಬಂಡವಾಳ. ಎಲ್ಲಿಯವರಗೆ ತಮ್ಮನ್ನು ಕುರುಡಾಗಿ ನಂಬುವ ಜನರಿರುತ್ತಾರೋ ಅಲ್ಲಿಯ ತನಕ ರಾಮ್ ರಹೀಮ್‌ನಂತಹ ಬಾಬಾಗಳು ಹುಟ್ಟುತ್ತಲೇ ಇರುತ್ತಾರೆ. ಹಾಗೆಂದು ಎಲ್ಲ ಧಾರ್ಮಿಕ ಮುಖಂಡರು ಈ ರೀತಿ ಇದ್ದಾರೆ ಎಂದಲ್ಲ. ಏನೇ ಆದರೂ ಧಾರ್ಮಿಕ ಮುಖಂಡರ ಆಸ್ತಿ ವಿವರ ಮತ್ತು ಆಶ್ರಮದ ಚಟುವಟಿಕೆಗಳ ಮೇಲೆ ಕಣ್ಣಿಡುವ ಅಗತ್ಯವಂತೂ ಇದೆ.
Advertisement