Advertisement

ನಿರ್ಣಾಯಕ ಹಂತದಲ್ಲಿ ಸೋಲುವ ಕಾಯಿಲೆಗೆ ಔಷಧ ಬೇಕು!

11:39 PM Nov 11, 2022 | Team Udayavani |

ಭಾರತ ಕ್ರಿಕೆಟ್‌ ಎಂದಿಗೂ ತನ್ನ ಮಾಜಿ ನಾಯಕ ಸೌರವ್‌ ಗಂಗೂಲಿ ಯನ್ನು ಮರೆಯುವಂತೆಯೇ ಇಲ್ಲ. ಇವರು ನಾಯಕರಾಗಿದ್ದಾಗಲೇ ತಂಡದಲ್ಲೊಂದು ಹೋರಾಟಕಾರಿ ಕಿಚ್ಚು ಕಾಣಿಸಿಕೊಂಡಿದ್ದು. ವಿಶ್ವದ ಬಲಿಷ್ಠ ದೇಶಗಳಿಗೆ ಹೋಗಿ, ಅವರನ್ನು ಅವರ ನೆಲದಲ್ಲೇ ಸೋಲಿಸುವ ತಾಕತ್ತನ್ನು ಭಾರತ ತೋರಿಸಿದ್ದು ಆಗಲೇ. ಆದರೆ ಅದೇ ತಂಡ ಒಂದು ದೊಡ್ಡ ದೌರ್ಬಲ್ಯವನ್ನು ತೆರೆದಿರಿಸಿತು. ಈ ತಂಡ ಅದ್ಭುತವಾಗಿ ಆಡಿ ಫೈನಲ್‌ವರೆಗೆ ತೆರಳುತ್ತಿತ್ತು. ಅಲ್ಲಿ ಮಾತ್ರ ಸೋಲುತ್ತಿತ್ತು!

Advertisement

2003ರ ಏಕದಿನ ವಿಶ್ವಕಪ್‌ ಫೈನಲ್‌ನಲ್ಲಿ ಭಾರತ, ಆಸ್ಟ್ರೇಲಿಯ ವಿರುದ್ಧ ಸೋತಿದ್ದನ್ನೂ ಅಭಿಮಾನಿಗಳು ಎಂದಿಗೂ ಮರೆಯಲಾರರು. ಗಂಗೂಲಿ ಅವಧಿಯಲ್ಲಿ ಫೈನಲ್‌ನಲ್ಲಿ ಸೋತ ಪಂದ್ಯಗಳು ಒಂದೆರಡಲ್ಲ. ಅದರಲ್ಲಿ ಅರ್ಧದಷ್ಟು ಕಪ್‌ ಗಳನ್ನು ಭಾರತ ಗೆದ್ದಿದ್ದರೂ ಸೌರವ್‌ ಗಂಗೂಲಿ ಪ್ರಶ್ನಾತೀತ ಸಾರ್ವಕಾಲಿಕ ಶ್ರೇಷ್ಠ ಭಾರತೀಯ ನಾಯಕರಾಗಿರುತ್ತಿದ್ದರು!

ಅನಂತರ ಭಾರತೀಯ ನಾಯಕತ್ವವನ್ನು ದೀರ್ಘ‌ಕಾಲಕ್ಕೆ ವಹಿಸಿ ಕೊಂಡಿದ್ದು ಎಂ.ಎಸ್‌.ಧೋನಿ. ಫೈನಲ್‌, ಸೆಮಿಫೈನಲ್‌ನಲ್ಲಿ ಸೋಲುವ ಈ ರೋಗಕ್ಕೆ ಅವರು ಚಿಕಿತ್ಸೆ ನೀಡಿದರು. ಅವರ ಕಾಲದಲ್ಲಿ ಭಾರತ ಎರಡು ವಿಶ್ವಕಪ್‌, ಒಂದು ಚಾಂಪಿಯನ್ಸ್‌ ಟ್ರೋಫಿಯನ್ನು ಜಯಿಸಿತು. ಅನಂತರ ವಿರಾಟ್‌ ಕೊಹ್ಲಿ ಹೊಣೆ ಹೊತ್ತುಕೊಂಡರು. ಈ ತಂಡದ್ದೂ ಇದೇ ಸಮಸ್ಯೆ. 2017ರ ಚಾಂಪಿಯನ್ಸ್‌ ಟ್ರೋಫಿ ಫೈನಲ್‌ನಲ್ಲಿ ಭಾರತ, ಪಾಕ್‌ ವಿರುದ್ಧ ಸೋತುಹೋಗಿತ್ತು. 2019ರ ಏಕದಿನ ವಿಶ್ವಕಪ್‌ ಸೆಮಿಫೈನಲ್‌ನಲ್ಲಿ ನ್ಯೂಜಿಲೆಂಡ್‌ ವಿರುದ್ಧ ಕೈಚೆಲ್ಲಿತ್ತು. 2021ರ ಟಿ20 ವಿಶ್ವಕಪ್‌ ಲೀಗ್‌ ಹಂತದಲ್ಲೇ ಹೊರಬಿದ್ದಿತ್ತು. ಇದೀಗ ನಾಯಕತ್ವ ರೋಹಿತ್‌ ಶರ್ಮ ಹೆಗಲೇರಿದೆ. ಪರಿಸ್ಥಿತಿಯಲ್ಲಿ ಮಾತ್ರ ಯಾವುದೇ ವ್ಯತ್ಯಾಸವೂ ಆಗಿಲ್ಲ!

ಮತ್ತೆ ಇಂಗ್ಲೆಂಡ್‌ ವಿರುದ್ಧ ಸೆಮಿಫೈನಲ್‌ನಲ್ಲಿ ಹೀನಾಯ ಸೋಲು. ಅಲ್ಲಿಯವರೆಗೆ ಹೊಗಳುತ್ತಿದ್ದ ಅಭಿಮಾನಿಗಳು, ಒಮ್ಮೆಲೆ ತಿರುಗಿ ಬಿದ್ದಿದ್ದಾರೆ. ಈ ತಂಡಕ್ಕೆ ಯೋಗ್ಯತೆಯೇ ಇಲ್ಲ, ಹಿರಿಯರನ್ನು ಕಿತ್ತು ಹಾಕಬೇಕು, ಅದು ಸರಿಯಿಲ್ಲ, ಇದು ಸರಿಯಿಲ್ಲ ಎಂದು ಅನಿಸಿದಂತೆಲ್ಲ ವಿಶ್ಲೇಷಿಸಲಾಗುತ್ತಿದೆ. ಆದರೆ ಅರ್ಥ ಮಾಡಿಕೊಳ್ಳಬೇಕಾದ ಒಂದು ವಿಚಾರವೆಂದರೆ ಹತ್ತಾರು ವರ್ಷಗಳಿಂದ ಭಾರತ ನಿರ್ಣಾಯಕ ಹಂತದಲ್ಲಿ ಸೋಲುವ ಒಂದು ಸ್ವಭಾವವನ್ನು ಬೆಳೆಸಿಕೊಂಡಿದೆ. ಏನೇ ಮಾಡಿದರೂ ಅದು ಸರಿಯಾಗುತ್ತಿಲ್ಲ. ಇದಕ್ಕೆ ಒಂದು ಔಷಧವನ್ನು ತುರ್ತಾಗಿ ಕಂಡುಹಿಡಿಯಲೇಬೇಕು.

ಇಂತಹದ್ದೇ ಒಂದು ರೋಗ ದ.ಆಫ್ರಿಕಾಕ್ಕೂ ಇದೆ. ಅತ್ಯಂತ ಒತ್ತಡ ಎದುರಾದರೆ ಆ ತಂಡ ಸೋತುಹೋಗುತ್ತದೆ. ಫೈನಲ್‌ನಲ್ಲಿ ಸೋಲುವ ಕಾಯಿಲೆ ನ್ಯೂಜಿಲೆಂಡ್‌ಗೂ ಇದೆ. ಅದು ಎರಡು ಏಕದಿನ, ಒಂದು ಟಿ20 ವಿಶ್ವಕಪ್‌ ಫೈನಲ್‌ಗ‌ಳಲ್ಲಿ ಸತತವಾಗಿ ಸೋತುಹೋಗಿದೆ. ಹೀಗೆ ಸೋಲುವ ಚಾಳಿ ಹೊಂದಿರುವ ನ್ಯೂಜಿಲೆಂಡ್‌ ವಿರುದ್ಧವೂ ಭಾರತ ಟೆಸ್ಟ್‌ ವಿಶ್ವಕಪ್‌ ಫೈನಲ್‌ನಲ್ಲಿ ಸೋತಿದೆ! ಈಗ ಭಾರತ ತಂಡದಲ್ಲಿ ಎಲ್ಲಿ ಲೋಪವಾಗುತ್ತಿದೆ ಎನ್ನುವುದನ್ನು ಊಹಿಸಿ.

Advertisement

ತಂಡದ ಆರಂಭಿಕರು ವಿಫ‌ಲರಾಗುತ್ತಿದ್ದಾರೆ, ಬೌಲಿಂಗ್‌ನಲ್ಲಿ ಮೊನಚಿಲ್ಲ, ಹಿರಿಯರನ್ನೆಲ್ಲ ತೆಗೆಯಬೇಕು… ಇವೆಲ್ಲ ತಂಡ ಸೋತಾಗ ಕೇಳಿಬರುವ ಅವೇ ಹಳೆಯ ರಾಗಗಳು. ಸೆಮಿಫೈನಲ್‌ ಕೂಡ ಸೇರಿ ಇಡೀ ಕೂಟದಲ್ಲಿ ಅದ್ಭುತವಾಗಿ ಆಡಿದ ಕೊಹ್ಲಿಯನ್ನು ಯಾವ ಮಾನದಂಡದಲ್ಲಿ ತೆಗೆಯುತ್ತೀರಿ, ಹಾಗೆ ತೆಗೆದರೆ ತಂಡದ ಪರಿಸ್ಥಿತಿ ಸರಿಯಾಗುತ್ತದೆಯಾ? ಇವನ್ನೆಲ್ಲ ವಿವೇಚಿಸಲೇಬೇಕು. ಒಂದು ಉತ್ತರ ಪಡೆದುಕೊಳ್ಳಲೇಬೇಕು.

Advertisement

Udayavani is now on Telegram. Click here to join our channel and stay updated with the latest news.

Next