Advertisement

ಭಾರತವೂ ವಿಶ್ವಕಪ್‌ ಫ‌ುಟ್‌ಬಾಲ್‌ ಆಡಬೇಕು!

06:15 AM Jun 11, 2018 | Team Udayavani |

ಫ‌ುಟ್‌ಬಾಲ್‌ ಜ್ವರ ಇಡೀ ಜಗತ್ತನ್ನೇ ಆವರಿಸಿದೆ. ಭಾರತದಲ್ಲೂ ಈ ಕ್ರೇಜ್‌ ಹೆಚ್ಚತೊಡಗಿದೆ…
ತನ್ನ ನೂರನೇ ಪಂದ್ಯವನ್ನು ಮೊನ್ನೆ ತಾನೇ ಕೀನ್ಯ ವಿರುದ್ಧ ಮುಂಬಯಿಯಲ್ಲಿ ಆಡಿದ ಸುನೀಲ್‌ ಚೆಟ್ರಿ ಕರೆಗೆ ಓಗೊಟ್ಟು ಸಾವಿರ ಸಾವಿರ ಪ್ರೇಕ್ಷಕರು ಸ್ಟೇಡಿಯಂಗೆ ಧಾವಿಸಿದ್ದು ಒಂದು ರೋಮಾಂಚಕಾರಿ ಸನ್ನಿವೇಶ. 

Advertisement

ಅಂತಾರಾಷ್ಟ್ರೀಯ ಮಟ್ಟದಲ್ಲಿ ಮೂರನೇ ಹ್ಯಾಟ್ರಿಕ್‌ ಗೋಲನ್ನು ಪ್ರೇಕ್ಷಕರೇ ಇಲ್ಲದೆ ಖಾಲಿಯಾಗಿದ್ದ ಕ್ರೀಡಾಂಗಣದಲ್ಲಿ ಹೊಡೆದಿದ್ದ ನಾಯಕ ಚೆಟ್ರಿ, “ನಮ್ಮನ್ನು ಬೇಕಿದ್ದರೆ ಬಯ್ಯಿರಿ, ಟೀಕಿಸಿರಿ. 

ಆದರೆ, ಭಾರತದ ರಾಷ್ಟ್ರೀಯ ಫ‌ುಟ್‌ಬಾಲ್‌ ತಂಡ ಆಡುವುದನ್ನು ವೀಕ್ಷಿಸಲು ಮೈದಾನಕ್ಕೆ ಬನ್ನಿ’ ಎಂದು ಅಭಿಮಾನಿಗಳಿಗೆ ಮನವಿ ಮಾಡಿದ್ದರು. ಕ್ರಿಕೆಟಿಗರು, ಸೆಲೆಬ್ರಿಟಿಗಳು ಎಲ್ಲರೂ ಚೆಟ್ರಿ ಬೆಂಬಲಕ್ಕೆ ನಿಂತರು. ಪರಿಣಾಮ, ಪಂದ್ಯದ ಎಲ್ಲ ಟಿಕೆಟ್‌ಗಳೂ ಮಾರಾಟವಾಗಿ ಪ್ರೇಕ್ಷಕರ ಗ್ಯಾಲರಿಗಳು ತುಂಬಿ ತುಳುಕಿದವು!
ಭಾರತದಲ್ಲೂ ಫ‌ುಟ್‌ಬಾಲನ್ನು ಪ್ರೀತಿಸುವವರು ಇದ್ದಾರೆ ಎಂದಾಯಿತು!

ಫಿಫಾದ ಮಾಜಿ ಅಧ್ಯಕ್ಷ ಸೆಪ್‌ ಬ್ಲಾಟರ್‌ 2017ರಲ್ಲಿ ಅಂಡರ್‌-17 ಫಿಫಾ ವಿಶ್ವಕಪ್‌ ಟೂರ್ನಿಯನ್ನು ಆಯೋಜಿಸುವ ಹೊಣೆಯನ್ನು ಭಾರತಕ್ಕೆ ವಹಿಸಿದಾಗ ಹಾಗೂ ಭಾರತ ಅದನ್ನು ಯಶಸ್ವಿಯಾಗಿ ನಿಭಾಯಿಸಿದಾಗ ಇಲ್ಲಿಯೂ ಕಾಲ್ಚೆಂಡಿನ ಆಟಕ್ಕೆ ಭವಿಷ್ಯವಿದೆ ಎಂದು ಕೆಲವರಿಗಾದರೂ ಅನ್ನಿಸಿತು. ಕೂಟದಲ್ಲಿದ್ದ ತಂಡಗಳ ಪೈಕಿ ಕನಿಷ್ಠ ರ್‍ಯಾಂಕಿಂಗ್‌ ಹೊಂದಿದ್ದ ಭಾರತ, ಪಂದ್ಯಾವಳಿಯ ಕೊನೆಯಲ್ಲೂ ಅಂಕಪಟ್ಟಿಯಲ್ಲಿ ಕೆಳಗೇ ಉಳಿಯಿತು. ಅಮೆರಿಕ, ಕೊಲಂಬಿಯಾ, ಘಾನಾ ವಿರುದ್ಧ ಸೋತಿತಾದರೂ ಎಳೆಯ ಪ್ರತಿಭೆಗಳ ಚಳಕ, ಕೌಶಲ ಜಗತ್ತಿನ ಗಮನ ಸೆಳೆಯಿತು. ಕೋಲ್ಕತಾದಲ್ಲಿ ನಡೆದ ಲೀಗ್‌ ಹಂತದ ಪಂದ್ಯಗಳೂ ಸಾವಿರಾರು ಪ್ರೇಕ್ಷಕರನ್ನು ಆಕರ್ಷಿಸಿದವು.

ಭಾರತದಲ್ಲೂ ಫಿಫಾ ಕೂಟಗಳನ್ನು ಯಶಸ್ವಿಯಾಗಿ ಸಂಘಟಿಸುತ್ತದೆ ಎಂದಾಯಿತು!
ನೂರರೊಳಗೆ ಬಂದೆವು!

ಫ‌ುಟ್‌ಬಾಲ್‌ನಲ್ಲಿ ಭಾರತ 21 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ 100ರೊಳಗಿನ ರ್‍ಯಾಂಕಿಂಗ್‌ ಗಳಿಸಿದೆ. ಈಗ 96ನೇ ಸ್ಥಾನದಲ್ಲಿರುವ ಭಾರತ ಫ‌ುಟ್‌ಬಾಲ್‌ ಅಂಗಣದಲ್ಲೂ ನಿಧಾನವಾಗಿ ಅಂಬೆಗಾಲಿಡುತ್ತಿದೆ.  2017ರಲ್ಲಿ ಆಡಿದ 13 ಪಂದ್ಯಗಳಲ್ಲೂ ಭಾರತ ಗೆದ್ದು ಅಥವಾ ಡ್ರಾ ಮಾಡಿಕೊಂಡು ಅಜೇಯವಾಗಿ ಉಳಿಯಿತು. 2019ರಲ್ಲಿ ನಡೆಯುವ ಏಶ್ಯನ್‌ ಕಪ್‌ ಪಂದ್ಯಾವಳಿಯಲ್ಲಿ ಸ್ಥಾನ ಗಳಿಸಲೂ ಹೆಚ್ಚು ಬೆವರು ಹರಿಸಬೇಕಾಗಿ ಬರಲಿಲ್ಲ. ಇತಿಹಾಸದಲ್ಲಿ ಕೇವಲ 4ನೇ ಬಾರಿಗೆ ಈ ಸಾಧನೆ ಮಾಡಿದೆ.

Advertisement

ಏಶ್ಯ ಮಟ್ಟದಲ್ಲಿ ಭಾರತದ ಸಾಮರ್ಥ್ಯ ಗಮನಾರ್ಹ ಮಟ್ಟದಲ್ಲಿದೆ ಎಂದಾಯಿತು!
ವಿಶ್ವಕಪ್‌ ಪರ್ವಕಾಲ

ಇದು ವಿಶ್ವಕಪ್‌ ಪರ್ವಕಾಲ. ಭಾರತದಲ್ಲೂ ಫ‌ುಟ್‌ಬಾಲ್‌ ಪ್ರೇಮಿಗಳಿದ್ದಾರೆ. ಅವರೆಲ್ಲ ರಾತ್ರಿ ಕಣ್ಣಿಗೆ ಎಣ್ಣೆ ಬಿಟ್ಟು ರೋಚಕ ಪಂದ್ಯಗಳನ್ನು ವೀಕ್ಷಿಸುತ್ತಾರೆ. ಆದರೆ ಇದು ಇಷ್ಟಕ್ಕೇ ನಿಲ್ಲಬಾರದು. ಫ‌ುಟ್‌ಬಾಲ್‌ ಭವಿಷ್ಯದ ಬಗ್ಗೆ ಚರ್ಚೆಗಳು, ಪ್ರಯತ್ನಗಳು ದೊಡ್ಡ ಮಟ್ಟದಲ್ಲಿ ನಡೆಯಬೇಕಿವೆ. ಫ‌ುಟ್‌ಬಾಲ್‌ ಕ್ರೀಡಾಂಗಣ, ತರಬೇತುದಾರರ ಸಂಖ್ಯೆಯಲ್ಲಿ ಹೆಚ್ಚಳವಾಗಬೇಕಿದೆ. ಆಡಬೇಕೆಂದರೂ ಸೌಲಭ್ಯವಿಲ್ಲದೆ ಫ‌ುಟ್‌ಬಾಲ್‌ ಪ್ರತಿಭೆಗಳು ಸೊರಗಬಾರದು. ಇಂಡಿಯನ್‌ ಸೂಪರ್‌ ಲೀಗ್‌, ಸಂತೋಷ್‌ ಟ್ರೋಫಿಯಂತಹ ಪಂದ್ಯಾವಳಿಗಳು ಆಶಾಕಿರಣಗಳಂತಿವೆ.

ಭಾರತ ಕೂಡ ಮುಂದೊಂದು ದಿನ ಫಿಫಾ ವಿಶ್ವಕಪ್‌ ಫ‌ುಟ್‌ಬಾಲ್‌ ಪಂದ್ಯಾವಳಿಯಲ್ಲಿ ಆಡಬೇಕು, ಮಿಂಚಬೇಕು. ಇದು ನಮ್ಮ ಕನಸು.

– ಅನಂತ ಹುದೆಂಗಜೆ

Advertisement

Udayavani is now on Telegram. Click here to join our channel and stay updated with the latest news.

Next