ಶ್ರೀನಗರ : ಭಯೋತ್ಪಾದನೆಯಿಂದ ನಲುಗುತ್ತಿರುವ ರಾಜ್ಯದಲ್ಲಿ ರಕ್ತಪಾತವನ್ನು ಕೊನೆಗೊಳಿಸಲು ಭಾರತ, ಪಾಕಿಸ್ಥಾನದೊಂದಿಗೆ ಮಾತುಕತೆ ನಡೆಸಬೇಕು ಎಂದು ಜಮ್ಮು ಕಾಶ್ಮೀರ ಮುಖ್ಯಮಂತ್ರಿ ಮೆಹಬೂಬ ಮುಫ್ತಿ ಇಂದು ಸೋಮವಾರ ಕರೆ ನೀಡಿದ್ದಾರೆ.
ಜಮ್ಮು ಕಾಶ್ಮೀರದಲ್ಲಿ ರಕ್ತಪಾತವನ್ನು ಕೊನೆಗೊಳಿಸುವುದಕ್ಕೆ ಪಾಕಿಸ್ಥಾನದೊಂದಿಗೆ ಮಾತುಕತೆ ನಡೆಸುವ ಅಗತ್ಯವಿದೆ ಎಂದು ರಾಜ್ಯ ವಿಧಾನಸಭೆಯಲ್ಲಿಂದು ಸಿಎಂ ಮೆಹಬೂಬ ಮುಫ್ತಿ ಹೇಳಿದರು.
ಆದರೆ ಇಂತಹ ಹೇಳಿಕೆಯನ್ನು ನೀಡುವ ಮೂಲಕ ನನ್ನನ್ನು ರಾಷ್ಟ್ರೀಯ ಚ್ಯಾನಲ್‌ಗಳು ರಾಷ್ಟ್ರ ವಿರೋಧಿ ಎಂದು ಬಿಂಬಿಸಲಿವೆ ಎಂದು ಮೆಹಬೂಬ ಹೇಳಿದರು.
“ನನ್ನನ್ನು ಟಿವಿ ಚ್ಯಾನಲ್‌ಗಳು ಇಂದು ರಾಷ್ಟ್ರ ವಿರೋಧಿ ಎಂದು ಜರೆಯಲಿವೆ ಎಂಬುದು ನನಗೆ ಗೊತ್ತಿದೆ. ಜಮ್ಮು ಕಾಶ್ಮೀರದ ಜನರು ಭಯೋತ್ಪಾದನೆಯ ರಕ್ತಪಾತದಿಂದ ನಲುಗುತ್ತಿದ್ದಾರೆ. ನಾವು ಪಾಕಿಸ್ಥಾನದ ಜತೆಗೆ ಮಾತುಕತೆ ನಡೆಸಬೇಕು; ಏಕೆಂದರೆ ಯುದ್ಧವೇ ಒಂದು ಆಯ್ಕೆ ಅಲ್ಲ’ ಎಂದು ಮೆಹಬೂಬ ಹೇಳಿದರು.
ಪಾಕ್ ಸೈನಿಕರು ಅವಿರತವಾಗಿ ಗಡಿಯಲ್ಲಿ ಗುಂಡಿನ ದಾಳಿ ನಡೆಸುವುದು, ಕದನ ವಿರಾಮ ಉಲ್ಲಂಘನೆ ಮಾಡುವುದು, ಉಗ್ರರನ್ನು ರವಾನಿಸುವುದು, ಭಾರತೀಯ ಜವಾನರು ಉಗ್ರರೊಂದಿಗೆ ಹೋರಾಟದಲ್ಲಿ ಸಾಯುತ್ತಿರುವುದು – ಇವೇ ಮೊದಲಾದ ಕಾರಣಗಳಿಗೆ ಜಮ್ಮು ಕಾಶ್ಮೀರದಲ್ಲಿ ರಕ್ತ ಪಾತ ನಡೆಯತ್ತಿದೆ. ಇದಕ್ಕೆ ಕೊನೆ ಹಾಡಲು ಪಾಕ್ ಜತೆ ಮಾತುಕತೆ ನಡೆಸುವುದೇ ಸೂಕ್ತ ಎಂದು ಸಿಎಂ ಮೆಹಬೂಬ ಹೇಳಿದರು.