ಹೊಸದಿಲ್ಲಿ: ವನಿತಾ ಹಾಕಿ ವಿಶ್ವಕಪ್‌ನಲ್ಲಿ ಶ್ರೇಷ್ಠ ನಿರ್ವಹಣೆ ನೀಡಿದ ಭಾರತೀಯ ವನಿತಾ ತಂಡವು ಇಂಟರ್ ನ್ಯಾಶನಲ್ ಹಾಕಿ ಫೆಡರೇಶನ್ (ಎಫ್ಐಎಚ್) ಮಂಗಳವಾರ ಪ್ರಕಟಿಸಿದ ನೂತನ ವಿಶ್ವ ರ್‍ಯಾಂಕಿಂಗ್‌ನಲ್ಲಿ 9ನೇ ಸ್ಥಾನಕ್ಕೇರಿದೆ. ಜೋರ್ಡ್ ಮರಿಜ್ನೆ ಅವರ ಮಾರ್ಗದರ್ಶನದಡಿ ಆಡಿದ ಭಾರತೀಯ ವನಿತಾ ತಂಡವು ಕಳೆದ ವಾರ ಲಂಡನ್‌ನಲ್ಲಿ ನಡೆದ ವಿಶ್ವಕಪ್‌ನಲ್ಲಿ ಕ್ವಾರ್ಟರ್‌ಫೈನಲ್ ತಲುಪಿದ ಸಾಧನೆ ಮಾಡಿತ್ತು. ಇದರಿಂದಾಗಿ 1138 ಅಂಕ ಗಳಿಸಿತ್ತು. ಹೀಗಾಗಿ ಒಂದು ಸ್ಥಾನ ಮೇಲಕ್ಕೇರಿದ ಭಾರತ 9ನೇ ಸ್ಥಾನ ಪಡೆದಿದೆ. ವಿಶ್ವಕಪ್‌ನಲ್ಲಿ ರನ್ನರ್ ಅಪ್ ಸ್ಥಾನ ಪಡೆದ ಅಯರ್‌ಲ್ಯಾಂಡ್ ಭಾರೀ ಲಾಭ ಪಡೆದಿದೆ. ಅದು 16ನೇ ಸ್ಥಾನದಿಂದ 8ನೇ ಸ್ಥಾನಕ್ಕೇರಿದೆ. 14ನೇ ಸ್ಥಾನ ಪಡೆದಿರುವುದು ಅಯರ್‌ಲ್ಯಾಂಡಿನ ಈ ಹಿಂದಿನ ಶ್ರೇಷ್ಠ ನಿರ್ವಹಣೆಯಾಗಿದೆ.
ಹಾಲೆಂಡ್ ನಂಬರ್ ವನ್
ವಿಶ್ವ ಕಪ್ ವಿಜೇತ ಹಾಲೆಂಡ್ ವಿಶ್ವದ ನಂಬರ್ ವನ್ ಸ್ಥಾನದಲ್ಲಿ ಮುಂದುವರಿದಿದೆ. ಅಯರ್‌ಲ್ಯಾಂಡ್ ವನಿತೆಯರನ್ನು 6-0 ಗೋಲುಗಳಿಂದ ಮಣಿಸಿದ ಹಾಲೆಂಡ್ ದಾಖಲೆ 8ನೇ ಬಾರಿ ಪ್ರಶಸ್ತಿ ಗೆದ್ದ ಸಾಧನೆ ಮಾಡಿತ್ತು. 2011ರ ಅಕ್ಟೋಬರ್ ಬಳಿಕ ಹಾಲೆಂಡ್ ಅಗ್ರ ಕ್ರಮಾಂಕದ ತಂಡವಾಗಿ ಕಾಣಿಸಿಕೊಳ್ಳುತ್ತಿದೆ.
ಲಂಡನ್‌ನಲ್ಲಿ ಆರನೇ ಸ್ಥಾನ ಪಡೆದ ಇಂಗ್ಲೆಂಡ್ ದ್ವಿತೀಯ ರ್‍ಯಾಂಕ್‌ನಲ್ಲಿದೆ. ಆಸ್ಟ್ರೇಲಿಯ ಮೂರನೇ ಸ್ಥಾನಕ್ಕೇರಿದರೆ ಪಾನ್ ಅಮೆರಿಕನ್ ಚಾಂಪಿಯನ್ಸ್ ಆರ್ಜೆಂಟೀನಾ ನಾಲ್ಕನೇ ಸ್ಥಾನದಲ್ಲಿದೆ. ಕಾಮನ್‌ವೆಲ್ತ್ ಗೇಮ್ಸ್ ಚಾಂಪಿಯನ್ ನ್ಯೂಜಿಲ್ಯಾಂಡ್ ಆರನೇ ಸ್ಥಾನಕ್ಕೆ ಜಾರಿದ್ದರೆ ಜರ್ಮನಿ ಐದನೇ ಸ್ಥಾನ ಪಡೆದಿದೆ. ಲಂಡನ್‌ನಲ್ಲಿ ಕಂಚಿನ ಪದಕ ಗೆದ್ದ ಸ್ಪೇನ್ ಏಳನೇ ರ್‍ಯಾಂಕ್ ಗಳಿಸಿದೆ. ಆಸ್ಟ್ರೇಲಿಯ ವಿರುದ್ಧ 3-1 ಗೋಲುಗಳ ಜಯ ಸಾಧಿಸಿದ್ದ ಸ್ಪೇನ್ ಕಂಚು ಪಡೆದಿತ್ತು. ಇದು ವಿಶ್ವಕಪ್ ಇತಿಹಾಸದಲ್ಲಿ ಸ್ಪೇನ್ ತಂಡದ ಶ್ರೇಷ್ಠ ನಿರ್ವಹಣೆಯಾಗಿತ್ತು ವಿಶ್ವಕಪ್‌ನಲ್ಲಿ ನೀರಸ ಪ್ರದರ್ಶನ ನೀಡಿದ್ದ ದಕ್ಷಿಣ ಕೊರಿಯ (10), ಚೀನ (11) ಮತ್ತು ಅಮೆರಿಕ 12ನೇ ಸ್ಥಾನ ಪಡೆದಿದೆ.