ಬರ್ಮಿಂಗ್ ಹ್ಯಾಮ್ : ಕಾಮನ್‌ವೆಲ್ತ್ ಗೇಮ್ಸ್ ನಲ್ಲಿ ಭಾರತದ ಮಹಿಳಾ ಹಾಕಿ ತಂಡದ ಮಿಡ್‌ಫೀಲ್ಡರ್ ನವಜೋತ್ ಕೌರ್ ಅವರು ಕೋವಿಡ್ ಪಾಸಿಟಿವ್ ಪರೀಕ್ಷೆಯ ನಂತರ ಭಾರತಕ್ಕೆ ಮರಳುತ್ತಿದ್ದಾರೆ.
ಕುರುಕ್ಷೇತ್ರದ 27 ವರ್ಷದ ಆಟಗಾರ್ತಿ ಕಳೆದ ಎರಡು ದಿನಗಳಿಂದ ಪ್ರತ್ಯೇಕವಾಗಿದ್ದು, ಅವರ ಬದಲಿಗೆ 18 ಸದಸ್ಯರ ಭಾರತೀಯ ಮಹಿಳಾ ತಂಡದಲ್ಲಿ ಸೋನಿಕಾ ಸ್ಥಾನ ಪಡೆದಿದ್ದಾರೆ.
”ಅವರನ್ನು ಪ್ರತ್ಯೇಕವಾಗಿ ಇರಿಸಲಾಗಿದ್ದು, ಆಕೆಗೆ ಯಾವುದೇ ರೋಗಲಕ್ಷಣಗಳಿಲ್ಲ. ಮೊದಲ ಪರೀಕ್ಷೆಯಲ್ಲಿ ಅವರು ಧನಾತ್ಮಕ ಪರೀಕ್ಷೆ ಮಾಡಿದ್ದರು, ಆದರೆ ಎರಡನೇ ಪರೀಕ್ಷೆಯಲ್ಲಿ ಅವರ ಸಿ ಟಿ ಮೌಲ್ಯವು ಸುಧಾರಿಸಿದೆ ಮತ್ತು ಅವರಿಂದಾಗಿ ಇತರರಿಗೆ ಸೋಂಕು ತಗುಲುವ ಸಾಧ್ಯತೆ ಇಲ್ಲ. ಅವರು ಭಾರತಕ್ಕೆ ಹಿಂತಿರುಗಲಿದ್ದಾರೆ” ಎಂದು ತಂಡದ ಮೂಲವೊಂದು ಪಿಟಿಐಗೆ ತಿಳಿಸಿದೆ.
ನವಜೋತ್ ಜಕಾರ್ತದಲ್ಲಿ ನಡೆದ ಏಷ್ಯನ್ ಗೇಮ್ಸ್‌ನಲ್ಲಿ ಬೆಳ್ಳಿ ಗೆದ್ದ ತಂಡ ಮತ್ತು 2014 ರಲ್ಲಿ ಇಂಚಿಯಾನ್‌ನ ಕಂಚು ವಿಜೇತ ತಂಡದ ಸದಸ್ಯೆಯಾಗಿದ್ದರು.
ಶುಕ್ರವಾರ ನಡೆದ ಪಂದ್ಯದಲ್ಲಿ ಭಾರತ ಘಾನಾ ವಿರುದ್ಧ 5-0 ಅಂತರದ ಜಯದೊಂದಿಗೆ ಅಭಿಯಾನ ಆರಂಭಿಸಿದೆ.