Advertisement

Women’s ODI: ಆಸ್ಟ್ರೇಲಿಯ ವಿರುದ್ಧ ದಾಖಲೆ ಮೊತ್ತ ಪೇರಿಸಿಯೂ ಸೋತ ಭಾರತ

12:04 AM Dec 29, 2023 | Team Udayavani |

ಮುಂಬಯಿ: ಆಸ್ಟ್ರೇಲಿಯ ವಿರುದ್ಧ ಸರ್ವಾಧಿಕ ಮೊತ್ತ ಪೇರಿಸಿಯೂ ಇದನ್ನು ಉಳಿಸಿಕೊಳ್ಳು ವಲ್ಲಿ ವಿಫ‌ಲವಾದ ಭಾರತದ ವನಿತೆ ಯರು ಮೊದಲ ಏಕದಿನದಲ್ಲಿ 6 ವಿಕೆಟ್‌ಗಳ ಸೋಲಿಗೆ ತುತ್ತಾದರು.

Advertisement

ಬ್ಯಾಟಿಂಗ್‌ ಆಯ್ದುಕೊಂಡ ಭಾರತ, ಜೆಮಿಮಾ ರೋಡ್ರಿಗಸ್‌ ಮತ್ತು ಪೂಜಾ ವಸ್ತ್ರಾಕರ್‌ ಅವರ ಜಬರ್ದಸ್ತ್ ಆಟದ ನೆರವಿನಿಂದ 8 ವಿಕೆಟಿಗೆ 282 ರನ್‌ ಪೇರಿಸಿತು. ಇದು ಆಸ್ಟ್ರೇಲಿಯ ವಿರುದ್ಧ ಭಾರತ ದಾಖಲಿಸಿದ ಅತ್ಯಧಿಕ ಗಳಿಕೆ. 2017ರ ಡರ್ಬಿ ಪಂದ್ಯದಲ್ಲಿ 4ಕ್ಕೆ 281 ರನ್‌ ಗಳಿಸಿದ್ದು ಈವರೆಗಿನ ಸರ್ವಾಧಿಕ ಮೊತ್ತವಾಗಿತ್ತು. ಜವಾಬಿತ್ತ ಆಸ್ಟ್ರೇಲಿಯ 46.3 ಓವರ್‌ಗಳಲ್ಲಿ 4 ವಿಕೆಟಿಗೆ 285 ರನ್‌ ಬಾರಿಸಿತು.

ಚೇಸಿಂಗ್‌ ವೇಳೆ ಅಲಿಸ್ಸಾ ಹೀಲಿ (0) ವಿಕೆಟನ್ನು ಬೇಗ ಉಳಿಸಿದರೂ ಭಾರತಕ್ಕೆ ಈ ಮೇಲುಗೈಯನ್ನು ಉಳಿಸಿಕೊಳ್ಳಲಾಗಲಿಲ್ಲ. ಫೋಬ್‌ ಲಿಚ್‌ಫೀಲ್ಡ್‌ (78), ಎಲ್ಲಿಸ್‌ ಪೆರ್ರಿ (75), ಟಹ್ಲಿಯಾ ಮೆಕ್‌ಗ್ರಾತ್‌ (68) ಅರ್ಧ ಶತಕ ಬಾರಿಸಿ ತಂಡವನ್ನು ಸುಲಭದಲ್ಲಿ ದಡ ಮುಟ್ಟಿಸಿದರು.

ಜೆಮಿಮಾ, ಪೂಜಾ ಅರ್ಧ ಶತಕ
ಸ್ಮತಿ ಮಂಧನಾ ಅನಾರೋಗ್ಯದಿಂದಾಗಿ ಈ ಪಂದ್ಯದಿಂದ ಹೊರಗುಳಿದರು. ಈ ಸ್ಥಾನಕ್ಕೆ ಬಂದ ಯಾಸ್ತಿಕಾ ಭಾಟಿಯಾ 49 ರನ್‌ ಕೊಡುಗೆ ಸಲ್ಲಿಸಿದರು. ಆದರೆ ಶಫಾಲಿ ವರ್ಮ (1), ನಾಯಕಿ ಕೌರ್‌ (9) ಯಶಸ್ಸು ಕಾಣಲಿಲ್ಲ. ವನ್‌ಡೌನ್‌ನಲ್ಲಿ ಬಂದ ರಿಚಾ ಘೋಷ್‌ 21ಕ್ಕೆ ಆಟ ಮುಗಿಸಿದರು. 20 ಓವರ್‌ ಅಂತ್ಯಕ್ಕೆ 4 ವಿಕೆಟ್‌ ಕಳೆದುಕೊಂಡ ಭಾರತ 95 ರನ್‌ ಮಾಡಿತ್ತು. ಸ್ಕೋರ್‌ 134ಕ್ಕೆ ಏರಿದಾಗ ದೀಪ್ತಿ ಶರ್ಮ (21) ವಿಕೆಟ್‌ ಬಿತ್ತು. ಅಮನ್‌ಜೋತ್‌ ಕೌರ್‌ (20) ಮತ್ತು ಸ್ನೇಹ್‌ ರಾಣಾ (1) ಕೂಡ ಕ್ರೀಸ್‌ನಲ್ಲಿ ಹೆಚ್ಚು ವೇಳೆ ಉಳಿಯಲಿಲ್ಲ.
ಈ ಹಂತದಲ್ಲಿ ಜೆಮಿಮಾ ಮತ್ತು ಪೂಜಾ ಭಾರತದ ಸರದಿಯನ್ನು ಆಧರಿಸಿ ನಿಂತರಲ್ಲದೆ, 8ನೇ ವಿಕೆಟಿಗೆ 68 ರನ್‌ ಪೇರಿಸುವಲ್ಲಿ ಯಶಸ್ವಿ ಯಾದರು. ಜೆಮಿಮಾ 77 ಎಸೆತಗಳಿಂದ 82 ರನ್‌ ಬಾರಿಸಿದರು.

ಪೂಜಾ ಆಕ್ರಮಣಕಾರಿ ಆಟದ ಮೂಲಕ ಗಮನ ಸೆಳೆದರು. ಅವರ ಅಜೇಯ 62 ರನ್‌ ಕೇವಲ 46 ಎಸೆತಗಳಿಂದ ಬಂತು. 7 ಬೌಂಡರಿ ಹಾಗೂ ಭಾರತದ ಸರದಿಯ ಎರಡೂ ಸಿಕ್ಸರ್‌ಗಳಿಗೆ ಪೂಜಾ ಸಾಕ್ಷಿಯಾದರು. ಇದು ಅವರ 4ನೇ ಅರ್ಧ ಶತಕ. ಪೂಜಾ ಸಾಹಸದಿಂದ ಭಾರತ ಕೊನೆಯ 6 ಓವರ್‌ಗಳಲ್ಲಿ 56 ರನ್‌ ಪೇರಿಸಿತು.

Advertisement

ಸಂಕ್ಷಿಪ್ತ ಸ್ಕೋರ್‌: ಭಾರತ-8 ವಿಕೆಟಿಗೆ 282 (ಜೆಮಿಮಾ 82, ಪೂಜಾ ಔಟಾಗದೆ 62, ಯಾಸ್ತಿಕಾ 49, ರಿಚಾ 21, ದೀಪ್ತಿ 21, ವೇರ್‌ಹ್ಯಾಮ್‌ 55ಕ್ಕೆ 2, ಗಾರ್ಡನರ್‌ 63ಕ್ಕೆ 2). ಆಸ್ಟ್ರೇಲಿಯ- 46.3 ಓವರ್‌ಗಳಲ್ಲಿ 4 ವಿಕೆಟಿಗೆ 285 (ಲಿಚ್‌ಫೀಲ್ಡ್‌ 78, ಪೆರ್ರಿ 75, ಮೆಕ್‌ಗ್ರಾತ್‌ 68, ಮೂನಿ 42, ರೇಣುಕಾ 30ಕ್ಕೆ 1, ಪೂಜಾ 41ಕ್ಕೆ 1, ರಾಣಾ 54ಕ್ಕೆ 1, ದೀಪ್ತಿ 55ಕ್ಕೆ 1).
ಪಂದ್ಯಶ್ರೇಷ್ಠ: ಫೋಬ್‌ ಲಿಚ್‌ಫೀಲ್ಡ್‌.

Advertisement

Udayavani is now on Telegram. Click here to join our channel and stay updated with the latest news.

Next