ಹೊಸದಿಲ್ಲಿ: ಅರಣ್ಯ ಸಚಿವ ಪ್ರಕಾಶ್ ಜಾವಡೇಕರ್ 2019ರ ಡಿಸೆಂಬರ್‌ನಲ್ಲಿ ದೇಶದಲ್ಲಿ ಹುಲಿಗಳ ಸಂಖ್ಯೆ ವೃದ್ಧಿಯಾಗುತ್ತಿದೆ ಎಂದಿದ್ದರು.
ಸದ್ಯದ ಮಾಹಿತಿ ಏನೆಂದರೆ ಎಂಟು ವರ್ಷಗಳ ಅವಧಿಯಲ್ಲಿ ದೇಶದಲ್ಲಿ 750 ಹುಲಿಗಳು ಮೃತಪಟ್ಟಿವೆ.
ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ ಈ ಆಘಾತಕಾರಿ ಮಾಹಿತಿ ನೀಡಿದೆ. ಬೇಟೆ, ಪ್ರಾಕೃತಿಕ ಕಾರಣಗಳು, ಅನಾರೋಗ್ಯ ಸೇರಿ ಹಲವು ಕಾರಣಗಳಿಂದಾಗಿ ಭಾರತದ ರಾಷ್ಟ್ರೀಯ ಪ್ರಾಣಿಯ ಸಂತತಿ ಕ್ಷೀಣಿಸುತ್ತಿದೆ.
ಅದರಲ್ಲೂ ಮಧ್ಯಪ್ರದೇಶ ಮತ್ತು ಮಹಾರಾಷ್ಟ್ರದಲ್ಲಿ ಹುಲಿಗಳ ಸಾವಿನ ಪ್ರಮಾಣ ಹೆಚ್ಚಾಗಿದೆ. ಎಂಟು ವರ್ಷಗಳಲ್ಲಿ ಮಧ್ಯಪ್ರದೇಶ ಒಂದರಲ್ಲೇ 173 ಹುಲಿಗಳು ಸಾವಿಗೀಡಾಗಿವೆ. ಇದೇ ವೇಳೆ ಕರ್ನಾಟಕ ಕೂಡ 111 ಹುಲಿಗಳ ಸಾವಿಗೆ ಸಾಕ್ಷಿಯಾಗಿದ್ದು, ಈ ಪೈಕಿ 28 ಹುಲಿಗಳು ಬೇಟೆಗಾರರ ಗುಂಡಿಗೆ ಬಲಿಯಾಗಿವೆ.
ಇನ್ನು 2012ರಿಂದ 2019ರ ನಡುವೆ ವಿವಿಧ ರಾಜ್ಯಗಳಲ್ಲಿ ಅನಾರೋಗ್ಯಕ್ಕೆ ತುತ್ತಾಗಿದ್ದ 101 ಹುಲಿಗಳನ್ನು ಗುರುತಿಸಲಾಗಿದೆ. 2012ರಿಂದ ಮೇವರೆಗೆ ಮಹಾರಾಷ್ಟ್ರದಲ್ಲಿ 125, ಕರ್ನಾಟಕದಲ್ಲಿ 111, ಉತ್ತರಾಖಂಡದಲ್ಲಿ 88, ತಮಿಳುನಾಡು ಮತ್ತು ಅಸ್ಸಾಂನಲ್ಲಿ ತಲಾ 54, ಕೇರಳ ಹಾಗೂ ಉತ್ತರ ಪ್ರದೇಶದಲ್ಲಿ ತಲಾ 35, ರಾಜಸ್ಥಾನದಲ್ಲಿ 17, ಬಿಹಾರ ಮತ್ತು ಪಶ್ಚಿಮ ಬಂಗಾಳದಲ್ಲಿ ತಲಾ 11 ಹಾಗೂ ಛತ್ತೀಸ್‌ಗಡದಲ್ಲಿ 10 ಹುಲಿಗಳು ಸಾವನ್ನಪ್ಪಿವೆ ಎಂದು ಪ್ರಾಧಿಕಾರ ಮಾಹಿತಿ ನೀಡಿದೆ.