ಇಸ್ಲಾಮಾಬಾದ್/ಹೊಸದಿಲ್ಲಿ: ಭಾರತದಿಂದ ಪಾಕಿಸ್ಥಾನದ ರಾವಲ್ಪಿಂಡಿಯಲ್ಲಿರುವ ಗುರುದ್ವಾರ ಪಂಜಾ ಸಾಹಿಬ್ ಗೆ ಧಾರ್ಮಿಕ ಪ್ರವಾಸ ಕೈಗೊಂಡ ಸಿಕ್ಖರಿಗೆ ಸೂಕ್ತ ಸೌಲಭ್ಯ ಒದಗಿಸಲು ಭಾರತೀಯ ರಾಯಭಾರ ಕಚೇರಿಗೆ ಪಾಕಿಸ್ಥಾನ ಅವಕಾಶ ನೀಡದೇ ಕಿರುಕುಳ ನೀಡಿದೆ. ಅಷ್ಟೇ ಅಲ್ಲ, ಏಪ್ರಿಲ್ 14ರಂದು ಗುರುದ್ವಾರ ತಲುಪಿದ ಸಿಕ್ಖರನ್ನು ಭೇಟಿ ಮಾಡುವುದಕ್ಕೂ ಪಾಕಿಸ್ಥಾನದಲ್ಲಿರುವ ಭಾರತೀಯ ರಾಯಭಾರ ಕಚೇರಿ ಅಧಿಕಾರಿಗಳಿಗೆ ಪಾಕ್ ಅವಕಾಶ ನೀಡಿಲ್ಲ. ಇದು ಒಂದೆಡೆ ಭಾರತದ ರಾಯಭಾರಿಗಳ ಅಧಿಕಾರವನ್ನು ಮೊಟಕುಗೊಳಿಸುವ ಪಾಕಿಸ್ಥಾನದ ಪ್ರಯತ್ನವಾಗಿದ್ದರೆ, ವೈದ್ಯಕೀಯ ಹಾಗೂ ಇತರ ತುರ್ತು ಅಗತ್ಯಗಳಲ್ಲಿ ನೆರವು ಪಡೆಯಲು ಸಿಕ್ಖ್ ಭಕ್ತರಿಗೆ ಅವಕಾಶ ಕಲ್ಪಿಸಲು ಅಸಾಧ್ಯವಾಗಿದೆ.
ಕಳೆದ ಗುರುವಾರ 1800 ಸಿಕ್ಖರು ವಾರ್ಷಿಕ ಸಂಪ್ರದಾಯದ ಪ್ರಕಾರ ಗುರುದ್ವಾರಕ್ಕೆ ಪ್ರಯಾಣಿಸಿದ್ದಾರೆ. ಪ್ರತಿ ಬಾರಿ ವಾಘಾ ಗಡಿಯಲ್ಲಿ ಯಾತ್ರಿಕರನ್ನು ಭಾರತೀಯ ರಾಯಭಾರ ಕಚೇರಿ ಅಧಿಕಾರಿಗಳು ಸ್ವಾಗತಿಸುತ್ತಿದ್ದರು. ಆದರೆ ಈ ಬಾರಿ ಅದಕ್ಕೆ ಅವಕಾಶ ನೀಡಿಲ್ಲ. ಅಲ್ಲದೆ ಸಂಪ್ರದಾಯದಂತೆ ಶನಿವಾರ ಗುರುದ್ವಾರದಲ್ಲಿ ಸಿಕ್ಖರೊಂದಿಗೆ ಮಾತುಕತೆ ನಡೆಸಲೂ ಅವಕಾಶ ನೀಡಿಲ್ಲ. ಅವರೊಂದಿಗೆ ಮಾತುಕತೆಗಾಗಿ ಪಾಕಿಸ್ಥಾನದಲ್ಲಿರುವ ಭಾರತೀಯ ಹೈ ಕಮಿಷನರ್ ಅಜಯ್ ಬಿಸಾರಿಯಾ ತೆರಳಿದ್ದರಾದರೂ, ದಾರಿ ಮಧ್ಯದಲ್ಲೇ ಭದ್ರತಾ ನೆಪವೊಡ್ಡಿ ಹಿಂದಕ್ಕೆ ಕಳುಹಿಸಲಾಗಿದೆ.
ಒಪ್ಪಂದದ ಉಲ್ಲಂಘನೆ: ಈ ಘಟನೆಯು 1961ರ ವಿಯೆನ್ನಾ ಒಪ್ಪಂದದ ಉಲ್ಲಂಘನೆಯಾಗಿದೆ ಎಂದು ಪಾಕಿಸ್ಥಾನಕ್ಕೆ ಭಾರತ ಎಚ್ಚರಿಕೆ ನೀಡಿದೆ. ಈ ಒಪ್ಪಂದದ ಪ್ರಕಾರ ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡಲು ಉಭಯ ದೇಶಗಳು ಅನುವು ಮಾಡಬೇಕಿದೆ. ಪ್ರತಿ ವರ್ಷವೂ ಸಿಕ್ಖರು ಪವಿತ್ರ ಗುರುದ್ವಾರ ಪಂಜಾ ಸಾಹಿಬ್‌ಗ ಭೇಟಿ ನೀಡುತ್ತಾರೆ. ನಂತರ ಅಲ್ಲಿಂದ ಇತರ ಪವಿತ್ರ ಸ್ಥಳಗಳಾದ ಜನಮೇಸ್ಥಾನ ನಂಕನ ಸಾಹಿಬ್ ಮತ್ತು ದೇರಾ ಸಾಹಿಬ್‌ಗೂ ಸಿಕ್ಖ್ ಪ್ರವಾಸಿಗರ ತಂಡ ಭೇಟಿ ನೀಡಲಿದೆ. ಒಟ್ಟು 10 ದಿನಗಳವರೆಗೆ ಇವರು ಪಾಕಿಸ್ಥಾನದಲ್ಲಿರುತ್ತಾರೆ. ಈ ಬಾರಿ ಸಿಕ್ಖ್ ತಂಡವು ಏಪ್ರಿಲ್ 21ರಂದು ವಾಪಸಾಗಲಿದೆ. ಕಳೆದ ಕೆಲವು ತಿಂಗಳುಗಳಿಂದಲೂ ಪಾಕಿಸ್ಥಾನದಲ್ಲಿರುವ ಭಾರತೀಯ ರಾಯಭಾರಿಗಳಿಗೆ ಪಾಕಿಸ್ಥಾನ ಕಿರುಕುಳ ನೀಡುತ್ತಿದೆ. ಈ ಬಗ್ಗೆ ಹಲವು ಬಾರಿ ಭಾರತ ಆಕ್ಷೇಪಿಸಿದರೂ, ಈ ಪ್ರಕ್ರಿಯೆ ಮುಂದುವರಿಯುತ್ತಲೇ ಇದೆ. ಇದೀಗ ಇನ್ನೊಂದು ಹೆಜ್ಜೆ ಮುಂದೆ ಹೋಗಿ ಸಿಕ್ಖ್ ಪ್ರವಾಸಿಗರನ್ನು ಭೇಟಿ ಮಾಡುವುದಕ್ಕೂ ಪಾಕ್ ಅವಕಾಶ ನಿರಾಕರಿಸಿದೆ.
ಮಾತುಕತೆಯಿಂದಲೇ ಶಾಂತಿ
ಪಾಕಿಸ್ಥಾನ ಮತ್ತು ಭಾರತದ ಮಧ್ಯೆ ಶಾಂತಿ ನೆಲೆಸಬೇಕೆಂದರೆ ಸಮಗ್ರ ಹಾಗೂ ಅರ್ಥವತ್ತಾದ ಮಾತುಕತೆ ನಡೆಯಬೇಕು ಎಂದು ಪಾಕಿಸ್ಥಾನ ಸೇನಾ ಮುಖ್ಯಸ್ಥ ಜನರಲ್ ಖಮರ್ ಜಾವೇದ್ ಬಾಜ್ವಾ ಹೇಳಿದ್ದಾರೆ. ಕಾಶ್ಮೀರ ವಿಷಯ ಸೇರಿದಂತೆ ಎಲ್ಲ ಸಮಸ್ಯೆಗಳನ್ನೂ ಮಾತುಕತೆಯ ಮೂಲಕವೇ ಪರಿಹರಿಸಬಹುದು ಎಂದು ಅವರು ಹೇಳಿದ್ದಾರೆ.