ಹೊಸದಿಲ್ಲಿ: ಕೋವಿಡ್ 19 ಹೆಸರಿನಲ್ಲಿ ಜನರನ್ನು ಮೋಸಗೊಳಿಸುವ ವ್ಯವಸ್ಥಿತ ಸಂಚಿನ ಬಗ್ಗೆ ಜನರು ಎಚ್ಚರಿಕೆಯಿಂದ ಇರಬೇಕೆಂದು ಕೇಂದ್ರ ಸರಕಾರ ತಿಳಿಸಿದೆ.
ಕೇಂದ್ರ ಮಾಹಿತಿ ತಂತ್ರಜ್ಞಾನ ಸಚಿವಾಲಯದ ಅಡಿಯಲ್ಲಿ ಕಾರ್ಯ ನಿರ್ವಹಿಸುವ ಕಂಪ್ಯೂಟರ್ ಎಮರ್ಜೆನ್ಸಿ ರೆಸ್ಪಾಂಡ್ ಟೀಂ (ಸಿಇಆರ್‌ಟಿ) ಈ ಬಗ್ಗೆ ಟ್ವೀಟ್ ಮಾಡಿದೆ.
‘ಸರಕಾರದಿಂದ ಸ್ಥಾಪಿಸಲ್ಪಟ್ಟಿರುವ ನಿಧಿಗೆ ದೇಣಿಗೆ ಕೊಡಿ ಎಂದು ಕೇಳಬಹುದಾದ ಇ-ಮೇಲ್‌ಗಳನ್ನೋ ಅಥವಾ ಕಿರು ಸಂದೇಶಗಳನ್ನೋ ಕಿರಾತಕರು ರವಾನಿಸುವ ಸಾಧ್ಯತೆಗಳಿರುತ್ತವೆ.
ಇಂಥ ಸಂದೇಶಗಳು ಸರಕಾರದಿಂದಲೇ ರವಾನಿಸಲ್ಪಟ್ಟಂತೆ ಕಾಣುತ್ತವೆ. ಉದಾಹರಣೆಗೆ, ncov2019@gov.in ಎಂಬ ಐಡಿಯಿಂದ ಬರಬಹುದು. ಅಂಥ ಇ-ಮೇಲ್ ಅಥವಾ ಸಂದೇಶಗಳಲ್ಲಿ ನಕಲಿ ಜಾಲತಾಣಗಳ ಲಿಂಕ್‌ಗಳನ್ನು ಹಾಕಿರಲಾಗುತ್ತದೆ.
ಅದನ್ನು ಕ್ಲಿಕ್ ಮಾಡುವ ಮೂಲಕ ನೀವು ಆನ್‌ಲೈನ್ ಪಾವತಿಗೆ ಮುಂದಾದರೆ ನಿಮ್ಮ ಬ್ಯಾಂಕ್ ಖಾತೆ ಸಂಖ್ಯೆ, ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ಸಂಖ್ಯೆ, ಅದರ ಹಿಂದಿನ ಸಿವಿವಿ ಮುಂತಾದ ಅಮೂಲ್ಯ ಮಾಹಿತಿಗಳನ್ನು ನೀವೇ ಖದೀಮರಿಗೆ ಕೊಟ್ಟಂತಾಗುತ್ತದೆ’ ಎಂದು ಸಂಸ್ಥೆ ತನ್ನ ಟ್ವೀಟ್‌ನಲ್ಲಿ ತಿಳಿಸಿದೆ.