Advertisement

ಮಡಗಾಸ್ಕರ್ ಪ್ರವಾಹ ಸಂತ್ರಸ್ತರ ನೆರವಿಗೆ ಧಾವಿಸಿದ INS ಐರಾವತ; ಏನಿದು ಅಪರೇಷನ್ ‘ವೆನಿಲ್ಲಾ’?

08:32 AM Jan 30, 2020 | Hari Prasad |

ನವದೆಹಲಿ: ಇಂಡಿಯನ್ ಓಷಿಯನ್ ಭಾಗದಲ್ಲಿರುವ ದ್ವೀಪ ರಾಷ್ಟ್ರ ಮಡಗಾಸ್ಕರ್ ಇದೀಗ ಪ್ರವಾಹ ಪರಿಸ್ಥಿತಿಗೆ ತತ್ತರಿಸುತ್ತಿದೆ. ಈ ದ್ವೀಪ ರಾಷ್ಟ್ರದ ಜನರಿಗೆ ಆಹಾರ, ಬಟ್ಟೆ, ಔಷಧಿ ಸೇರಿದಂತೆ ಅತ್ಯಗತ್ಯ ವಸ್ತುಗಳನ್ನು ಪೂರೈಸಲು ಮತ್ತು ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಪರಿಹಾರ ಕಾರ್ಯಗಳನ್ನು ಕೈಗೊಳ್ಳಲು ಭಾರತದ ನೌಕಾಪಡೆ ಇದೀಗ ಧಾವಿಸಿದೆ. ‘ಅಪರೇಷನ್ ವೆನಿಲ್ಲಾ’ ಹೆಸರಿನಲ್ಲಿ ತನ್ನ ಐ.ಎನ್.ಎಸ್. ಐರಾವತ ನೌಕೆಯನ್ನು ಮಡಗಾಸ್ಕರ್ ಗೆ ಭಾರತ ಕಳುಹಿಸಿಕೊಟ್ಟಿದೆ. ಈ ಮೂಲಕ ಪ್ರವಾಹದಿಂದ ತತ್ತರಿಸಿರುವ ಈ ದ್ವೀಪ ರಾಷ್ಟ್ರದ ಜನರ ಸಹಾಯಕ್ಕೆ ಧಾವಿಸಿರುವ ಮೊದಲ ದೇಶ ಭಾರತವಾಗಿದೆ.

Advertisement

ಆಹಾರ, ಬಟ್ಟೆ ಮತ್ತು ಔಷಧಿ ಸಾಮಾಗ್ರಿಗಳನ್ನು ಹೊತ್ತು ಸಾಗಿರುವ ಈ ನೌಕೆ ಇಂದು ಮಡಗಾಸ್ಕರ್ ತಲುಪುವ ನಿರೀಕ್ಷೆ ಇದೆ. ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಸಿಲುಕಿರಬಹುದಾದವರ ರಕ್ಷಣೆಗಾಗಿ ನಾಲ್ಕು ದೊಡ್ಡ ಮತ್ತು ಎರಡು ಮಧ್ಯಮ ಗಾತ್ರದ ದೋಣಿಗಳನ್ನೂ ಸಹ ಕೊಂಡೊಯ್ಯಲಾಗಿದೆ.

ಭೀಕರ ಪ್ರವಾಹದಿಂದಾಗಿ ಈ ದ್ವೀಪರಾಷ್ಟ್ರದಲ್ಲಿ ಸುಮಾರು 92 ಸಾವಿರ ಜನರು ಸಂಕಷ್ಟಕ್ಕೆ ಒಳಗಾಗಿದ್ದಾರೆ ಹಾಗೂ ಹಲವರು ಈಗಾಗಲೇ ತಮ್ಮ ಪ್ರಾಣಗಳನ್ನು ಕಳೆದುಕೊಂಡಿದ್ದಾರೆ. ಈ ಕಾರಣಕ್ಕಾಗಿ ಅಲ್ಲಿನ ಅಧ್ಯಕ್ಷರು ಜಾಗತಿಕ ಸಮುದಾಯದ ಸಹಾಯ ನೆರವನ್ನು ಕೋರಿದ್ದರು. ಇದಕ್ಕೆ ತಕ್ಷಣವೇ ಸ್ಪಂದಿಸಿರುವ ಭಾರತ ತನ್ನ ನೌಕಾಪಡೆಯಲ್ಲಿರುವ ಐ.ಎನ್.ಎಸ್. ಐರಾವತವನ್ನು ಸುಸಜ್ಜಿತ ರೀತಿಯಲ್ಲಿ ಅಲ್ಲಿಗೆ ಕಳುಹಿಸಿಕೊಟ್ಟಿದ್ದು ಈ ನೌಕೆ ಉತ್ತರ ಮಡಗಾಸ್ಕರ್ ನಲ್ಲಿರುವ ಅಂಟ್ಸಿರನಾನ ಬಂದರಿನಲ್ಲಿ ಲಂಗರು ಹಾಕಲಿದೆ.

ಮಡಗಾಸ್ಕರ್, ಸೇಛೆಲ್ಲೆಸ್, ರೂನಿಯನ್, ಮಾರಿಷಸ್, ಕೊಮೊರೋಸ್, ಮಾಯೊಟ್ಟೆ ದ್ವೀಪಸಮೂಹಗಳಲ್ಲಿ ಆರ್ಕಿಡ್ ಸಸ್ಯಗಳು ವಿಫುಲವಾಗಿ ಬೆಳೆಯುವುದರಿಂದ ಇವುಗಳನ್ನು ‘ವೆನಿಲ್ಲಾ ದ್ವೀಪ ರಾಷ್ಟ್ರಗಳು’ ಎಂದೇ ಕರೆಯಲಾಗುತ್ತದೆ. ಹಾಗಾಗಿ ಭಾರತ ಈ ಕಾರ್ಯಾಚರಣೆಗೆ ‘ಅಪರೇಷನ್ ವೆನಿಲ್ಲಾ’ ಎಂದು ಹೆಸರಿಟ್ಟಿದೆ. ಮಡಗಾಸ್ಕರ್ ಪೂರ್ವ ಆಫ್ರಿಕಾ ಕರಾವಳಿ ತೀರದಿಂದ 400 ಕಿಲೋಮೀಟರ್ ಗಳಷ್ಟು ದೂರದಲ್ಲಿದೆ.

ಕಳೆದ ವರ್ಷವೂ ಸಹ ಭಾರತ ಮೊಝಾಂಬಿಕ್ ನಲ್ಲಿ ಇಡಾಯ್ ಚಂಡಮಾರುತ ಕಾಣಿಸಿಕೊಂಡಿದ್ದ ಸಂದರ್ಭದಲ್ಲಿ ತನ್ನ ನೆರವಿನ ಹಸ್ತವನ್ನು ಚಾಚಿತ್ತು. ಮತ್ತು ಸಂತ್ರಸ್ತರ ನೆರವಿಗಾಗಿ ಹಾಗೂ ಪರಿಹಾರ ಕಾರ್ಯಾಚರಣೆಗಾಗಿ ಐ.ಎನ್.ಎಸ್. ಸುಜಾತ, ಐ.ಎನ್.ಎಸ್. ಸಾರಥಿ ಮತ್ತು ಐ.ಎನ್.ಎಸ್. ಶಾರ್ದೂಲ್ ನೌಕೆಗಳನ್ನು ಕಳುಹಿಸಿಕೊಟ್ಟಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next