ಹೊಸದಿಲ್ಲಿ: ಏಷ್ಯನ್ ಕಪ್ ಅರ್ಹತಾ ಸುತ್ತಿನ ಪಂದ್ಯಾವಳಿಯಲ್ಲಿ ಉತ್ತಮ ಪ್ರದರ್ಶನ ನೀಡಿದ ಭಾರತ ನೂತನ ಫಿಫಾ ತಂಡ ರ್‍ಯಾಂಕಿಂಗ್‌ನಲ್ಲಿ 2 ಸ್ಥಾನಗಳ ಪ್ರಗತಿ ಸಾಧಿಸಿದೆ. 106ರಿಂದ 104ನೇ ಸ್ಥಾನಕ್ಕೆ ನೆಗೆದಿದೆ.
ಸುನೀಲ್ ಚೆಟ್ರಿ ನೇತೃತ್ವದ ಭಾರತ ಏಷ್ಯನ್ ಕಪ್ ಅರ್ಹತಾ ಸುತ್ತಿನ ಪಂದ್ಯಾವಳಿಯ “ಡಿ’ ವಿಭಾಗದ ಮೂರೂ ಲೀಗ್ ಪಂದ್ಯಗಳನ್ನು ಜಯಿಸಿತ್ತು. 2023ರಲ್ಲಿ ನಡೆಯುವ 24 ತಂಡಗಳ ಫೈನಲ್ಸ್‌ನಲ್ಲಿ ಆಡುವ ಅರ್ಹತೆ ಸಂಪಾದಿಸಿತ್ತು. ಒಟ್ಟಾರೆಯಾಗಿ 5ನೇ ಸಲ ಹಾಗೂ ಮೊದಲ ಬಾರಿಗೆ ಸತತ 2ನೇ ಫೈನಲ್ಸ್‌ನಲ್ಲಿ ಆಡುವ ಅರ್ಹತೆ ಪಡೆದದ್ದು ಭಾರತದ ಹೆಗ್ಗಳಿಕೆ.
ಬ್ರಝಿಲ್ ಅಗ್ರಸ್ಥಾನ :
ಫಿಫಾ ರ್‍ಯಾಂಕಿಂಗ್‌ನಲ್ಲಿ ಬ್ರಝಿಲ್ ಅಗ್ರಸ್ಥಾನ ಕಾಯ್ದುಕೊಂಡಿದೆ. ಬೆಲ್ಜಿಯಂ ದ್ವಿತೀಯ ಸ್ಥಾನದಲ್ಲಿ ಮುಂದುವರಿದಿದೆ. ಆರ್ಜೆಂಟೀನಾ ಒಂದು ಸ್ಥಾನ ಮೇಲೇರಿದ್ದು ಮೂರಕ್ಕೆ ಬಂದು ನಿಂತಿದೆ. ಫ್ರಾನ್ಸ್ 4ನೇ ಸ್ಥಾನಕ್ಕೆ ಜಾರಿದೆ. “ಯುಎಫ್ಎಫ್ಎ ನ್ಯಾಶನಲ್ ಲೀಗ್’ನ ಸತತ 4 ಪಂದ್ಯಗಳಲ್ಲಿ ಒಂದೂ ಗೆಲುವು ಕಾಣದಿದ್ದುದು ಫ್ರಾನ್ಸ್‌ಗೆ ಹಿನ್ನಡೆಯಾಗಿ ಪರಿಣಮಿಸಿತು.
ಇಂಗ್ಲೆಂಡ್, ಸ್ಪೇನ್, ಇಟಲಿ, ನೆದರ್ಲೆಂಡ್ಸ್, ಪೋರ್ಚುಗಲ್ ಮತ್ತು ಡೆನ್ಮಾರ್ಕ್ 5ರಿಂದ 10ನೇ ಸ್ಥಾನ ಪಡೆದಿವೆ.