ನವದೆಹಲಿ: ಸಿಂಧೂ ಜಲ ಒಪ್ಪಂದದ ಯಥಾವತ್ ಜಾರಿ ಅನುಷ್ಠಾನಗೊಳಿಸದ ಪಾಕಿಸ್ತಾನ ಮೊಂಡಾಟ ಮುಂದುವರಿಸಿರುವ ಹಿನ್ನೆಲೆಯಲ್ಲಿ ಒಪ್ಪಂದದಲ್ಲಿ ಬದಲಾವಣೆಗಾಗಿ ನೆರೆಯ ರಾಷ್ಟ್ರಕ್ಕೆ ಭಾರತ ನೋಟಿಸ್ ಜಾರಿಗೊಳಿಸಿದೆ.
1960ರ ಸೆ.19ರ ನದಿ ನೀರಿನ ಹಂಚಿಕೆ ಒಪ್ಪಂದದ ಪ್ರಕಾರ ಅದನ್ನು ಜಾರಿಗೊಳಿಸದೇ ಪಾಕ್ ಮೊಂಡುತನ ಪ್ರದರ್ಶಿಸುತ್ತಾ ಬಂದಿದೆ. ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಭಾರತ ಸರ್ಕಾರ, ಸಿಂಧೂ ನದಿ ನೀರಿಗೆ ಸಂಬಂಧಿಸಿದ ಆಯುಕ್ತರ ಮೂಲಕ ಜ.25ರಂದು ಇಸ್ಲಾಮಾಬಾದ್‌ಗೆ ನೋಟಿಸ್ ರವಾನಿಸಿದೆ.
ಒಪ್ಪಂದದ ಉಲ್ಲಂಘನೆಯನ್ನು 90 ದಿನಗಳ ಒಳಗೆ ಸರಿಪಡಿಸಲು ಪಾಕಿಸ್ತಾನಕ್ಕೆ ಒಂದು ಅವಕಾಶ ಒದಗಿಸುವುದು ಈ ನೋಟಿಸ್‌ನ ಉದ್ದೇಶವಾಗಿದೆ. ಕಳೆದ 62 ವರ್ಷಗಳಲ್ಲಿ ಕಲಿತ ಪಾಠಗಳ ಮೂಲಕ ಒಪ್ಪಂದವನ್ನು ಪರಿಷ್ಕರಿಸುವುದು ಕೂಡ ಈ ಕ್ರಮದ ಭಾಗವಾಗಿದೆ ಎಂದು ಮೂಲಗಳು ತಿಳಿಸಿವೆ.
2017ರಿಂದ ಕಿಶನ್‌ಗಂಗಾ ಮತ್ತು ರಾಟಲ್ ಜಲವಿದ್ಯುತ್ ಯೋಜನೆ(ಎಚ್‌ಇಪಿ) ಸಂಬಂಧ ಚರ್ಚಿಸಲು ಮತ್ತು ವಿವಾದಗಳನ್ನು ಬಗೆಹರಿಸುವ ಭಾರತದ ನಿರಂತರ ಪ್ರಯತ್ನಕ್ಕೆ ಪಾಕಿಸ್ತಾನ ತಣ್ಣೀರೆರಚುತ್ತಾ ಬಂದಿದೆ.
ಸಿಂಧೂ ಜಲ ಒಪ್ಪಂದವನ್ನು ಯಥಾವತ್ತಾಗಿ ಜಾರಿಗೊಳಿಸುವುದಕ್ಕೆ ಭಾರತದ ಬೆಂಬಲ ಸದಾ ಇದ್ದು, ಜವಾಬ್ದಾರಿಯುತ ಪಾಲುದಾರಿಕೆ ಹೊಂದಿದೆ. ಆದರೆ ಪಾಕಿಸ್ತಾನದ ಕ್ರಮಗಳು ಒಪ್ಪಂದದ ನಿಯಮಗಳು ಮತ್ತು ಅವುಗಳ ಅನುಷ್ಠಾನದ ಮೇಲೆ ಪ್ರತಿಕೂಲ ಪರಿಣಾಮ ಬೀರಿವೆ. ಹೀಗಾಗಿ ಒಪ್ಪಂದದ ಬದಲಾವಣೆಗಾಗಿ ಭಾರತ ನೋಟಿಸ್ ನೀಡಿದೆ ಎಂದು ಮೂಲಗಳು ತಿಳಿಸಿವೆ.