Advertisement

ಭಾರತ ಟೆನಿಸ್‌ ಜಗತ್ತಿನಲ್ಲಿ ಅಲ್ಲೋಲ ಕಲ್ಲೋಲ

12:31 AM Apr 20, 2020 | Sriram |

ಹೊಸದಿಲ್ಲಿ: ಕೋವಿಡ್ 19 ವೈರಸ್‌ ಪರಿಣಾಮ ಯಾವ ರೀತಿಯಲ್ಲಿ ಆಗಿದೆ ಎಂದು ಎಲ್ಲರಿಗೂ ಗೊತ್ತು. ಬದುಕಿನ ಎಲ್ಲ ಹಾದಿಗಳು ಸದ್ಯ ಮುಚ್ಚಿ ಹೋಗಿವೆ. ಬಹುಶಃ ಮುಂದಿನ ದಿನಗಳಲ್ಲಿ ತಿನ್ನುವ ಅನ್ನವೂ ಇಲ್ಲವಾಗಬಹುದು. ಜಗತ್ತಿನ ಎಲ್ಲ ಕಡೆ ಹಾಹಾಕಾರ ಶುರುವಾಗಿ ಅಕ್ಷರಶಃ ಜನ ಅಂಧಕಾರದಲ್ಲಿ ಬದುಕಬೇಕಾಗಬಹುದು. ಆದರೆ ಕ್ರೀಡಾರಂಗದ ಕೆಲವು ಕಡೆ ಈಗಾಗಲೇ ಸಂಕಷ್ಟ ಶುರುವಾಗಿದೆ. ಹಾಗೆ ತಾಪತ್ರಯ ಪಡುತ್ತಿರುವ ಕ್ರೀಡೆಗಳಲ್ಲಿ ಟೆನಿಸ್‌ ಕೂಡ ಒಂದು. ದೇಶದಲ್ಲಿ ಟೆನಿಸ್‌ ಅಕಾಡೆಮಿ ನಡೆಸುತ್ತಿರುವವರು, ವೃತ್ತಿಪರ ಆಟಗಾರರು ಈಗ ಸಂಕಷ್ಟದಲ್ಲಿದ್ದಾರೆ. ಮುಂದೇನು ಎಂಬ ಚಿಂತೆ ಅವರನ್ನು ಕಾಡುತ್ತಿದೆ. ಕೋವಿಡ್ 19 ಮುಗಿದ ಮೇಲಿನ ಸ್ಥಿತಿಗೆ ಅವರು ಈಗಲೇ ಅಂಜಿಕೊಳ್ಳುವಂತಹ ಸ್ಥಿತಿಯಿದೆ.

Advertisement

ಇತ್ತೀಚೆಗೆ ದೇಶದ ಮಣ್ಣಿನ ಕುಸ್ತಿಪಟುಗಳು ತೀರಾ ಸಂಕಷ್ಟಕ್ಕೊಳಗಾಗಿರುವುದು, ಗಾಲ್ಫ್ ಕ್ಲಬ್‌ಗಳ ಮಾಲಕರು, ಅಲ್ಲಿ ಕೆಲಸ ಮಾಡುವ ಕ್ಯಾಡಿಗಳು ಹಣಕ್ಕಾಗಿ ಪರಿತಪಿಸುವ ಸ್ಥಿತಿ ತಲುಪಿರುವುದು ವರದಿಯಾಗಿತ್ತು. ಈಗಿನ ಸ್ಥಿತಿ ಟೆನಿಸ್‌ನದ್ದು. ಸದ್ಯ ದೇಶ, ವಿದೇಶದಲ್ಲಿ ಟೆನಿಸ್‌ ನಡೆಯುತ್ತಿಲ್ಲ. ಹಾಗಂತ ಅಕಾಡೆಮಿಗಳ ಮಾಲಕರು ಸಂಬಳ ನೀಡದಿರಲು ಆಗುತ್ತಿಲ್ಲ!

ಸಮಸ್ಯೆಯೇನು ?
ಈಗೇನೋ ಕೋವಿಡ್ 19 ಇದೆ ಮಕ್ಕಳು ಬರುತ್ತಿಲ್ಲ. ಕೋವಿಡ್ 19 ಮುಗಿದ ಮೇಲೆ ಮಕ್ಕಳು ಬರುವುದರ ಬಗ್ಗೆ ಅಕಾಡೆಮಿಗಳಿಗೆ ಅನುಮಾನವಿದೆ. ಭಾರತದಲ್ಲಿ ಕ್ರೀಡೆಗೆ ವೃತ್ತಿ ಎನ್ನುವ ಸ್ಥಾನವಿಲ್ಲ. ಹೀಗಿರುವಾಗ ಆರ್ಥಿಕ ಕುಸಿತವಿರುವಾಗಲೂ ಮಕ್ಕಳು ಬರುತ್ತಾರೆ ಎಂದು ನಿರೀಕ್ಷಿಸುವುದು ಸಾಧ್ಯವೇ ಇಲ್ಲದಂತಾಗಿದೆ.

ಜಿಎಸ್‌ಟಿ ಮನ್ನಾ ಮಾಡಿ
ದೇಶದಲ್ಲಿರುವ ಕ್ರೀಡೆಗಳ ಪರಿಸ್ಥಿತಿ ಸುಧಾರಿಸಲು ಸರಕಾರವೂ ಕೆಲವು ಕ್ರಮ ತೆಗೆದುಕೊಳ್ಳಬೇಕು ಎಂದು ವಿಶಾಲ್‌ ಉಪ್ಪಳ್‌ ಮನವಿ ಮಾಡಿದ್ದಾರೆ. ಸರಕಾರ ಈಗ ಅಕಾಡೆಮಿಗಳ ಮೇಲೆ ಶೇ.18ರಷ್ಟು ಜಿಎಸ್‌ಟಿ ಹೇರಿದೆ. ಕ್ರೀಡೆಯನ್ನು ಶಿಕ್ಷಣ ಎಂದು ಪರಿಗಣಿಸಿ, ಜಿಎಸ್‌ಟಿ ರದ್ದು ಮಾಡಿ ಎಂದು ಅವರು ಆಗ್ರಹಿಸಿದ್ದಾರೆ.

ಅಕಾಡೆಮಿ ಮಾಲಕರ ದುಸ್ಥಿತಿ
ಭಾರತದಲ್ಲಿ 3827 ಪ್ರಮಾಣೀಕೃತ ತರಬೇತುದಾರರು ಇದ್ದಾರೆ. 10,000 ಸಹಾಯಕ ತರಬೇತುದಾರು ಇದ್ದಾರೆ. ದೇಶಾದ್ಯಂತ 2000 ಅಕಾಡೆಮಿಗಳು ಇವೆ. ಬೆಂಗಳೂರಿನಲ್ಲಿ ಡೇವಿಸ್‌ ಕಪ್‌ ತರಬೇತುದಾರ ಜೀಶನ್‌ ಅಲಿ ಅಕಾಡೆಮಿ ಹೊಂದಿದ್ದಾರೆ. ಅಲ್ಲಿ 12 ಸಿಬಂದಿ ಇದ್ದಾರೆ. ಇನ್ನು ಭಾರತದ ಇನ್ನೊಬ್ಬ ತರಬೇತುದಾರ ಅಶುತೋಷ್‌ ಸಿಂಗ್‌ ದಿಲ್ಲಿಯಲ್ಲಿ ಅಕಾಡೆಮಿ ಹೊಂದಿದ್ದಾರೆ. ಈ ಇಬ್ಬರೂ ಟೆನಿಸ್‌ ಚಟುವಟಿಕೆಯೇ ಇಲ್ಲದಿದ್ದರೂ ಸಂಬಳ ನೀಡುತ್ತಿದ್ದಾರೆ. ಭಾರತ ಫೆಡರೇಷನ್‌ ಕಪ್‌ ತಂಡದ ನಾಯಕ ವಿಶಾಲ್‌ ಉಪ್ಪಳ್‌ ತಮ್ಮ ಅಕಾಡೆಮಿಯಲ್ಲಿ, 14 ಮಂದಿ ಸಿಬಂದಿ ಹೊಂದಿದ್ದಾರೆ. ಅವರಿಗೆ ತಿಂಗಳಿಗೆ 4.5 ಲಕ್ಷ ರೂ. ವೇತನ ನೀಡುತ್ತಾರೆ.

Advertisement

ಭವಿಷ್ಯದ ಚಿಂತೆಯಲ್ಲಿ ಆಟಗಾರರು
ಸದ್ಯ ಟೆನಿಸ್‌ನಲ್ಲಿ ಭಾರತದ ಭವಿಷ್ಯ ಎಂದು ಗುರುತಿಸಿಕೊಂಡಿರುವುದು ಪುರವ್‌ ರಾಜಾ, ದಿವಿಜ್‌ ಶರಣ್‌, ಪ್ರಜ್ಞೆàಶ್‌ ಗುಣೇಶ್ವರನ್‌, ಜೀವನ್‌ ನೆಡುಂಚೆಜಿಯನ್‌, ಅಂಕಿತಾ ರೈನಾ ಇತ್ಯಾದಿ. ಇವರು ಯಾರೂ ಈಗ ಆಡುತ್ತಿಲ್ಲ. ಕೋವಿಡ್ 19 ಮುಗಿದ ಮೇಲೆ ತತ್‌ಕ್ಷಣ ಕೂಟಗಳು ಶುರುವಾಗುತ್ತವೆ, ಇವರಿಗೆ ಆಡಲು ಸಾಧ್ಯವಾಗುತ್ತದೆ ಎಂಬ ಭರವಸೆಯೂ ಇಲ್ಲ. ಟೆನಿಸ್‌ ಆಟವಿಲ್ಲದೇ ಪುರವ್‌ 38.27 ಲಕ್ಷ ರೂ. ಕಳೆದುಕೊಳ್ಳಲಿದ್ದಾರೆ. ಇನ್ನುಳಿದ ಆಟಗಾರರ ಸ್ಥಿತಿಯೂ ಇದೇ ಆಗಿದೆ.

ಇವರ ಆಟ ನಿಂತಿದೆ, ಗಳಿಕೆ ನಿಂತಿದೆ. ಆದರೆ ತರಬೇತಿಗಾಗಿ ಪಾವತಿ ಮಾಡಬೇಕಾದ ಹಣ, ಆಹಾರ, ಇನ್ನಿತರ ಸೌಲಭ್ಯಗಳಿಗಾಗಿ ಇವರ ಖರ್ಚು ನಿಲ್ಲುವುದೇ ಇಲ್ಲ. ಇದನ್ನು ತುಂಬಿಸಿಕೊಳ್ಳುವುದು ಹೇಗೆ ಎನ್ನುವುದೇ ಇಲ್ಲಿನ ಪ್ರಶ್ನೆ. ಇನ್ನೊಂದು ವಿಡಂಬನೆಯೆಂದರೆ ಮೇಲಿನ ಪಟ್ಟಿಯಲ್ಲಿರುವ ಯಾರೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಖ್ಯಾತರಲ್ಲ. ಪರಿಸ್ಥಿತಿ ಹೀಗಿರುವಾಗ ನಮ್ಮ ಮುಂದಿನ ದಾರಿಯೇನು ಎಂದು ಅವರು ಕೇಳುತ್ತಾರೆ. ಅದಕ್ಕಾಗಿ ಆಟಗಾರರ ಒಂದು ಸಂಘ ಕಟ್ಟುವುದು ಅವರ ಸಲಹೆ. ಹಾಗೆಯೇ ಭಾರತ ಟೆನಿಸ್‌ ಸಂಸ್ಥೆ (ಎಐಟಿಎ) ಆಟಗಾರರ ಹಿತಕ್ಕಾಗಿ ಕೂಡಲೇ ಏನಾದರೂ ಮಾಡಬೇಕು ಎಂದು ಅವರು ಕೇಳಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next