Advertisement

ಉಗ್ರವಾದಕ್ಕೆ ಪಾಕ್‌ ಕುಮ್ಮಕ್ಕು

12:30 AM Feb 21, 2019 | Team Udayavani |

ರಿಯಾದ್‌: ಗಡಿಯಾಚೆಯಿಂದ ಭಯೋತ್ಪಾದನೆಗೆ ಸಿಗುತ್ತಿರುವ ನಿರಂತರ ಕುಮ್ಮಕ್ಕು ಮತ್ತು ಆಶ್ರಯಕ್ಕೆ ಭಾರತ ಬಲಿಯಾಗುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಅರೆಬಿಕ್‌ ಭಾಷೆಯಲ್ಲಿ ಪ್ರಕಟವಾಗುವ “ಒಕಝ್’ ಮತ್ತು “ಸೌದಿ ಗೆಝೆಟ್‌’ಎಂಬ ಇಂಗ್ಲಿಷ್‌ ಪತ್ರಿಕೆಗೆ ನೀಡಿರುವ ಸಂದರ್ಶದಲ್ಲಿ ಪಾಕಿಸ್ಥಾನದ ವಿರುದ್ಧ ಪ್ರಬಲ ಆರೋಪಗಳನ್ನು ಪ್ರಧಾನಿ ಮಾಡಿದ್ದಾರೆ. 

Advertisement

ಎಲ್ಲ ರೀತಿಯ ಉಗ್ರಗಾಮಿತ್ವ ಮತ್ತು ಭಯೋತ್ಪಾದಕ ಕೃತ್ಯಗಳನ್ನು ಭಾರತ ಕಟುವಾಗಿ ಖಂಡಿಸುತ್ತದೆ. ದಶಕಗಳಿಂದಲೂ ಭಾರತ ತನ್ನ ಗಡಿಯಾಚೆಯಿಂದ ಪ್ರೋತ್ಸಾಹಿಸಲ್ಪಡುತ್ತಿರುವ ಉಗ್ರಗಾಮಿತ್ವ ಮತ್ತು ಭಯೋತ್ಪಾದನೆಗೆ ಬಲಿಯಾಗುತ್ತಾ ಬರುತ್ತಿದೆ. ಅದರಿಂದಾಗಿಯೇ ಸಾವಿರಾರು ಮುಗ್ಧ ಜೀವಗಳು ಬಲಿಯಾಗುತ್ತಿವೆ ಎಂದು ಹೇಳಿದ್ದಾರೆ. ಭಯೋತ್ಪಾದನೆ ಎನ್ನುವುದು ಎಲ್ಲ ದೇಶಗಳಿಗೆ ಮತ್ತು ಸಮಾಜಕ್ಕೆ ಕಂಟಕ ಎಂದು ಹೇಳಿದ್ದಾರೆ. ಪುಲ್ವಾಮಾ ದಾಳಿ ಹಿನ್ನೆಲೆಯಲ್ಲಿ ಅವರು ಈ ಮಾತುಗಳನ್ನಾಡಿದ್ದಾರೆ. 

ವಿಚಾರ ಪ್ರಸ್ತಾವವಾಗಿದೆ: ಪುಲ್ವಾಮಾದಲ್ಲಿ ಸಿಆರ್‌ಪಿಎಫ್ ಯೋಧರ ಸಾವಿನ ಬಗ್ಗೆ ಸೌದಿ ಭಾವೀ ದೊರೆ ಮೊಹಮ್ಮದ್‌ ಬಿನ್‌ ಸಲ್ಮಾನ್‌ ಮತ್ತು ಪ್ರಧಾನಿ ನರೇಂದ್ರ ಮೋದಿ ಜಂಟಿ ಸುದ್ದಿಗೋಷ್ಠಿಯಲ್ಲಿ ಖಂಡನೆ ವ್ಯಕ್ತಪಡಿಸಿದ್ದಾರೆ ಎಂದು ವಿದೇಶಾಂಗ ಇಲಾಖೆ ಸ್ಪಷ್ಟನೆ ನೀಡಿದೆ. ಹೊಸದಿಲ್ಲಿಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿದೇಶಾಂಗ ಸಚಿವಾಲಯದ ಆರ್ಥಿಕ ವಿಭಾಗದ  ಕಾರ್ಯದರ್ಶಿ ಟಿ.ಎಸ್‌. ತ್ರಿಮೂರ್ತಿ, “ಭಯೋತ್ಪಾದನೆಯನ್ನು ಸರಕಾರದ ಮುಖ್ಯ ನೀತಿಯನ್ನಾಗಿಸಿಕೊಂಡಿರುವವರು ಅದನ್ನು ತ್ಯಜಿಸಬೇಕು ಎಂದು ಉಭಯ ನಾಯಕರು ಹೇಳಿದ್ದಾರೆ. ಜತೆಗೆ ಇಬ್ಬರು ನಾಯಕರ ನಡುವಿನ ಮಾತುಕತೆ ವೇಳೆ ಜೈಶ್‌- ಎ- ಮೊಹಮ್ಮದ್‌ ಉಗ್ರ ಸಂಘಟನೆ ಮತ್ತು ಪಾಕಿಸ್ಥಾನದ ನೀತಿಯ ಬಗ್ಗೆ ಪ್ರಸ್ತಾಪವಾಗಿದೆ ಎಂದಿದ್ದಾರೆ.

27ಕ್ಕೆ ಚೀನ ವಿದೇಶಾಂಗ ಸಚಿವರ ಜತೆ ಸ್ವರಾಜ್‌ ಭೇಟಿ: ಚೀನ ವಿದೇಶಾಂಗ ಸಚಿವ ವಾಂಗ್‌ ಇ ಮತ್ತು ಭಾರತದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‌ ಫೆ.27ರಂದು ಚೀನಾದ ವುಹಾನ್‌ನಲ್ಲಿ ಭೇಟಿಯಾಗಲಿದ್ದಾರೆ.  ಈ ಸಂದರ್ಭದಲ್ಲಿ ವಿಶ್ವ ಸಂಸ್ಥೆಯ ಭದ್ರತಾ ಮಂಡಳಿಯ ನಿಷೇಧಿತ ಉಗ್ರರ ಪಟ್ಟಿಗೆ ಜೈಶ್‌- ಎ- ಮೊಹಮ್ಮದ್‌ ಉಗ್ರ ಸಂಘಟನೆ ಮುಖ್ಯಸ್ಥ ಮಸೂದ್‌ ಅಜರ್‌ನನ್ನು ಸೇರ್ಪಡೆಗೊಳಿಸಲು ಚೀನ ಆಕ್ಷೇಪ ವ್ಯಕ್ತಪಡಿಸುತ್ತಿರುವ ಬಗ್ಗೆ ಚರ್ಚೆ ನಡೆಸಲಿದ್ದಾರೆ.

ಸೌದಿ ಅರೇಬಿಯಾ ವಿರೋಧವಿಲ್ಲ: ಜೈಶ್‌ ಉಗ್ರ ಸಂಘಟನೆಯನ್ನು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ನಿಷೇಧಿತ ಉಗ್ರರ ಪಟ್ಟಿಗೆ ಸೇರಿಸಲು ಸೌದಿ ಅರೇಬಿಯಾ ವಿರೋಧ ಮಾಡುವುದಿಲ್ಲ. ಉಗ್ರಗಾಮಿತ್ವ ಮತ್ತು ಭಯೋತ್ಪಾದನೆ ಕೃತ್ಯಗಳಲ್ಲಿ ತೊಡಗಿರುವ ಯಾರನ್ನೇ ಆಗಲಿ ಅವರನ್ನು ವಿಶ್ವಸಂಸ್ಥೆ ನಿಷೇಧಿಸಬೇಕು ಎಂದು ಸೌದಿ ಅರೇಬಿಯಾ ವಿದೇಶಾಂಗ ಸಚಿವ ಅಬ್ಧೆಲ್‌ ಬಿನ್‌ ಅಹ್ಮದ್‌ ಅಲ್‌-ಜುಬೈರ್‌ ಹೇಳಿದ್ದಾರೆ. “ಪಿಟಿಐ’ ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ಪಾಕಿಸ್ಥಾನ ಮತ್ತು ಸೌದಿ ನಡುವೆ ಹೊರಡಿಸಲಾಗಿರುವ ಜಂಟಿ ಘೋಷಣೆಯಲ್ಲಿ ವಿಶ್ವಸಂಸ್ಥೆಯ ನಿಷೇಧಿತ ಪಟ್ಟಿಗೆ ಉಗ್ರ ಸಂಘಟನೆಗಳನ್ನು ಸೇರಿಸುವ ವಿಚಾರ ರಾಜಕೀಯದಿಂದ ಹೊರತಾಗಿರುವ ಬಗ್ಗೆ ಒತ್ತು ನೀಡಿದೆ ಎಂದಿದ್ದಾರೆ.

Advertisement

ಏಳು ಲಕ್ಷ ಕೋಟಿ ರೂ. ಹೂಡಿಕೆ: ಸೌದಿ ಅರೇಬಿಯಾ ಮುಂದಿನ ದಿನಗಳಲ್ಲಿ 7 ಲಕ್ಷ  ಕೋಟಿ ರೂ. (100 ಬಿಲಿಯನ್‌ ಅಮೆರಿಕನ್‌ ಡಾಲರ್‌) ಮೊತ್ತ ಹೂಡಿಕೆ ಮಾಡಲಿದೆ ಎಂದು ಸಲ್ಮಾನ್‌ ಘೋಷಿಸಿದ್ದಾರೆ. ಜತೆಗೆ, 2016ರಲ್ಲಿ ಪ್ರಧಾನಿ ಮೋದಿ ಪ್ರವಾಸ ಕೈಗೊಂಡ ಬಳಿಕ  ತಮ್ಮ ದೇಶ 3ಲಕ್ಷ ಕೋಟಿ ರೂ. (44 ಬಿಲಿಯನ್‌ ಡಾಲರ್‌) ಹೂಡಿಕೆ ಮಾಡಿರುವುದಾಗಿ ಹೇಳಿದ್ದಾರೆ. ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತ ಸಾಧಿಸಿರುವ ಪ್ರಗತಿ ಶ್ಲಾಘನೀಯ ಎಂದಿದ್ದಾರೆ.

ಪಾಕ್‌ಗೆ ಸಾಕ್ಷ್ಯ ಹಸ್ತಾಂತರವಿಲ್ಲ!
ಪುಲ್ವಾಮಾ ಉಗ್ರ ದಾಳಿಗೆ ಸಂಬಂಧಿಸಿದಂತೆ ಜೈಶ್‌ ಎ ಮೊಹಮ್ಮದ್‌ ಉಗ್ರ ಸಂಘಟನೆ ಹಾಗೂ ಪಾಕಿಸ್ಥಾನದ ಪಾತ್ರದ ಬಗ್ಗೆ ಪಾಕಿಸ್ಥಾನಕ್ಕೆ ಸಾಕ್ಷ್ಯಗಳನ್ನು ನೀಡುವುದಿಲ್ಲ. ಬದಲಿಗೆ ಮಿತ್ರರಾಷ್ಟ್ರಗಳಿಗೆ ಈ ಬಗ್ಗೆ ಎಲ್ಲ ಸಾಕ್ಷ್ಯಗಳನ್ನೂ ಸಲ್ಲಿಸಲು ಕೇಂದ್ರ ನಿರ್ಧರಿಸಿದೆ. 

ಈ ಹಿಂದೆ ಮುಂಬೈ ದಾಳಿ, ಪಠಾಣ್‌ಕೋಟ್‌ ದಾಳಿ ವೇಳೆಯೂ ಪಾಕಿಸ್ಥಾನಕ್ಕೆ ಸಾಕ್ಷ್ಯ ನೀಡಲಾಗಿತ್ತು. ಮುಂಬೈ ದಾಳಿಯಲ್ಲಿ ಲಷ್ಕರ್‌ ಎ ತೋಯ್ಬಾ ಉಗ್ರ ಹಫೀಜ್‌ ಸಯೀದ್‌ ಪಾತ್ರದ ಬಗ್ಗೆ ಸಾಕ್ಷ್ಯ ನೀಡಲಾಗಿತ್ತು. ಆದರೆ ಈವರೆಗೂ ಯಾವ ಕ್ರಮವನ್ನೂ ಪಾಕ್‌ ಕೈಗೊಂಡಿಲ್ಲ. ಬದಲಿಗೆ ಸಯೀದ್‌ ಇಂದಿಗೂ ಪಾಕಿಸ್ಥಾನದಲ್ಲಿ ರಾಜಾರೋಷವಾಗಿ ಓಡಾಡಿಕೊಂಡಿದ್ದಾನೆ. ಪಠಾಣ್‌ಕೋಟ್‌ ದಾಳಿ ಬಗ್ಗೆಯೂ ಪಾಕ್‌ಗೆ ಸಾಕಷ್ಟು ಸಾಕ್ಷ್ಯ ನೀಡಲಾಗಿತ್ತು. ಅಷ್ಟೇ ಅಲ್ಲ, ಸ್ಥಳಕ್ಕೆ ಆಗಮಿಸಿ ಮಾಹಿತಿಯನ್ನು ಪಡೆದುಕೊಂಡು ಹೋಗಲು ಪಾಕಿಸ್ಥಾನದ ತನಿಖಾಧಿಕಾರಿಗಳಿಗೆ ಅವಕಾಶ ನೀಡಲಾಗಿತ್ತು. ಆದರೆ ಯಾವುದೇ ಸಾಕ್ಷ್ಯವನ್ನು ಭಾರತ ನೀಡಲೇ ಇಲ್ಲ ಎಂದು ವಾಪಸ್‌ ಹೋದ ನಂತರ ಪಾಕ್‌ ಅಧಿಕಾರಿಗಳು ಹೇಳಿಕೊಂಡಿದ್ದರು.  ಹೀಗಿರುವಾಗ, ಪುಲ್ವಾಮಾ ಘಟನೆ ಬಗ್ಗೆ ಸಾಕ್ಷ್ಯ ಕೊಟ್ಟರೆ ತನಿಖೆಗೆ ಸಿದ್ಧ ಎಂದು ಪಾಕಿಸ್ಥಾನ ಪ್ರಧಾನಿ ಇಮ್ರಾನ್‌ ಖಾನ್‌ ಹೇಳಿರುವುದು ಆಭಾಸವೆನಿಸಿದೆ.

ಪಾಕ್‌ ಕೈದಿಯ ಹತ್ಯೆ
ಜೈಪುರದ ಕೇಂದ್ರ ಕಾರಾಗೃಹದಲ್ಲಿದ್ದ ಪಾಕಿಸ್ಥಾನಿ ಕೈದಿಯೊಬ್ಬನನ್ನು ಉಳಿದ ಕೈದಿಗಳೇ ಹತ್ಯೆಗೈದಿರುವಂಥ ಘಟನೆ ಬುಧವಾರ ನಡೆದಿದೆ. ಪುಲ್ವಾಮಾ ದಾಳಿ ಹಿನ್ನೆಲೆಯಲ್ಲಿ ಭಾರತ-ಪಾಕ್‌ ನಡುವೆ ಪ್ರಕ್ಷುಬ್ಧ ವಾತಾವರಣ ಸೃಷ್ಟಿಯಾಗಿರುವ ಹಿನ್ನೆಲೆಯಲ್ಲಿ ಈ ಘಟನೆ ಮಹತ್ವ ಪಡೆದಿದೆ. ಕಾನೂನುಬಾಹಿರ ಚಟುವಟಿಕೆ ಕಾಯ್ದೆಯನ್ವಯ ಜೀವಾವಧಿ ಶಿಕ್ಷೆಗೊಳಗಾಗಿರುವ ಪಾಕ್‌ನ ಸಿಯಾಲ್‌ಕೋಟ್‌ ನಿವಾಸಿ ಶಕ್ರುಲ್ಲಾ  (50) ಎಂಬಾತನೇ ಕೊಲೆಯಾದ ಕೈದಿ. ಜೈಲಿನೊಳಗೆ ಕೈದಿಗಳ ನಡುವೆ ಗಲಾಟೆ ನಡೆದಿದ್ದು, ಶಕ್ರುಲ್ಲಾ ತಲೆ ಮೇಲೆ ಕಲ್ಲು ಹೊತ್ತು ಹಾಕಿ ಹತ್ಯೆಗೈಯಲಾಗಿದೆ. ಘಟನೆಗೆ ನಿಖರ ಕಾರಣ ತಿಳಿದುಬಂದಿಲ್ಲ ಎಂದು ಐಜಿ (ಜೈಲು) ರೂಪಿಂದರ್‌ ಸಿಂಗ್‌ ಹೇಳಿದ್ದಾರೆ. ಇದೇ ವೇಳೆ, ಕೈದಿಯ ಕೊಲೆ ಕುರಿತು ಕಳವಳ ವ್ಯಕ್ತಪಡಿಸಿರುವ ಪಾಕಿಸ್ಥಾನ, ಭಾರತದಿಂದ ವರದಿ ಕೇಳಿದೆ.

ವ್ಯಾಪಾರಿಗಳ ಮೇಲೆ ಹಲ್ಲೆ 
ಹರಿಯಾಣಕ್ಕೆ ಹೊರಟಿದ್ದ ಕಾಶ್ಮೀರದ ಇಬ್ಬರು ಶಾಲು ವ್ಯಾಪಾರಿಗಳ ಮೇಲೆ ರೈಲಿನಲ್ಲೇ ಹಲ್ಲೆ ನಡೆದಿರುವ ಘಟನೆ ವರದಿಯಾಗಿದೆ. ತಾವು ವ್ಯಾಪಾರಕ್ಕೆಂದು ರೋಹrಕ್‌ಗೆ ತೆರಳಲು ರೈಲು ಹತ್ತಿದ್ದೆವು. ರೈಲಿನಲ್ಲಿ ಕೆಲವರು ನಮ್ಮನ್ನು ಕಲ್ಲುತೂರಾಟಗಾರರೆಂದು ನಿಂದಿಸಿ, ಹಲ್ಲೆ ಮಾಡಿದರು. ಇದರಿಂದ ಭೀತಿಗೊಳಗಾದ ನಾವು ನಮ್ಮ 2 ಲಕ್ಷ ರೂ. ಮೌಲ್ಯದ ಶಾಲುಗಳನ್ನು ರೈಲಲ್ಲೇ ಬಿಟ್ಟು ಅರ್ಧದಲ್ಲೇ ಪ್ರಯಾಣ ಕಡಿತಗೊಳಿಸಿ ವಾಪಸಾದೆವು ಎಂದು ಅವರು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಇದೇ ವೇಳೆ, ಪುಲ್ವಾಮಾ ದಾಳಿಯನ್ನು “ಆಘಾತಕಾರಿ’ ಎಂದು ಕರೆದಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, ತಪ್ಪಿತಸ್ಥರನ್ನು ಕೂಡಲೇ ಶಿಕ್ಷಿಸುವಂತೆ ಪಾಕಿಸ್ಥಾನಕ್ಕೆ ಸೂಚಿಸಿದ್ದಾರೆ. ಇನ್ನೊಂದೆಡೆ, ಭಾರತ ಮತ್ತು ಪಾಕಿಸ್ಥಾನವು ತಾಳ್ಮೆ ವಹಿಸಿಕೊಂಡು, ಸಮಸ್ಯೆ ಪರಿಹರಿಸಿಕೊಳ್ಳುವ ನಿಟ್ಟಿನಲ್ಲಿ ಹೆಜ್ಜೆಯಿಡಬೇಕು ಎಂದು ವಿಶ್ವಸಂಸ್ಥೆ ಸಲಹೆ ನೀಡಿದೆ. 

ಹಜ್‌ ಯಾತ್ರಾ ಮಿತಿ ಹೆಚ್ಚಳ
ವಾರ್ಷಿಕ ಹಜ್‌ ಯಾತ್ರೆಗೆ ಸಂಬಂಧಿಸಿ ಭಾರತದ ಯಾತ್ರಿಕರ ಮಿತಿಯನ್ನು 25 ಸಾವಿರ ಹೆಚ್ಚಿಸಲಾಗಿದ್ದು, ಮುಂದಿನ ದಿನಗಳಲ್ಲಿ ದೇಶದಿಂದ ಒಟ್ಟು 2 ಲಕ್ಷ ಮಂದಿಗೆ ಯಾತ್ರೆ ಕೈಗೊಳ್ಳಲು ಅವಕಾಶ ಸಿಗಲಿದೆ. ಮೂರು ವರ್ಷಗಳ ಅವಧಿಯಲ್ಲಿ ಈ ರೀತಿ ಮಿತಿ ಹೆಚ್ಚಳವಾಗುತ್ತಿರುವುದು ಇದು ಮೂರನೇ ಬಾರಿ. ಪ್ರಧಾನಿ ಮೋದಿ ಮತ್ತು ಸೌದಿಯ ಸಲ್ಮಾನ್‌ ಜತೆಗಿನ ಮಾತುಕತೆ ವೇಳೆ ಈ ಅಂಶಗಳು ಪ್ರಸ್ತಾಪವಾಗಿವೆ. ಕಳೆದ ವರ್ಷವೂ ಸೌದಿಯು ಭಾರತದ ಹಜ್‌ ಕೋಟಾವನ್ನು ಹೆಚ್ಚಿಸಿದ್ದು, 1.75 ಲಕ್ಷ ಮಂದಿಗೆ ಅವಕಾಶ ನೀಡಿತ್ತು.

ಬಗೆ ಬಗೆಯ ತಿಂಡಿಗಳು
ಸೌದಿ ದೊರೆ ಗೌರವಾರ್ಥ ಪ್ರಧಾನಿ ಮೋದಿ ಅದ್ಧೂರಿ ಔತಣಕೂಟ ಏರ್ಪಡಿಸಿದ್ದರು. ಅದರಲ್ಲಿ ದಕ್ಷಿಣ ಭಾರತ ಶೈಲಿಯ ಕಾಫಿ, ಗೋಲ್‌ಗೊಪ್ಪಾ, ರೋಗನ್‌ಜೋಶ್‌, ಕೇಸರ್‌ ಜಿಲೇಬಿ, ರವಾ ಟೋಸ್ಟ್‌ ಗುಚ್ಚಿ ಚಿಲೋಗಾj, ಬಾದಾಮ್‌, ಖೇವಾ (ಒಂದು ರೀತಿಯ ಚಹಾ), ತಂದೂರಿ ಗುಲಾಬಿ ಮಚ್ಚಿ, ಝತರ್‌ ಕೇಸರ್‌ ಟಿಕ್ಕಾ ಸಹಿತ ವಿವಿಧ ರೀತಿಯ ಸಸ್ಯಾಹಾರ ಹಾಗೂ ಮಾಂಸಾಹಾರದ ರುಚಿಯಾದ ಅಡುಗೆಗಳೂ ಇದ್ದವು.

Advertisement

Udayavani is now on Telegram. Click here to join our channel and stay updated with the latest news.

Next