Advertisement

ಭಾರತವೇ ಭರವಸೆ; ಆರ್ಥಿಕ ಸಮೀಕ್ಷೆಯಲ್ಲಿ ಉಲ್ಲೇಖ

01:25 AM Feb 01, 2023 | Team Udayavani |

ಹೊಸದಿಲ್ಲಿ: ಕೊರೊನಾ ಕಷ್ಟಕಾಲದಿಂದ ಹೊರಗೆ ಬಂದಿದ್ದೇವೆ, ಮಾರುಕಟ್ಟೆ ಚೇತರಿಸಿಕೊಳ್ಳುತ್ತಿದೆ. ದೇಶದ ಆರ್ಥಿಕತೆಯೂ ನಿರೀಕ್ಷಿತ ವೇಗದಲ್ಲಿ ಬೆಳವಣಿಗೆಯಾಗುತ್ತಿದೆ. ಮುಂದಿನ ದಿನಗಳು ಉತ್ತಮವಾಗಿರಲಿವೆ. ಉಳಿದೆಲ್ಲ ದೇಶಗಳಿಗಿಂತ ಭಾರತವೇ ಹೆಚ್ಚು ಅಭಿವೃದ್ಧಿ ಹೊಂದುತ್ತಿರುವ ದೇಶವಾಗಿದೆ…

Advertisement

ಇದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಮಂಡಿಸಿದ ಆರ್ಥಿಕ ಸಮೀಕ್ಷೆಯ ಸಾರಾಂಶ. ಕೊರೊನಾ ಬಂದಾಗಿನಿಂದ ದೇಶದ ಆರ್ಥಿಕತೆ ಒಂದಲ್ಲ ಒಂದು ಕಾರಣದಿಂದ ಸಂಕಷ್ಟಕ್ಕೆ ಸಿಲುಕಿತ್ತು. ಈಗ ಜಾಗತಿಕ ಮಟ್ಟದಲ್ಲಿ ಆರ್ಥಿಕ ಹಿಂಜರಿತ ಕಾಡುತ್ತಿದೆ. ಜತೆಗೆ ಉಕ್ರೇನ್‌-ರಷ್ಯಾ ನಡುವಿನ ಯುದ್ಧವೂ ಪೂರೈಕೆಗೆ ಆಘಾತ ಕೊಟ್ಟಿದೆ. ಈ ಬೆಳವಣಿಗೆಗಳು ದೇಶಕ್ಕೆ ಪ್ರತಿಕೂಲ ಆಗಬಹುದೇ ಎಂಬ ಆತಂಕ ಎದುರಾಗಿತ್ತು. ಆದರೆ ಪ್ರಸಕ್ತ ಸಾಲಿನ ಆರ್ಥಿಕ ಬೆಳವಣಿಗೆಯನ್ನು ಗಮನಿಸಿ, ಮುಂದಿನ ಸಾಲಿನ ಅಭಿವೃದ್ಧಿಯೂ ಚೆನ್ನಾಗಿರಲಿದೆ ಎಂಬ ಅಂಶವನ್ನು ಸಮೀಕ್ಷೆಯಲ್ಲಿ ಪ್ರತಿಪಾದಿಸಲಾಗಿದೆ.

ಪ್ರಸಕ್ತ ಸಾಲಿನಲ್ಲಿ ದೇಶದ ಒಟ್ಟು ದೇಶೀಯ ಉತ್ಪಾದನೆ (ಜಿಡಿಪಿ) ಶೇ. 7ರಷ್ಟು ಇರಲಿದೆ ಎಂದು ಆರ್ಥಿಕ ಸಮೀಕ್ಷೆ ಹೇಳಿದೆ. ಆದರೆ 2023-24ನೇ ಸಾಲಿನಲ್ಲಿ ಶೇ. 6ರಿಂದ ಶೇ. 6.8ರಷ್ಟು ಇರಲಿದೆ ಎಂದು ನಿರೀಕ್ಷಿಸಲಾಗಿದೆ. ಜಗತ್ತಿನ ಉಳಿದೆಲ್ಲ ದೇಶಗಳಿಗೆ ಹೋಲಿಸಿದರೆ ಭಾರತ ಅತ್ಯಂತ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ದೇಶಗಳಲ್ಲಿ ಮೊದಲನೇ ಸ್ಥಾನದಲ್ಲೇ ಇರಲಿದೆ ಎಂದಿದೆ.

ಇದರ ಜತೆಗೆ ಏಷ್ಯಾದ ಪ್ರಮುಖ ರಾಷ್ಟ್ರಗಳಲ್ಲಿ ಉಂಟಾಗಿರುವ ಆರ್ಥಿಕ ಬಿಕ್ಕಟ್ಟು ನಮ್ಮ ದೇಶದಲ್ಲಿ ಇಲ್ಲ. ವಿಶೇಷವಾಗಿ ಚೀನದಲ್ಲಿ ಕೊರೊನಾದಿಂದ ವಿವಿಧ ವಸ್ತುಗಳ ಪೂರೈಕೆಯ ಸರಪಣಿಗೆ ಧಕ್ಕೆ ಉಂಟಾಗಿದ್ದರೂ ಆ ಸ್ಥಿತಿ ದೇಶದಲ್ಲಿ ಇಲ್ಲವೆಂದು ಸಮೀಕ್ಷೆಯಲ್ಲಿ ಪ್ರಸ್ತಾವಿಸಲಾಗಿದೆ. ಆದರೆ ಬಡ್ಡಿದರ ಏರಿಕೆ ಮುಂದುವರಿಯಲಿದೆ ಎಂದಿದೆ.

ಹಣದುಬ್ಬರ
ಸದ್ಯ ಇರುವ ಶೇ. 6.8 ಚಿಲ್ಲರೆ ಹಣದುಬ್ಬರ ನಿಯಂತ್ರಿಸಲು ಸಾಧ್ಯವಾಗದ ಅಂಶವಲ್ಲ ಎಂದು ಸಮೀಕ್ಷೆಯಲ್ಲಿ ಅಭಿಪ್ರಾಯಪಡಲಾಗಿದೆ. ಅದರಿಂದಾಗಿ ಜನರು ವೆಚ್ಚ ಮಾಡುವ ಪ್ರಕ್ರಿಯೆಗೆ ಹಿನ್ನೆಡೆ ಆಗುವುದಿಲ್ಲ. ಆದರೆ ಬೇರೂರಿರುವ ಹಣದುಬ್ಬರದ ಪ್ರಭಾವ ಇನ್ನೂ ಸ್ವಲ್ಪ ಕಾಲ ಮುಂದುವರಿಯಲಿದೆ ಎಂದೂ ಹೇಳಲಾಗಿದೆ.

Advertisement

ಜಿಡಿಪಿ ಏರಿಕೆ
ವಿಶ್ವಬ್ಯಾಂಕ್‌ ಮತ್ತು ಅಂತಾರಾಷ್ಟ್ರೀಯ ಹಣಕಾಸು ನಿಧಿ ನಿರೀಕ್ಷೆ ಮಾಡಿದ್ದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಒಟ್ಟು ದೇಶೀಯ ಉತ್ಪಾದನೆ (ಜಿಡಿಪಿ) ಇರಲಿದೆ. ಎರಡೂ ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆಗಳು ಶೇ. 6.5 ಬೆಳವಣಿಗೆ ನಿರೀಕ್ಷೆ ಮಾಡಿದ್ದರೂ ಪ್ರಸಕ್ತ ಸಾಲಿನಲ್ಲಿ ಶೇ. 7ರ ದರದಲ್ಲಿ ಜಿಡಿಪಿ ಬೆಳವಣಿಗೆಯಾಗುವ ಆಶಾವಾದವನ್ನು ಸರಕಾರ ಹೊಂದಿದೆ. ಜಗತ್ತಿನ ಪ್ರಮುಖ ಅರ್ಥ ವ್ಯವಸ್ಥೆಗಳಲ್ಲಿ ಆರ್ಥಿಕ ಹಿಂಜರಿತದ ಛಾಯೆ ಇರುವುದರಿಂದ ದೇಶಕ್ಕೆ ಹೆಚ್ಚಿನ ರೀತಿಯಲ್ಲಿ ಹಣದ ಹರಿವು ಬರಲಿದೆ ಎಂದು ಸರಕಾರ ಪ್ರತಿಪಾದಿಸಿದೆ.

ಕೊರೊನಾ ಆತಂಕ ಮುಕ್ತಾಯ
ಜಗತ್ತಿನ ಅತ್ಯಂತ ವೇಗವಾಗಿ ಬೆಳವಣಿಗೆ ಹೊಂದುವ ಅರ್ಥ ವ್ಯವಸ್ಥೆ ಭಾರತವೇ ಆಗಿರಲಿದೆ. ಕೊರೊನಾ ಕಾಲದಲ್ಲಿ ಉಂಟಾಗಿದ್ದ ಆರ್ಥಿಕ ಹಿನ್ನಡೆಯ ಪರಿಸ್ಥಿತಿ ಈಗ ಇಲ್ಲ. ಅರ್ಥ ವ್ಯವಸ್ಥೆಯ ವಿವಿಧ ಹಂತಗಳಲ್ಲಿ ದಾಪುಗಾಲಿನ ಬೆಳವಣಿಗೆ ಸಾಧಿಸಲಿದೆ. ಸರಕು ಮತ್ತು ಸೇವೆಗಳ ತೆರಿಗೆ ಸಂಗ್ರಹದಲ್ಲಿ ದಾಖಲೆಯಾಗುತ್ತಿರುವುದೇ ಇದಕ್ಕೆ ಸಾಕ್ಷಿ. ಹೀಗಾಗಿ ದೇಶದ ಅರ್ಥ ವ್ಯವಸ್ಥೆ ಕೊರೊನಾ ಪೂರ್ವದಲ್ಲಿ ಇದ್ದ ಸ್ಥಿತಿಗೆ ತಲುಪಿದೆ ಎಂದು ಕೇಂದ್ರ ಸರಕಾರದ ಮುಖ್ಯ ಆರ್ಥಿಕ ಸಲಹೆಗಾರ ವಿ. ಅನಂತನಾಗೇಶ್ವರನ್‌ ಹೇಳಿದ್ದಾರೆ.

ಆರೋಗ್ಯ ವೆಚ್ಚ ಶೇ. 2.1
ಕೇಂದ್ರ ಮತ್ತು ರಾಜ್ಯ ಸರಕಾರಗಳು ಆರೋಗ್ಯ ಕ್ಷೇತ್ರಕ್ಕಾಗಿ ವೆಚ್ಚ ಮಾಡುವ ಪ್ರಮಾಣ ಏರಿಕೆಯಾಗಿದೆ. ಆರ್ಥಿಕ ಸಮೀಕ್ಷೆಯ ಪ್ರಕಾರ 2020-21ನೇ ಸಾಲಿನಲ್ಲಿ ಶೇ. 1.6 ಇದ್ದದ್ದು 2021-22ನೇ ವಿತ್ತ ವರ್ಷದಲ್ಲಿ ಶೇ. 2.2 ಮತ್ತು 2022-23ನೇ ಸಾಲಿನಲ್ಲಿ ಶೇ. 2.1 ಆಗಿದೆ. ಜಿಡಿಪಿಯ ಒಟ್ಟು ಮೊತ್ತದಲ್ಲಿ ಈ ವೆಚ್ಚ ಮಾಡಲಾಗಿದೆ. ಹೀಗಾಗಿ ಜನರು ತಮ್ಮ ಜೇಬಿನಿಂದ ಆರೋಗ್ಯಕ್ಕಾಗಿ ಮಾಡುವ ವೆಚ್ಚ ಇಳಿಕೆಯಾಗಿದೆ.

ಸಾಮಾಜಿಕ ಸೇವಾ ಕ್ಷೇತ್ರಗಳಲ್ಲಿ, ವಿಶೇಷವಾಗಿ ಆರೋಗ್ಯ ಕ್ಷೇತ್ರಕ್ಕೆ ಸಂಬಂಧಿಸಿದ ವೆಚ್ಚ 2022-23ನೇ ಸಾಲಿನಲ್ಲಿ ಶೇ. 26ಕ್ಕೆ ಏರಿಕೆಯಾಗಿದೆ ಎಂದು ಅಭಿಪ್ರಾಯಪಡಲಾಗಿದೆ. ಪ್ರಾಥಮಿಕ ಆರೋಗ್ಯ ವ್ಯವಸ್ಥೆಗೆ ಇರುವ ವೆಚ್ಚ 2013-14ನೇ ಸಾಲಿನಲ್ಲಿ ಶೇ. 51.1 ಇದ್ದದ್ದು 2018-19ನೇ ಸಾಲಿನಲ್ಲಿ ಶೇ. 55.2ಕ್ಕೆ ಏರಿದೆ.

2026ಕ್ಕೆ 5 ಲಕ್ಷ ಕೋಟಿ ಡಾಲರ್‌ ಆರ್ಥಿಕತೆ
ಸದ್ಯ ಭಾರತದ ಆರ್ಥಿಕತೆ ಉತ್ತಮವಾಗಿಯೇ ಮುಂದಡಿ ಇರಿಸುತ್ತಿದ್ದು, ಮಾರ್ಚ್‌ ವೇಳೆಗೆ 3.5 ಟ್ರಿಲಿಯನ್‌ ಡಾಲರ್‌ ಆರ್ಥಿಕತೆ ಆಗಲಿದೆ. 2026ರ ಹೊತ್ತಿಗೆ ಭಾರತ 5 ಟ್ರಿಲಿಯನ್‌ ಡಾಲರ್‌ ಆರ್ಥಿಕತೆಯನ್ನು ಒಳಗೊಂಡ ದೇಶವಾಗಲಿದೆ ಎಂದು ಮುಖ್ಯ ಆರ್ಥಿಕ ಸಲಹೆಗಾರ ನಾಗೇಶ್ವರನ್‌ ಹೇಳಿದ್ದಾರೆ. ಅಷ್ಟೇ ಅಲ್ಲ, 2030ರ ವೇಳೆಗೆ 7 ಟ್ರಿಲಿಯನ್‌ ಡಾಲರ್‌ ಆರ್ಥಿಕತೆಯಾಗಿ ಬೆಳೆಯಲಿದೆ ಎಂದು ತಿಳಿಸಿದ್ದಾರೆ.

1.55 ಲಕ್ಷ ಕೋ.ರೂ. ಜಿಎಸ್‌ಟಿ ಸಂಗ್ರಹ
ಜನವರಿಯಲ್ಲಿ 1.55 ಲಕ್ಷ ಕೋಟಿ ರೂ. ಜಿಎಸ್‌ಟಿ ಸಂಗ್ರಹವಾಗಿದೆ. ಜಿಎಸ್‌ಟಿ ಆರಂಭವಾದ ಬಳಿಕ 2ನೇ ಬಾರಿಗೆ ಈ ಪ್ರಮಾಣದ ತೆರಿಗೆ ಸಂಗ್ರಹವಾಗಿದೆ ಎಂಬುದು ವಿಶೇಷ.

ಸೋಮವಾರ ಸಂಜೆಯ ವೇಳೆಗೆ 1,55,922 ಕೋಟಿ ರೂ. ಜಿಎಸ್‌ಟಿ ಸಂಗ್ರಹವಾಗಿದೆ ಎಂದು ವಿತ್ತ ಸಚಿವಾಲಯ ಹೇಳಿದೆ. ಹಾಲಿ ಹಣಕಾಸು ವರ್ಷದಲ್ಲಿ 1.50 ಲಕ್ಷ ಕೋಟಿ ರೂ.ಗಳಿಗಿಂತ ಹೆಚ್ಚು ಜಿಎಸ್‌ಟಿ ಸಂಗ್ರಹವಾಗುತ್ತಿರುವುದು ಇದು ಮೂರನೇ ಬಾರಿ.

ಜಗತ್ತೇ ಎದುರು ನೋಡಲಿರುವ ಬಜೆಟ್‌ ಮಂಡನೆ
ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಬುಧವಾರ ಜಗತ್ತೇ ಕಾತರದಿಂದ ಎದುರು ನೋಡುತ್ತಿರುವಂತಹ ಬಜೆಟ್‌ ಮಂಡಿಸಲಿದ್ದಾರೆ. ಈ ಮೂಲಕ ಜಗತ್ತು ಸದ್ಯ ಎದುರಿಸುತ್ತಿರುವ ತಲ್ಲಣಗಳಿಗೆ ಪರಿಹಾರ ಸೂಚಿಸುವ ಪ್ರಯತ್ನ ಮಾಡಲಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಸಂಸತ್ತಿನ ಬಜೆಟ್‌ ಅಧಿವೇಶನ ಆರಂಭಕ್ಕೆ ಮುನ್ನ ಮಾತನಾಡಿದ ಪ್ರಧಾನಿ, ಜಾಗತಿಕ ಅನಿಶ್ಚಿತತೆಯ ನಡುವೆ ಭಾರತದ ಬಜೆಟ್‌ ಸಾಮಾನ್ಯ ನಾಗರಿಕರ ಭರವಸೆ ಮತ್ತು ಆಕಾಂಕ್ಷೆಗಳನ್ನು ಈಡೇರಿಸಲು ಪ್ರಯತ್ನಿಸಲಿದೆ. ಪ್ರತಿಯೊಬ್ಬ ನಾಗರಿಕರ ಆಶೋತ್ತರಗಳನ್ನು ಪೂರೈಸುವ ನಿಟ್ಟಿನಲ್ಲಿ ಆಶಾದಾಯಕ ಬಜೆಟನ್ನು ಹಣಕಾಸು ಸಚಿವರು ಮಂಡಿಸಲಿದ್ದಾರೆ ಎಂಬ ದೃಢ ನಂಬಿಕೆ ನನಗಿದೆ ಎಂದರು. ಬಿಜೆಪಿ ನೇತೃತ್ವದ ಎನ್‌ಡಿಎ ಸರಕಾರ ದೇಶ ಮತ್ತು ನಾಗರಿಕರು ಮೊದಲು ಎಂಬ ಆಶಯದೊಂದಿಗೆ ಕೆಲಸ ಮಾಡುತ್ತಿದೆ. ಅದರಂತೆ ಸದನದಲ್ಲಿ ಕೆಲಸ ಮಾಡುತ್ತೇವೆ ಎಂದು ಪ್ರಧಾನಿ ಮೋದಿ ಹೇಳಿದರು.

ಇಂದು ಬಜೆಟ್‌ ಮಂಡನೆ
ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ 2023-24ನೇ ಸಾಲಿನ ಬಜೆಟನ್ನು ಬುಧವಾರ ಮಂಡಿಸಲಿದ್ದಾರೆ. ಲೋಕಸಭೆಯಲ್ಲಿ ಬೆಳಗ್ಗೆ 11ಕ್ಕೆ ಬಜೆಟ್‌ ಮಂಡನೆಯಾಗಲಿದ್ದು, ಇದು ಮೋದಿ ನೇತೃತ್ವದ ಸರಕಾರದ ಕೊನೆಯ ಪೂರ್ಣ ಬಜೆಟ್‌. ಕರ್ನಾಟಕ ಸೇರಿದಂತೆ 9 ರಾಜ್ಯಗಳ ವಿಧಾನಸಭೆ ಚುನಾವಣೆ, 2024ರ ಮಹಾಚುನಾವಣೆ ಹಿನ್ನೆಲೆಯಲ್ಲಿ ಆದಾಯ ತೆರಿಗೆದಾರರಿಗೆ ವಿನಾಯಿತಿ ಹೆಚ್ಚಳ, ಗೃಹ ಸಾಲಗಾರರಿಗೆ ತೆರಿಗೆ ಮೇಲಿನ ಹೊರೆ ಇಳಿಕೆ ಸೇರಿದಂತೆ ಹಲವು ನಿರೀಕ್ಷೆಗಳು ಈ ಬಾರಿ ಪೂರೈಕೆಯಾಗುವ ಆಶಯ ಇದೆ.

ಆರ್ಥಿಕ ಸಮೀಕ್ಷೆಯ ಮುಖ್ಯಾಂಶಗಳು

– ಶೇ. 6ರಿಂದ 6.8ರ ದರದಲ್ಲಿ ಅರ್ಥ ವ್ಯವಸ್ಥೆಯ ಬೆಳವಣಿಗೆ

– ಶೇ. 7ರ ದರದಲ್ಲಿಯೇ ಜಿಡಿಪಿ ವೃದ್ಧಿಯ ನಿರೀಕ್ಷೆ

– ಕೊರೊನಾ ಅವಧಿಯ ಅರ್ಥ ವ್ಯವಸ್ಥೆ ಚೇತರಿಕೆ ಮುಕ್ತಾಯ

– ಲೈಸೆನ್ಸ್‌ ರಾಜ್‌ ವ್ಯವಸ್ಥೆ ನಿವಾರಣೆಗೆ ಶಿಫಾರಸು

– ರೂಪಾಯಿ ಮೌಲ್ಯ ಏರಿಳಿಕೆ ಖಚಿತವಾದರೂ ಅದೇ ಸದೃಢ ಕರೆನ್ಸಿ

Advertisement

Udayavani is now on Telegram. Click here to join our channel and stay updated with the latest news.

Next