Advertisement
ವಿಶ್ವಸಂಸ್ಥೆ ಮಾನ್ಯ ಮಾಡಿರುವ ಮಾನವ ಹಕ್ಕುಗಳಿಗೆ ಇಂದು ಎಪ್ಪತ್ತರ ಹುಟ್ಟುಹಬ್ಬ. 1948 ಡಿ. 10ರಂದು ವಿಶ್ವಸಂಸ್ಥೆ ಮಾನವ ಹಕ್ಕುಗಳಿಗೆ ಅಧಿಕೃತವಾಗಿ ಮುದ್ರೆ ಒತ್ತಿದ ದಿನ. ಮಾನವ ಹಕ್ಕುಗಳಿಗೆ ಇನ್ನಷ್ಟು ಭರವಸೆ ನೀಡುವ ದೃಷ್ಟಿಯಿಂದ ಭಾರತ ಸರಕಾರ 1993ರಂದು ಮಾನವ ಹಕ್ಕು ಆಯೋಗವನ್ನು ಸ್ಥಾಪಿಸಿ ತನ್ಮೂಲಕ ಪ್ರತಿ ರಾಜ್ಯ- ಪ್ರತಿ ಜಿಲ್ಲೆಗಳಲ್ಲಿ ಮಾನವ ಹಕ್ಕುಗಳ ಅರಿವು ಸಂರಕ್ಷಣೆಗಾಗಿ ವಿಶೇಷ ಘಟಕಗಳನ್ನು ಸ್ಥಾಪಿಸಲು ಅವಕಾಶ ಮಾಡಿಕೊಟ್ಟಿದೆ.
Related Articles
Advertisement
ಅಫ್ಘಾನಿಸ್ತಾನ, ಪಾಕಿಸ್ತಾನ, ಸೊಮಾಲಿಯಾದಲ್ಲಿ ಜನರು ಹಸಿವು, ಬಡತನ ನಿರುದ್ಯೋಗದಿಂದ ನರಳುತ್ತಿದ್ದಾಗ ಹಸಿದ ಹೊಟ್ಟೆಗೆ ಅನ್ನ ನೀಡದೇ, ದುಡಿಯುವ ಕೈಗೆ ಕೆಲಸ ನೀಡದೇ, ಯುದ್ಧ ಮಾಡಲು ಯುದ್ಧ ಸಾಮಗ್ರಿಗಳನ್ನು ಕೈಗೆ ನೀಡುವುದರ ಮೂಲಕ ವಿಶ್ವದಲ್ಲಿ ಭಯೋತ್ಪಾದನಾ ಶಕ್ತಿಗಳಿಗೆ ಇಂಬು ನೀಡಿ ಭಯೋತ್ಪಾದನೆಯನ್ನು ವಿಶ್ವ ಸಮಸ್ಯೆಯಾಗಿ ರೂಪಿಸಿದ ರೂವಾರಿ ಎಂಬ ಹಣೆಪಟ್ಟಿಯನ್ನು ಅಮೆರಿಕ ಕಟ್ಟಿಸಿಕೊಂಡಿದೆ. ಭಯೋತ್ಪಾದನೆಯ ಪಿಡುಗಿನಿಂದ ಭಾರತ ನಲುಗುತ್ತಿದ್ದ ಸಂದರ್ಭದಲ್ಲಿ ವಿಶ್ವಸಂಸ್ಥೆಯಲ್ಲಿ ಭಯೋತ್ಪಾದನೆ ವಿಷಯ ಚರ್ಚೆಗೆ ತೆಗೆದುಕೊಂಡಾಗ ಅಂದು ಇದೇ ಅಮೆರಿಕ ಭಯೋತ್ಪಾದನೆ ಸ್ಥಳೀಯ ಸಮಸ್ಯೆ ಅನ್ನುವ ಧಾಟಿಯಲ್ಲಿ ವಾದ ಮಂಡಿಸಿತ್ತು.
ಮಾಡಿದ್ದುಣ್ಣೋ ಮಹಾರಾಯ ಎಂಬ ನಾಣ್ಣುಡಿಯಂತೆ 2001 ಸೆ. 11ರಂದು ಒಸಾಮ ಬಿನ್ ಲಾಡೆನ್ ಎಂಬ ಮಹಾ ಭಯೋತ್ಪಾದಕ ಅಮೆರಿಕದ ವಿಶ್ವ ವ್ಯಾಪಾರ ಕೇಂದ್ರ ಮತ್ತು ಪೆಂಟಗಾನ್ ಮೇಲೆ ಬಾಂಬು ಸಿಡಿಸಿದಾಗ, ಇದೇ ಅಮೆರಿಕ ಜಗತ್ತಿಗೆ ಕೇಳುವ ಥರದಲ್ಲಿ ಭಯೋತ್ಪಾದನೆ ಒಂದು ಜಾಗತಿಕ ಸಮಸ್ಯೆ ಎಂದು ಬೊಬ್ಬೆ ಹೊಡೆದದ್ದು ಮಾತ್ರವಲ್ಲ; ಸಿರಿವಂತರ ಮನೆಗೆ ಕಲ್ಲು ಬಿದ್ದರೆ ಊರೆಲ್ಲ ಸುದ್ದಿ ಅನ್ನುವ ಹಾಗೆ ಅಂದಿನಿಂದ ವಿಶ್ವ ಮಟ್ಟದಲ್ಲಿ ಭಯೋತ್ಪಾದನಾ ತಡೆಗಾಗಿ ವಿಶೇಷ ಅಧ್ಯಯನದ ವಿಚಾರ ಸಂಕಿರಣಗಳನ್ನು ನಡೆಸಲಾಯಿತು ಮತ್ತು ಪಠ್ಯ ಪುಸ್ತಕಗಳ ಪುಟಗಳಲ್ಲಿಯೂ ಭಯೋತ್ಪಾದನಾ ವಿಷಯಗಳನ್ನು ಸೇರಿಸಲಾಯಿತು.
ಮಾನವ ಹಕ್ಕುಗಳ ಪ್ರತಿಪಾದನೆಯಲ್ಲಿ, ಅನುಷ್ಠಾನದಲ್ಲಿ ಮೊದಲ ಪಂಕ್ತಿಯಲ್ಲಿ ನಿಲ್ಲಬೇಕಾದ ದೇಶ ಭಾರತ ಅನ್ನುವುದನ್ನು ನಾವೇ ಮರೆತಿರುವುದು ಅತ್ಯಂತ ವಿಷಾದನೀಯ. ಮಾನವ ಹಕ್ಕುಗಳ ಕುರಿತು ನಮ್ಮ ವಿದ್ಯಾರ್ಥಿಗಳಿಗೆ ಪಾಠ ಮಾಡಬೇಕಾದ ಸಂದರ್ಭದಲ್ಲಿ ನಾವು ಉಲ್ಲೇಖೀಸುತ್ತಿರುವುದು ಪಾಶ್ಚಾತ್ಯ ರಾಷ್ಟ್ರಗಳ, ವಿಶ್ವಸಂಸ್ಥೆಯ ಕೊಡುಗೆಯನ್ನೇ ಆಗಿದೆ. ಮಾನವ ಹಕ್ಕುಗಳ ವಿಚಾರದಲ್ಲಿ ಭಾರತದ ಕೊಡುಗೆಗಳೇನು ಎಂಬುದು ನಮ್ಮ ಪಠ್ಯಪುಸ್ತಕಗಳಲ್ಲಿ ಕಾಣಸಿಗುತ್ತಿಲ್ಲ. ಮಾನವ ಹಕ್ಕುಗಳ ಪರಿಕಲ್ಪನೆ ಭಾರತೀಯ ಸಂಸ್ಕೃತಿಯಲ್ಲಿ, ವೇದ ಪುರಾಣಗಳಲ್ಲಿ, ನಮ್ಮ ಇತಿಹಾಸಕಾರರ, ಆಡಳಿತಗಾರ ಚಿಂತನೆಯಲ್ಲಿ ಸಾಕಷ್ಟು ಪಡಿಮೂಡಿದೆ ಅನ್ನುವ ನಿಜ ಸಂಗತಿಯನ್ನು ನಮ್ಮ ಯುವ ಪೀಳಿಗೆಗೆ ಮನನ ಮಾಡಬೇಕಾಗಿದೆ.
ವಿಶ್ವದ ಎಲ್ಲ ಜನರೂ ಸುಖವಾಗಿರಲಿ, ಸಂತೋಷವಾಗಿರಲಿ ಎಂಬ ವಿಶ್ವಮಾನವ ಸಂದೇಶವನ್ನು ಮೊದಲು ಸಾರಿದವರು ಭಾರತೀಯರು. ಇಂದು ವಿಶ್ವ ಮಾನವ ಹಕ್ಕು ಸಂಸ್ಥೆ ಪ್ರತಿಪಾದಿಸುತ್ತಿರುವ ಆಹಾರ, ನೀರಿನ ಹಕ್ಕು ಸಮಾನವಾಗಿ ವಿತರಣೆಯಾಗಬೇಕು ಎಂಬ ನೈಜ ಬದುಕಿನ ಹಕ್ಕನ್ನು ಮೊದಲು ಪ್ರತಿಪಾದಿಸಿರುವುದು ನಮ್ಮ ವೇದಕಾಲ ದಲ್ಲಿ ರಚಿತವಾದ ಅಥರ್ವ ವೇದದಲ್ಲಿ ಅನ್ನುವುದನ್ನು ಮತ್ತೆ ನಾವು ವಿಶ್ವಕ್ಕೆ ತಿಳಿಸಬೇಕಾಗಿದೆ. ರಾಜಧರ್ಮದಲ್ಲಿ ಪ್ರಸ್ತಾಪಿಸಿರುವ ತಾಯಿ ಯಂತೆ ಭೂಮಿ ಎಲ್ಲ ಜೀವಿಗಳನ್ನು ಬೆಂಬಲಿಸುತ್ತದೆ. ಅದೇ ರೀತಿ ರಾಜ ಅಥವಾ ಆಳುವ ವರ್ಗ ಎಲ್ಲರಿಗೂ ಸಮಾನ ಅವಕಾಶ ಕಲ್ಪಿಸ ಬೇಕೆಂಬ ನೀತಿ ವಾಕ್ಯವನ್ನು ಮೊದಲು ವಿಶ್ವಕ್ಕೆ ನೀಡಿದ ಕೀರ್ತಿ ಭಾರ ತೀಯ ರಿಗೆ ಸಲ್ಲುತ್ತದೆ. ಕೌಟಿಲ್ಯ ತನ್ನ ಅರ್ಥಶಾಸ್ತ್ರದಲ್ಲಿ ಖೈದಿ ನಿದ್ರಿಸು ವಾಗ, ಆಹಾರ ಸೇವನೆ ಮಾಡುವಾಗ ಅಡ್ಡಿ ಪಡಿಸುವ ಅಧಿಕಾರಿಗಳಿಗೆ ದಂಡ ವಿಧಿಸಬೇಕು ಎಂದಿದ್ದಾನೆ. ಇಂದು ಇದೇ ಮಾತುಗಳನ್ನು ವಿಶ್ವ ಸಂಸ್ಥೆಯೋ, ಅಂತರಾಷ್ಟ್ರೀಯ ನ್ಯಾಯಾಲಯವೋ ಹೇಳಿದೆ ಅನ್ನುವು ದನ್ನು ಉಲ್ಲೇಖೀಸುತ್ತೇವೆ.ಬದಲಿಗೆ ನಮ್ಮ ಕೌಟಿಲ್ಯ ಪ್ರತಿಪಾದಿಸಿ ದ್ದಾನೆ ಅನ್ನುವುದನ್ನು ಜಗತ್ತಿಗೆ ಮನವರಿಕೆ ಮಾಡುವಲ್ಲಿ ನಾವು ಸೋತಿದ್ದೇವೆ.
ವಿಶ್ವಕ್ಕೆ ಮಾನವ ಧರ್ಮದ ಪಾಠವನ್ನು ಮೊದಲು ಬೋಧಿಸಿದವರು ಭಾರತೀಯರು ಎಂಬುದಕ್ಕೆ ಮಹಾತ್ಮ ಗಾಂಧೀಜಿಯವರು ವಿಶ್ವಪಿತ ನಾಗಿ ವಿಶ್ವಕುಟುಂಬವೇ ಒಪ್ಪಿಕೊಂಡು ಪ್ರತಿ ವರ್ಷ ಗಾಂಧಿ ಜನ್ಮ ದಿನದಂದು ವಿಶ್ವ ಅಹಿಂಸಾ ದಿನವಾಗಿ ವಿಶ್ವಸಂಸ್ಥೆ ಆಚರಿಸುತ್ತಿರುವುದು ಇದಕ್ಕೆ ಸಾಕ್ಷಿ ನೀಡುತ್ತದೆ. ಸ್ವತಂತ್ರ ಭಾರತ ರೂಪಿಸಿಕೊಂಡ ಪಂಚಶೀಲ ವಿದೇಶಾಂಗ ನೀತಿಯನ್ನು ಇಂದು ವಿಶ್ವವೇ ಸಾರ್ವತ್ರಿಕ ಒಪ್ಪಿಕೊಂಡು ಮಾನ್ಯ ಮಾಡಿದೆ. ಭಾರತೀಯರಾದ ನಾವು ಸೋತಿದ್ದು ಎಲ್ಲಿ ಅಂದರೆ ನಮ್ಮ ಅಮೂಲ್ಯ ಗುಣಗಳನ್ನು ವಿಶ್ವಕ್ಕೆ ಪರಿಚಯಿಸುವುದರಲ್ಲಿ. ಈ ಮಾತನ್ನು ಬಹುಹಿಂದೆಯೇ ಸ್ವಾಮಿ ವಿವೇಕಾನಂದರು ತಿಳಿಸಿದ್ದರು. ಈ ಮಾತು ಇಂದಿಗೂ ಸತ್ಯ ಮತ್ತು ಪ್ರಸ್ತುತ ಕೂಡಾ. ಇಂದು ಇಡೀ ಜಗತ್ತೇ ಯುದ್ಧ ಎಂಬ ಎರಡಕ್ಷರದ ಕರಿನೆರಳಿನಲ್ಲಿ ಭಯದ ವಾತಾವರಣದಲ್ಲಿ ಬದುಕಬೇಕಾದ ಸ್ಥಿತಿಯಲ್ಲಿದೆ. ಯುದ್ಧಗಳನ್ನೇ ವೈಭವೀಕರಿಸುವ ಶ್ರೀಮಂತ ರಾಷ್ಟ್ರಗಳೂ ಇವೆ. ದಯವೇ ಧರ್ಮದ ಮೂಲ ಎಂಬ ಬಸವಣ್ಣನವರ ವಚನದ ಸಾಲುಗಳು, ಜಾತಿ-ಧರ್ಮ ಜನಾಂಗದ ಹೆಸರಿನಲ್ಲಿ ಜಗಳವಾಡುವ ರಾಷ್ಟ್ರಗಳಿಗೆ ನೀಡುವ ವಿಶ್ವ ಮಾನ ವೀಯತೆಯ ದಿವ್ಯ ಸ್ಪರ್ಶ. ಹಾಗಾಗಿ ಮಾನವ ಹಕ್ಕುಗಳಿಗೆ ಭಾರತವೇ ಮಹಾನ್ ಗುರುವಾಗಿ ನಿಲ್ಲುವ ಅರ್ಹತೆಯನ್ನು ಪಡೆದಿದೆ ಎಂಬುದನ್ನು ವಿಶ್ವ ಒಪ್ಪಿಕೊಳ್ಳಬೇಕಾದ ಸಂದರ್ಭವಿದು.
– ಪ್ರೊ| ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ