ಮಂಗಳೂರು: ಭಾರತ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಅರ್ಥವ್ಯವಸ್ಥೆ ಹೊಂದಿದೆ. ಇಲ್ಲಿ ಪ್ರಬಲವಾದ ಪ್ರಜಾಪ್ರಭುತ್ವ ವ್ಯವಸ್ಥೆ ಯಶಸ್ವಿಯಾಗಿ ಕಾರ್ಯಾಚರಿಸುತ್ತಿದೆ.
ಅಪೂರ್ವ ಸಂಸ್ಕೃತಿ, ಪರಂಪರೆ, ಧಾರ್ಮಿಕ ನಂಬಿಕೆ ಹೊಂದಿರುವ ಅದ್ಭುತ ದೇಶ ಭಾರತ. ಹೀಗಾಗಿಯೇ ವಿದೇಶಗಳು ಭಾರತವನ್ನು ಇಂದು ಗೌರವಿಸುತ್ತಿವೆ. ಮುಂದಿನ 10 ವರ್ಷದಲ್ಲಿ ಬಲಿಷ್ಠ ಆರ್ಥಿಕ ಶಕ್ತಿಯ ಭಾರತ ಸಾಕಾರವಾಗಲಿದೆ ಎಂದು ಬಿಜೆಪಿಯ ಮಾಜಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಮ್ ಮಾಧವ್ ಹೇಳಿದ್ದಾರೆ.
ಮಂಗಳೂರು ಸಾಹಿತ್ಯ ಉತ್ಸವದಲ್ಲಿ ರವಿವಾರ “ನೀಡ್ ಫಾರ್ ಶಿಫ್ಟಿಂಗ್ ಗ್ಲೋಬಲ್ ನರೇಟಿವ್ ಆನ್ ಇಂಡಿಯಾ’ ಎಂಬ ವಿಚಾರದ ಬಗ್ಗೆ ಅವರು ಮಾತನಾಡಿದರು.
ನಮ್ಮ ರಾಷ್ಟ್ರೀಯತೆಯ ಗುರುತನ್ನು ಮುಂದಿಟ್ಟು ಕೊಂಡೇ ಜಗತ್ತಿನಲ್ಲಿ ಸೂಪರ್ ಸ್ಟ್ರಾಂಗ್ ಆಗಿ ಬೆಳೆಯುವ ಅಗತ್ಯವಿದೆ. ಜಪಾನ್ ಮುಂತಾದ ದೇಶಗಳಂತೆ ತಂತ್ರಜ್ಞಾನದಲ್ಲಿ ಭಾರತ ಸೂಪರ್ ಪವರ್ ರಾಷ್ಟ್ರವಾಗಬೇಕಿದೆ. ಪ್ರಸ್ತುತ ಶೇ. 55ರಷ್ಟು ಚಿಪ್‌ಗ್ಳನ್ನು ತೈವಾನ್ ದೇಶ ಉತ್ಪಾದಿಸುತ್ತಿದೆ. ಆ ರಾಷ್ಟ್ರಕ್ಕೆ ಸಮಸ್ಯೆ ಉದ್ಭವಿಸಿದರೆ ಮುಂದೇನು ಎಂಬ ಪ್ರಶ್ನೆ ಎದುರಾಗುತ್ತದೆ. ಹಾಗಾಗಿ ನಮ್ಮ ತಂತ್ರಜ್ಞಾನವನ್ನು ಬಲಪಡಿಸುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಬದಲಾವಣೆ ನಡೆಯಲಿದೆ ಎಂದು ಹೇಳಿದರು.
ವಿಶ್ವದ ವಿವಿಧ ದೇಶಗಳಿಂದ ಎದುರಿಸುತ್ತಿರುವ ಸವಾಲು ಗಳನ್ನು ನಿವಾರಿಸಲು ಭಾರತ ಬಲಾಡ್ಯ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಬೇಕಿದೆ ಎಂದು ವಿವರಿಸಿದರು.
ಎಂ.ಡಿ. ನಲಪತ್ ಮಾತನಾಡಿ, ಈಗ ಆತ್ಮವಿಶ್ವಾಸ ಭಾರತಕ್ಕೆ ಇದೆ. ಈ ಆತ್ಮವಿಶ್ವಾಸ ಎಂಬುದು ಉನ್ನತ ಗುರಿಗಳನ್ನು ಇಟ್ಟುಕೊಂಡಿರುವ ಕಾರಣದಿಂದ ಬಂದಿದೆ ಎಂದರು.