ನವದೆಹಲಿ: ದೇಶದಲ್ಲಿ ಚೀತಾಗಳಿರುವ ಏಕೈಕ ರಾಷ್ಟ್ರೀಯ ಉದ್ಯಾನವನ ಎಂಬ ಗರಿಮೆಗೆ ಪಾತ್ರವಾಗಿರುವ ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನವನಕ್ಕೆ ಇದೀಗ ಮತ್ತೆ 12 ಚೀತಾಗಳನ್ನು ತರಲು ಕೇಂದ್ರ ಸರ್ಕಾರ ಉದ್ದೇಶಿಸಿದೆ.
ಈ ಬಾರಿ ದಕ್ಷಿಣ ಆಫ್ರಿಕಾ ದೇಶದಿಂದ 12 ಚೀತಾಗಳನ್ನು ತರಲಾಗುತ್ತಿದ್ದು, ಈಗಾಗಲೇ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ ಮತ್ತು ಪರಿಸರ,ಅರಣ್ಯ, ಹವಾಮಾನ ಬದಲಾವಣೆ ಸಚಿವಾಲಯದ ಅಧಿಕಾರಿಗಳ ತಂಡ ಈ ಪ್ರಕ್ರಿಯೆಗಾಗಿ ದಕ್ಷಿಣ ಆಫ್ರಿಕಾಗೆ ತೆರಳಿದೆ.
12 ಚೀತಾಗಳನ್ನು ಫೆ.18ರಂದು ಭಾರತಕ್ಕೆ ತರಲಾಗುತ್ತಿದ್ದು ಮಧ್ಯಪ್ರದೇಶ ಅರಣ್ಯ ಇಲಾಖೆ ಹೊಸ ಚೀತಾ ತಂಡ್ಕಕೆ ಸ್ವಾಗತ ಕೋರಲು ಸಜ್ಜಾಗಿ ನಿಂತಿದೆ.
ಹನ್ನೆರಡು ಚೀತಾಗಳ ಪೈಕಿ7 ಗಂಡು ಮತ್ತು 5 ಹೆಣ್ಣು ಚೀತಾಗಳು ಇರಲಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆದರೆ ಇವುಗಳನ್ನು ವಾಣಿಜ್ಯ ವಿಮಾನಗಳಲ್ಲಿ ತರಲಾಗುತ್ತಿದೆ.
ಕಳೆದ ವರ್ಷ ಸೆ.17ರಂದು ನಮೀಬಿಯಾದಿಂದ 8 ಚೀತಾಗಳನ್ನು ತರಲಾಗಿತ್ತು. ಅವುಗಳ ಪೈಕಿ 5 ಹೆಣ್ಣು ಚೀತಾಗಳಿದ್ದವು. ಅವುಗಳನ್ನು ಪ್ರಧಾನಿ ನರೇಂದ್ರ ಮೋದಿ ಕುನೋ ಉದ್ಯಾನವನಕ್ಕೆ ಬಿಡುಗಡೆ ಮಾಡುವ ಮೂಲಕ ಹೊಸ ಇತಿಹಾಸ ಸೃಷ್ಟಿಸಿದ್ದರು. ಇದೀಗ ಎರಡನೇ ಬ್ಯಾಚ್‌ನ ಚೀತಾ ಪಡೆ ಭಾರತಕ್ಕೆ ಬರುತ್ತಿದ್ದು ಮುಂಬರುವ ದಿನಗಳಲ್ಲಿ ಭಾರತದಲ್ಲಿ ಚೀತಾಗಳ ಸಂಖ್ಯೆಯಲ್ಲಿ ಗಣನೀಯ ಏರಿಕೆ ಕಂಡುಬರುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಹೇಳಿದ್ದಾರೆ.