ಸಿರವಾರ: ನಮ್ಮ ದೇಶ ಯಾವುದೇ ಒಂದು ಧರ್ಮಕ್ಕೆ ಸೀಮಿತವಾಗದೇ ಸರ್ವಧರ್ಮವನ್ನು ಹೊಂದಿದ್ದು ಶಾಂತಿಯ ತೋಟವಾಗಿದೆ ಎಂದು ಕಲ್ಲೂರು ಶ್ರೀ ಅಡವೀಶ್ವರ ಮಠದ ಶಂಭುಲಿಂಗ ಸ್ವಾಮೀಜಿ ಹೇಳಿದರು.
ಕಲ್ಲೂರು ಗ್ರಾಮದಲ್ಲಿ ಜಮಾಅತೆ ಇಸ್ಲಾಮಿ ಹಿಂದ್ ವತಿಯಿಂದ ಹಮ್ಮಿಕೊಂಡಿದ್ದ ಧಾರ್ಮಿಕ ಸೌಹಾರ್ದ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.
ದೇಶದಲ್ಲಿ ವೇಷಭೂಷಣ, ಉಡುಗೆ- ತೊಡುಗೆ, ಆಚಾರ-ವಿಚಾರ ಅನೇಕ ರೀತಿಯಾಗಿದ್ದರೂ ಭಾರತೀಯರು ನಾವೆಲ್ಲ ಒಂದೇ. ನಾವು ಯಾವುದೇ ಧರ್ಮದಲ್ಲಿ ಹುಟ್ಟಿದ್ದರೂ ನೀತಿಯ ಮೂಲಕ ಸತ್ಯದ ದಾರಿಯಲ್ಲಿ ನಡೆದು ಪ್ರಕೃತಿ ಶಕ್ತಿಯಲ್ಲಿ ಲೀನವಾಗಬೇಕು ಎಂದರು.
ದೇಶದ ಬಗ್ಗೆ ಪ್ರತಿಯೊಬ್ಬರಿಗೂ ಹೆಮ್ಮೆ ಇರಬೇಕು. ಪ್ರಪಂಚದಲ್ಲಿ ಭಾರತಕ್ಕೆ ವಿಶೇಷ ಸ್ಥಾನವಿದೆ. ಪ್ರತಿಯೊಂದು ಧರ್ಮಕ್ಕೂ ತನ್ನದೇಯಾದ ದೇಶವಿದೆ. ಆದರೆ, ಸರ್ವಧರ್ಮದವರನ್ನು ಹೊಂದಿದ ದೇಶ ಭಾರತ. ಎಲ್ಲರೂ ಅನ್ಯ ಧರ್ಮದ ವಿರುದ್ಧ ಹೋರಾಡದೇ ನಮ್ಮ ಧರ್ಮ ಪ್ರೀತಿಸಿ, ದೇಶವನ್ನು ಗೌರವಿಸಬೇಕು. ದೇಶದ ವಿಚಾರ ಬಂದಲ್ಲಿ ಪ್ರತಿಯೊಬ್ಬರೂ ಒಗ್ಗಟ್ಟಾಗಿ ನಿಲ್ಲಬೇಕು ಎಂದರು.
ಈ ವೇಳೆ ಗ್ರಾಪಂ ಅಧ್ಯಕ್ಷ ವಿಶಾಲಾಕ್ಷಿ ಸೋಮರಡ್ಡಿ, ಉಪಾಧ್ಯಕ್ಷ ಶಿವಪ್ಪ, ಲಾಲ್ ಹುಸೇನ್, ಮೆಥೋಡಿಸ್ಟ್ ಚರ್ಚ್‌ನ ಜಾನ್ ವೆಸ್ಲಿ ಡೇವಿಡ್, ಗ್ರಾಮದ ಮುಖಂಡರಾದ ಅಬ್ದುಲ್ ಕರೀಮ್‌ಖಾನ್, ಅಬ್ದುಲ್ ರಹೀಂ ಇತರರಿದ್ದರು.