Advertisement
ಹಿಂದೊಮ್ಮೆ ನಮ್ಮ ದೇಶದಲ್ಲಿ ಹೂಡಿಕೆ ಮಾಡಲು ಹಿಂಜರಿಯುತ್ತಿದ್ದ, ಬಡ ದೇಶವೆಂದು ಜರೆಯುತ್ತಿದ್ದ ಕಂಪೆನಿಗಳೆಲ್ಲ ಇಂದು ಇಲ್ಲಿ ಘಟಕ ತೆರೆಯಲು, ಹೂಡಿಕೆ ಮಾಡಲು ಹಾತೊರೆಯುತ್ತಿವೆ. ಇದಕ್ಕೆ ಮುಖ್ಯ ಕಾರಣ ದೇಶ ಕಾಣುತ್ತಿರುವ ಸುಸ್ಥಿರ ಅಭಿವೃದ್ಧಿ ಮತ್ತು ಅದಕ್ಕೆ ಪೂರಕವಾದ ಆಡಳಿತ.
Related Articles
ಯಾವುದೇ ದೇಶ ಅಭಿವೃದ್ಧಿಯಾಗಲು ಹಲವು ಅಂಶಗಳು ಕಾರಣವಾಗುತ್ತವೆ. ದೇಶದಲ್ಲಿನ ಕಂಪೆನಿಗಳ ಜತೆಗೆ ವಿದೇಶದಲ್ಲಿನ ಕಂಪೆನಿಗಳು ಇಲ್ಲಿ ಹೂಡಿಕೆ ಮಾಡುವುದೂ ಅಗತ್ಯವಾಗಿದೆ. ಅದು ಕಂಪೆನಿ ತೆರೆಯುವ ಮೂಲಕವಾಗಲಿ ಅಥವಾ ಷೇರು ಮಾರುಕಟ್ಟೆ ಮೂಲಕವಾದರೂ ಆಗಬಹುದು. ಸ್ಥಿರ ಮತ್ತು ಹೂಡಿಕೆದಾರರ ಸ್ನೇಹಿ ಸರಕಾರವಿದ್ದರೆ ಮಾತ್ರ ಇದು ಕಾರ್ಯ ಸಾಧುವಾಗುತ್ತದೆ. ಹೂಡಿಕೆದಾರರಲ್ಲಿ ವಿಶ್ವಾಸ ಮೂಡುವುದು ಅತೀ ಅಗತ್ಯ.
Advertisement
2000ನೇ ಇಸವಿಯಲ್ಲಿ ವಿದೇಶಿ ನೇರ ಹೂಡಿಕೆ (ಎಫ್ಡಿಐ) ನಿಯಮಾವಳಿಗಳಲ್ಲಿ ಬದಲಾವಣೆ ಮಾಡಿದ ಬಳಿಕ ವಿದೇಶಿ ಹೂಡಿಕೆದಾರರು ಭಾರತದತ್ತ ತಿರುಗಿ ನೋಡಲಾರಂಭಿಸಿದರು. ಇದಕ್ಕಿಂತ ಮೊದಲು 1991ರಲ್ಲಿಯೇ ಮನಮೋಹನ್ ಸಿಂಗ್ ಅವರು ತಮ್ಮ ಬಜೆಟ್‌ನಲ್ಲಿ ವಿದೇಶಿ ಹೂಡಿಕೆದಾರರನ್ನು ಆಕರ್ಷಿಸಲು ಯೋಜನೆ ಪ್ರಕಟಿಸಿದ್ದರೂ ಅದು ನಿರೀಕ್ಷಿತ ಫಲ ನೀಡಿರಲಿಲ್ಲ. ಆದರೆ ಬಳಿಕ ವಾಜಪೇಯಿ ಸರಕಾರದ ಅವಧಿಯಿಂದ ಆರಂಭಗೊಂಡು ಇದು ವೇಗ ಪಡೆಯಿತು. ಅವರ 6 ವರ್ಷಗಳ ಆಡಳಿತಾವಧಿಯಲ್ಲಿ 18 ಬಿಲಿಯನ್ ಡಾಲರ್ ಮೊತ್ತ ಭಾರತದಲ್ಲಿ ಹೂಡಿಕೆಯಾಗಿದ್ದರೆ, ಅನಂತರ ಮನಮೋಹನ್ ಸಿಂಗ್ ಅವರ ಪ್ರಧಾನಿ ಅವಧಿಯಲ್ಲಿ 10 ವರ್ಷಗಳಲ್ಲಿ 305 ಬಿಲಿಯನ್ ಡಾಲರ್ ಹೂಡಿಕೆಯಾಗಿತ್ತು. ಇದಕ್ಕೆ ಬೂಸ್ಟ್ ಸಿಕ್ಕಿದ್ದು ನರೇಂದ್ರ ಮೋದಿ ಅವರ ಅವಧಿಯಲ್ಲಿ. ಕೇವಲ 9 ವರ್ಷಗಳ ಅವಧಿಯಲ್ಲಿ 615 ಬಿಲಿಯನ್ ಡಾಲರ್ ಹೂಡಿಕೆಯಾಗಿದೆ. ಈ ಅವಧಿಯಲ್ಲಿ ಆಹಾರ ಸಂಸ್ಮರಣ ಕ್ಷೇತ್ರದಲ್ಲಿಯೇ 50,000 ಕೋಟಿ ರೂ. ಹೂಡಿಕೆಯಾಗಿದೆ.
ಬದಲಾದ ಕಾಲದೇಶದಲ್ಲಿ ಜನಸಂಖ್ಯೆ ಇದ್ದರೂ ನಿರುದ್ಯೋಗ ಎಂಬುದು ದೊಡ್ಡ ಹಿನ್ನಡೆ ಆಗಿತ್ತು. ಶಕ್ತಿ ಇರುವ ಕೈಗಳಿಗೆ ದುಡಿಯಲು ಕೆಲಸ ಇರಲಿಲ್ಲ. ಆದರೆ ಈಗ ಕಾಲ ಬದಲಾಗಿದೆ. ಸರಕಾರದ ಆದ್ಯತೆಯೂ ಬದಲಾಗಿದೆ. ದುಡಿಯುವ ಕೈಗಳಿಗೆ ಕೆಲಸ ಕೊಟ್ಟರಷ್ಟೇ ದೇಶವೂ, ಪಕ್ಷವೂ ಅಭಿವೃದ್ಧಿ ಕಾಣಲು ಸಾಧ್ಯ ಎಂಬುದನ್ನು ಚೆನ್ನಾಗಿ ತಿಳಿದುಕೊಂಡಿದ್ದಾರೆ. ಹಿಂದೆ ಹೂಡಿಕೆದಾರರನ್ನು ನಿರ್ಲಕ್ಷಿಸುತ್ತಿದ್ದ ರಾಜ್ಯಗಳೆಲ್ಲ ಇತ್ತೀಚೆಗಿನ ವರ್ಷಗಳಲ್ಲಿ ರತ್ನಗಂಬಳಿ ಸ್ವಾಗತ ನೀಡಲು ಪೈಪೋಟಿ ನಡೆಸುತ್ತಿವೆ. ಇದರಿಂದ ಒಟ್ಟಾರೆಯಾಗಿ ದೇಶಕ್ಕೆ ಬರುವ ಕಂಪೆನಿಗಳ ಸಂಖ್ಯೆ ಹೆಚ್ಚಾಗಿದೆ. ಈ ಮೂಲಕ ತಮ್ಮ ತಮ್ಮ ಪ್ರದೇಶದ ಯುವಕರಿಗೆ ಕೆಲಸ ಕೊಡುವ ಪ್ರಯತ್ನ ನಡೆಸುತ್ತಿವೆ. ಮೇಕ್ ಇನ್ ಇಂಡಿಯಾ
ಅತೀ ಹೆಚ್ಚು ಹೂಡಿಕೆದಾರರು ಬರಲು ಕಾರಣವಾಗಿದ್ದು ಮೇಕ್ ಇನ್ ಇಂಡಿಯಾ ಎಂಬ ಯೋಜನೆ. ನೂರಾರು ವಸ್ತುಗಳಿಗಾಗಿ ವಿದೇಶಗಳನ್ನು ಅವಲಂಬಿಸಿಕೊಂಡಿದ್ದ ಭಾರತ ಇಂದು ಅಂತಹ ವಸ್ತುಗಳನ್ನು ರಫ್ತು ಮಾಡುವ ಸ್ಥಿತಿಗೆ ತಲುಪಿದೆ. ಜೀವನಾವಶ್ಯಕ ವಸ್ತುಗಳಿಂದ ಜೀವ ರಕ್ಷಕ, ದೇಶ ರಕ್ಷಕ ವಸ್ತುಗಳವರೆಗೆ ಎಲ್ಲವನ್ನೂ ಭಾರತದಲ್ಲಿಯೇ ತಯಾರಿಸುವಂತೆ ಕಂಪೆನಿಗಳಿಗೆ ವ್ಯವಸ್ಥೆ ಕಲ್ಪಿಸಿಕೊಟ್ಟು, ಆ ಕಂಪೆನಿಗಳು ಭಾರತದಲ್ಲಿ ಉತ್ಪಾದನೆ ಆರಂಭಿಸುವಂತೆ ಮಾಡುವುದೇ ಈ ಯೋಜನೆಯ ಮುಖ್ಯ ಉದ್ದೇಶ. ಈ ಯೋಜನೆ ಜಾರಿಗೊಳಿಸಿದ ಬಳಿಕ ಭಾರತಕ್ಕೆ ನೂರಾರು ಕಂಪೆನಿಗಳು ಬಂದಿವೆ. ಭಾರತದತ್ತ ಮುಖ ತಿರುಗಿ ನೋಡದೆ ಚೀನದತ್ತ ಹಾರಿದ್ದ ಐಫೋನ್ ಕಂಪೆನಿಯಂಥ ಹಲವಾರು ಬೃಹತ್ ಕಂಪೆನಿಗಳು ಭಾರತದಲ್ಲಿ ಇಂದು ಕೋಟ್ಯಂ ತರ ರೂಪಾಯಿ ಹೂಡಿಕೆ ಮಾಡಿವೆ. ಇಂದು ಈ ಕಂಪೆನಿಗಳು ಇಲ್ಲಿಂದಲೇ ಬೇರೆ ದೇಶಗಳಿಗೆ ತಮ್ಮ ಉತ್ಪನ್ನಗಳನ್ನು ರಫ್ತು ಮಾಡುತ್ತಿವೆ. ಷೇರುಪೇಟೆ ದಾಖಲೆ
ಯಾವುದೇ ದೇಶದ ಆರ್ಥಿಕ ಸ್ಥಿತಿಗತಿಗೆ ದಿಕ್ಸೂಚಿ ಯಾಗಿರುವುದು ಆಯಾ ದೇಶದ ಷೇರುಪೇಟೆ. ಇಡೀ ಆರ್ಥಿಕ ಸ್ಥಿತಿ ಇಲ್ಲಿ ಪ್ರತಿಬಿಂಬಿತವಾಗುತ್ತದೆ. ದೇಶದ ಪ್ರತಿಯೊಂದು ಆಗು ಹೋಗುಗಳೂ ಇಲ್ಲಿನ ವ್ಯವಹಾರದ ಮೇಲೆ ಪ್ರಭಾವ ಬೀರುತ್ತದೆ. ಅಂತಹ ಷೇರು ಮಾರುಕಟ್ಟೆ ಭಾರತದಲ್ಲಿ ಜಿಂಕೆಯ ವೇಗದಲ್ಲಿ ಸಾಗುತ್ತಿದೆ. ಇಲ್ಲಿನ ಕಂಪೆನಿಗಳು ಉತ್ತಮ ವ್ಯವಹಾರ ದೊಂದಿಗೆ ಲಾಭಗಳಿಸುತ್ತಿರುವುದು, ಮಾರುಕಟ್ಟೆ ವಿಸ್ತರಿಸಿಕೊಳ್ಳುತ್ತಿರುವುದರಿಂದ ಲಾಭಾಂಶ ಏರು ತ್ತಿರುವುದರಿಂದ ಇಲ್ಲಿಗೆ ಭಾರೀ ಮೊತ್ತದ ವಿದೇಶಿ ಹೂಡಿಕೆ ಹರಿದು ಬರುತ್ತಿದೆ. ಪರಿಣಾಮವಾಗಿ “ಗೂಳಿ’ ಓಡುತ್ತಲೇ ಇದೆ. ಹಲವು ರೀತಿಯ ಜಾಗತಿಕ ಅಡೆ ತಡೆಗಳು ಎದುರಾದಗಲೂ “ಗೂಳಿ’ ಹೆಚ್ಚೇನೂ ವಿಚಲಿತವಾಗಲಿಲ್ಲ. ಅಂದರೆ ದೇಶದ ಆರ್ಥಿಕತೆ ದೃಢವಾಗಿರುವುದೇ ಇದಕ್ಕೆ ಕಾರಣ. 2019ರ ಜೂನ್‌ನಲ್ಲಿ 40,000 ಅಂಕಗಳಲ್ಲಿದ್ದ ಸೆನ್ಸೆಕ್ಸ್ ಈಗಾಗಲೇ 71,000 ಗಡಿ ದಾಟಿದೆ. ಅಂದರೆ ನಾಲ್ಕೂವರೆ ವರ್ಷಗಳ ಅವಧಿಯಲ್ಲಿ 31,000 ಅಂಕಗಳ ಏರಿಕೆ ಕಂಡಿದೆ. 2023ರಲ್ಲಿ ಇದುವರೆಗೆ 1.5 ಲಕ್ಷ ಕೋಟಿ ರೂ. ವಿದೇಶಿ ಬಂಡವಾಳ ಷೇರು ಮಾರುಕಟ್ಟೆಯಲ್ಲಿ ಹೂಡಿಕೆಯಾಗಿದೆ. ಇದರಲ್ಲೂ ಇತ್ತೀಚೆಗೆ ನಡೆದ ಪಂಚರಾಜ್ಯ ಚುನಾವಣೆಗಳ ಬಳಿಕ ಎರಡು ವಾರಗಳಲ್ಲಿ 43,000 ಕೋಟಿ ರೂ. ಹೂಡಿಕೆಯಾಗಿದೆ. ಇವೆಲ್ಲವೂ ಸಹಜವಾಗಿಯೇ ಹೂಡಿಕೆದಾರರನ್ನು ಸೂಜಿಗಲ್ಲಿನಂತೆ ಭಾರತದತ್ತ ಆಕರ್ಷಿಸುತ್ತಿದೆ. – ಕೆ. ರಾಜೇಶ್ ಮೂಲ್ಕಿ