Advertisement

Top court: ಬುಲ್ಡೋಜರ್‌ ಕಾರ್ಯಾಚರಣೆ-ದೇವಸ್ಥಾನ, ಮಸೀದಿ ಬಗ್ಗೆ ಸುಪ್ರೀಂ ಹೇಳಿದ್ದೇನು?

12:51 PM Oct 01, 2024 | Team Udayavani |

ನವದೆಹಲಿ: ಸಾರ್ವಜನಿಕ ಸುರಕ್ಷತೆ ಸರ್ವೋತ್ಕೃಷ್ಟವಾದದ್ದು, ಈ ನಿಟ್ಟಿನಲ್ಲಿ ರಸ್ತೆ, ಜಲಮೂಲ ಅಥವಾ ರೈಲ್ವೆ ಹಳಿಗಳನ್ನು ಅತಿಕ್ರಮಿಸುವ ಯಾವುದೇ ಧರ್ಮದ ದೇವಸ್ಥಾನ, ದರ್ಗಾಗಳಿರಲಿ ಅವೆಲ್ಲವನ್ನೂ ತೆರವುಗೊಳಿಸಬೇಕು ಎಂದು ಸುಪ್ರೀಂಕೋರ್ಟ್‌ (Supreme court) ಮಂಗಳವಾರ (ಅ.01) ಮಹತ್ವದ ಆದೇಶ ನೀಡಿದೆ.

Advertisement

“ಭಾರತ ಜಾತ್ಯತೀತ ದೇಶವಾಗಿದೆ. ಬುಲ್ಡೋಜರ್‌ ಕಾರ್ಯಾಚರಣೆ ಮತ್ತು ಅತಿಕ್ರಮಣ ವಿರೋಧಿ ತೆರವು ಕಾರ್ಯ ಯಾವುದೇ ಧರ್ಮವನ್ನು ಲೆಕ್ಕಿಸದೇ ಎಲ್ಲಾ ನಾಗರಿಕರಿಗೆ ಸಂಬಂಧಿಸಿದೆ” ಎಂದು ಸುಪ್ರೀಂಕೋರ್ಟ್‌ ಒತ್ತಿ ಹೇಳಿದೆ.

ಅಪರಾಧ ಕೃತ್ಯ ಎಸಗಿದ ಆರೋಪಿಗಳ ಮನೆಯ ಮೇಲಿನ ಬುಲ್ಡೋಜರ್‌ ಕಾರ್ಯಾಚರಣೆ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನಡೆಸಿದ ಸುಪ್ರೀಂ ಪೀಠದ ಜಸ್ಟೀಸ್‌ ಬಿಆರ್‌ ಗವಾಯಿ ಮತ್ತು ಜಸ್ಟೀಸ್‌ ಕೆವಿ ವಿಶ್ವನಾಥನ್‌, ಬುಲ್ಡೋಜರ್‌ ಕಾರ್ಯಾಚರಣೆಯ ಟ್ರೆಂಡ್‌ ಹಲವು ರಾಜ್ಯಗಳಲ್ಲಿ ಮುಂದುವರಿದಿದೆ. ಇದನ್ನು ಬುಲ್ಡೋಜರ್‌ ನ್ಯಾಯ ಎಂದೇ ಕರೆಯುತ್ತಿದ್ದಾರೆ. ಈ ಹಿಂದೆ ಅಧಿಕಾರಿಗಳು ಕಾನೂನು ಬಾಹಿರ ಕಟ್ಟಡಗಳ ತೆರವಿಗೆ ಮಾತ್ರ ಕಾರ್ಯಾಚರಣೆ ನಡೆಸುತ್ತಿದ್ದರು.

ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ಅವರು, ಉತ್ತರ ಪ್ರದೇಶ, ಗುಜರಾತ್‌ ಮತ್ತು ಮಧ್ಯಪ್ರದೇಶ ರಾಜ್ಯಗಳ ಪರವಾಗಿ ವಾದಿಸಲು ಹಾಜರಾಗಿದ್ದರು. ಒಂದು ವೇಳೆ ಆರೋಪಿ ಕ್ರಿಮಿನಲ್‌ ಕೇಸ್‌ ಎದುರಿಸುತ್ತಿದ್ದರೆ ಅವರು ಬುಲ್ಡೋಜರ್‌ ಕಾರ್ಯಾಚರಣೆ ಎದುರಿಸಲು ಕಾರಣವಾಗಬಹುದೇ ಎಂದು ಪೀಠ ಪ್ರಶ್ನಿಸಿತ್ತು.

Advertisement

“ಅದಕ್ಕೆ ಮೆಹ್ತಾ ಅವರು, ಖಂಡಿತವಾಗಿಯೂ ಇಲ್ಲ, ಅವರು ಅತ್ಯಾಚಾರ ಅಥವಾ ಭಯೋತ್ಪಾದನೆಯಂತಹ ಕೃತ್ಯ ಎಸಗಿದ್ದರೂ ಕೂಡಾ ಅಂತಹ ಕಾರ್ಯಾಚರಣೆ ಸಮರ್ಪಕವಲ್ಲ. ಮೈ ಲಾರ್ಡ್‌, ಅದೇ ರೀತಿ ಕಾರ್ಯಾಚರಣೆ ನಡೆಸುವ ಬಗ್ಗೆ ಒಂದು ದಿನದ ಮೊದಲು ನೋಟಿಸ್‌ ಅಂಟಿಸಬಾರದು, ಇದು ಬಹುತೇಕ ನಗರಪಾಲಿಕೆಯ ಕಾನೂನು ಅನ್ವಯ ಕಾರ್ಯಾಚರಣೆ ನಡೆದಿದೆ. ಇಂತಹ ಕಾರ್ಯಾಚರಣೆ ಬಗ್ಗೆ ರಿಜಿಸ್ಟರ್ಡ್‌ ಅಂಚೆ ಮೂಲಕ ನೋಟಿಸ್‌ ನೀಡಿರುವ ಬಗ್ಗೆ ಪೀಠ ಗಮನಿಸಬೇಕು ಎಂದು ಹೇಳಿದರು.

ಯಾವುದೇ ಅನಧಿಕೃತ ಕಟ್ಟಡವಿರಲಿ, ಅವೆಲ್ಲದಕ್ಕೂ ಒಂದೇ ಕಾನೂನು ಅನ್ವಯ, ಇದು ಧರ್ಮ ಅಥವಾ ನಂಬಿಕೆಗೆ ಸಂಬಂಧಿಸಿದ್ದಲ್ಲ ಎಂದು ಜಸ್ಟೀಸ್‌ ಗವಾಯಿ ಪ್ರತ್ಯುತ್ತರ ನೀಡಿದರು.

ಆಸ್ತಿ ಧ್ವಂಸಗೊಳಿಸಲು ಅಪರಾಧ ಕೃತ್ಯ ಎಸಗಿರುವುದೇ ಮಾನದಂಡವಾಗಬಾರದು, ನಾಗರಿಕ ಕಾಯ್ದೆಯನ್ನು ಉಲ್ಲಂಘಿಸಿದ ಪ್ರಕರಣಗಳಲ್ಲಿ ಮಾತ್ರ ಬುಲ್ಡೋಜರ್‌ ಕಾರ್ಯಾಚರಣೆ ನಡೆಸಬೇಕು ಎಂದು ಸುಪ್ರೀಂಕೋರ್ಟ್‌ ಸ್ಪಷ್ಟಪಡಿಸಿ ಆದೇಶ ನೀಡಿದೆ.

Advertisement

Udayavani is now on Telegram. Click here to join our channel and stay updated with the latest news.

Next