ನವದೆಹಲಿ: ಭಾರತ ಕೋವಿಡ್ -19 ವೈರಸ್ ನ ನೂತನ ಹಾಟ್ ಸ್ಪಾಟ್ ? ಹೌದು ಎನ್ನುತ್ತಿವೆ ಅಂಕಿ ಅಂಶಗಳು. ಸಕ್ರೀಯ ಸೋಂಕಿತ ಪ್ರಕರಣಗಳ ಸಂಖ್ಯೆಯಲ್ಲಿ ಇಟಲಿ, ಸ್ಪೇನ್ ಅನ್ನು ಮೀರಿಸಿ ಭಾರತ ಟಾಪ್ -5ರ ಸ್ಥಾನಕ್ಕೇರಿದೆ.
ಈಗಾಗಲೇ ಅಮೆರಿಕಾ, ರಷ್ಯಾ, ಬ್ರೆಜಿಲ್ ಮುಂತಾದ ರಾಷ್ಟ್ರಗಳಲ್ಲಿ ಕೋವಿಡ್ 19 ಮಹಾಮಾರಿ ಅಬ್ಬರಿಸಿಸುತ್ತಿದ್ದು, ಹಲವಾರು ಪ್ರಾಣಗಳು ಬಲಿಯಾಗಿವೆ. ಭಾರತದಲ್ಲೂ ಹೊಸ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಏರುತ್ತಿದ್ದು, ಆತಂಕ ಮನೆಮಾಡಿದೆ.
ಮೇ 1ರ ನಂತರ ಭಾರತದಲ್ಲಿ ಪ್ರತಿದಿನ 2,400 ಹೊಸ ಪ್ರಕರಣಗಳು ದಾಖಲಾಗುತ್ತಿದ್ದವು. ಇದು ಮೇ 7 ರ ವೇಳೆಗೆ 3,000ಕ್ಕೆ ಏರಿಕೆಯಾಗಿದ್ದು ಕಳೆದ ಒಂದು ವಾರದಿಂದ 5 ಸಾವಿರದಿಂದ 6,000 ಸೋಂಕಿತರು ಪ್ರತಿದಿನ ಕಂಡುಬರುತ್ತಿದ್ದಾರೆ.
ಮತ್ತೊಂದೆಡೆ ಮೇ ತಿಂಗಳಲ್ಲಿ ಅತೀ ಹೆಚ್ಚು ಜನರನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಲಾಗಿದ್ದು, ಈ ಮೊದಲು 5 ದಿನಗಳಲ್ಲಿ ಒಂದು ಲಕ್ಷ ಜನರನ್ನು ಪರೀಕ್ಷಿಸಲಾಗುತ್ತಿತ್ತು ಮೇ 21ರ ವೇಳೆಗೆ 20 ಲಕ್ಷ ಮಂದಿಯನ್ನು ಪರೀಕ್ಷೆಗೆ ಒಳಪಡಿಸಲಾಗಿದೆ.
ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 6 ಸಾವಿರ ಹೊಸ ಪ್ರಕರಣಗಳು ಕಂಡುಬಂದಿದ್ದು, ಕೋವಿಡ್ 19 ಕಾಣಿಸಿಕೊಂಡಾಗಿನಿಂದ ದಾಖಲಾದ ಅತೀ ದೊಡ್ಡ ಮೊತ್ತವಾಗಿದೆ. ಒಟ್ಟಾರೆ ಸೋಂಕಿತರ ಪ್ರಮಾಣ 1.18 ಲಕ್ಷಕ್ಕೆ ಜಿಗಿದಿದ್ದು, ಮೃತರಾದವರ ಸಂಖ್ಯೆ 3,726ಕ್ಕೆ ಏರಿಕೆಯಾಗಿದೆ.