Advertisement

ಐತಿಹಾಸಿಕ ನಿರ್ಣಯಕ್ಕೆ ಸಾಕ್ಷಿಯಾದ COP28- ಪ್ಯಾರಿಸ್‌ ಒಪ್ಪಂದ ಅನುಷ್ಠಾನಕ್ಕೆ ಭಾರತ ಒತ್ತಾಯ

11:13 PM Dec 13, 2023 | Team Udayavani |

ದುಬೈ: ಯುನೈಟೆಡ್‌ ಅರಬ್‌ ಎಮಿರೇಟ್ಸ್‌(ಯುಎಇ)ನ ದುಬೈನಲ್ಲಿ ಬುಧವಾರ ಸಂಪನ್ನಗೊಂಡ ವಿಶ್ವಸಂಸ್ಥೆಯ ಹವಾಮಾನ ಶೃಂಗ ಸಿಒಪಿ28(ಯುಎನ್‌ಎಫ್ಸಿಸಿಸಿ ಸದಸ್ಯರ 28ನೇ ಸಮ್ಮೇಳನ) “ಪಳೆಯುಳಿಕೆ ಇಂಧನ ಬಳಕೆಯಿಂದ ಹೊರಬನ್ನಿ’ ಎಂಬ ಐತಿಹಾಸಿಕ ನಿರ್ಣಯಕ್ಕೆ ಸಾಕ್ಷಿಯಾಯಿತು.

Advertisement

ಶೃಂಗದ ಅಂತಿಮ ದಿನವಾದ ಬುಧವಾರ ಸಿಒಪಿ28 ಅಧ್ಯಕ್ಷ ಸುಲ್ತಾನ್‌ ಅಲ್‌-ಜಬರ್‌ ಮಂಡಿಸಿದ ನಿರ್ಣಯಕ್ಕೆ ನೆರೆದಿದ್ದ ರಾಷ್ಟ್ರಗಳ ಪ್ರತಿನಿಧಿಗಳು ಚಪ್ಪಾಳೆ ಮೂಲಕ ಸ್ವಾಗತಿಸಿದರು.

ಪ್ಯಾರಿಸ್‌ ಒಪ್ಪಂದ ಹಾಗೂ ಅವುಗಳ ವಿಭಿನ್ನತೆಯನ್ನು ಗಣನೆಗೆ ತೆಗೆದುಕೊಂಡು ಭುಮಿಯ ತಾಪಮಾನ, ಹಸಿರುಮನೆ ಅನಿಲ ಹೊರಸೂಸುವಿಕೆಯನ್ನು ಕ್ಷಿಪ್ರ ಮತ್ತು ನಿರಂತರವಾಗಿ ತಗ್ಗಿಸಲು ಈ ನಿರ್ಣಯ ತೆಗೆದುಕೊಳ್ಳಲಾಗಿದೆ ಎಂದು ಪ್ರಕಟಣೆ ತಿಳಿಸಿದೆ. ಕಲ್ಲಿದ್ದಲನ್ನು ಅತಿ ಹೆಚ್ಚಾಗಿ ಬಳಸುವ ಭಾರತ ಮತ್ತು ಚೀನಾ ಕೂಡ ಈ ನಿರ್ಣಯಕ್ಕೆ ಬೆಂಬಲ ಸೂಚಿಸಿವೆ.

ಪ್ಯಾರಿಸ್‌ ಒಪ್ಪಂದ ಅನುಷ್ಠಾನಗೊಳಿಸಿ:

ನೀತಿ ಮತ್ತು ಹವಾಮಾನ ನ್ಯಾಯದ ಮೇಲೆ ಕೇಂದ್ರೀಕರಿಸುವ ಪ್ಯಾರಿಸ್‌ ಒಪ್ಪಂದವನ್ನು ಅನುಷ್ಠಾನಕ್ಕೆ ತರಬೇಕೆಂದು ಇದೇ ವೇಳೆ ಭಾರತ ಆಗ್ರಹಿಸಿತು. “ಈ ಶೃಂಗದಲ್ಲಿನ ಸಾಮೂಹಿಕ ಪ್ರಯತ್ನಗಳು ಪ್ಯಾರಿಸ್‌ ಒಪ್ಪಂದದ ಸಂದರ್ಭದಲ್ಲಿ ನಿಗದಿಪಡಿಸಲಾದ ತಾಪಾಮಾನದ ಗುರಿಗಳನ್ನು ಅನುಷ್ಠಾನಗೊಳಿಸುವ ಬದ್ಧತೆಯನ್ನು ಬಲಪಡಿಸುವಲ್ಲಿ ಸಕಾರಾತ್ಮಕ ಪ್ರತಿಕ್ರಿಯೆಗಳು ದೊರೆತಿವೆ’ ಎಂದು ಕೇಂದ್ರ ಪರಿಸರ ಸಚಿವ ಭೂಪೇಂದ್ರ ಯಾದವ್‌ ಹೇಳಿದ್ದಾರೆ.

Advertisement

ಮುಂದಿನ ಪೀಳಿಗೆಯನ್ನು ರಕ್ಷಿಸಲು ಒಗ್ಗಟ್ಟು ಪ್ರದರ್ಶಿಸಿ:
“ಮುಂದಿನ ಪೀಳಿಗೆಯ ಮಕ್ಕಳನ್ನು ರಕ್ಷಿಸಲು ವಿಶ್ವ ನಾಯಕರು ಒಗ್ಗಟ್ಟು ಪ್ರದರ್ಶಿಸಬೇಕು. ಪಳೆಯುಳಿಕೆ ಇಂಧನವನ್ನು ಹಂತ-ಹಂತವಾಗಿ ಹೊರಹಾಕಲು ಒಪ್ಪದ ರಾಷ್ಟ್ರಗಳ ನಾಯಕರು ವಿಶ್ವದ ಮಕ್ಕಳಿಗೆ ಅನ್ಯಾಯ ಎಸಗುತ್ತಿದ್ದಾರೆ. ಇದರಿಂದ ಸುರಕ್ಷಿತ ಪರಿಸರದಲ್ಲಿ ವಾಸಿಸಲು ಹಾಗೂ ಅಭಿವೃದ್ಧಿ ಹೊಂದುವ ಮೂಲಭೂತ ಹಕ್ಕುಗಳನ್ನು ಕಸಿದಂತಾಗುತ್ತದೆ’ ಎಂದು ಶೃಂಗದಲ್ಲಿ ಭಾಗವಹಿಸಿದ್ದ 8 ವರ್ಷದ ಭಾರತದ ಬಾಲಕ ಮೋಕ್ಷಾ ರಾಯ್‌ ಪ್ರತಿಪಾದಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next