ಟೆಹ್ರಾನ್: ಇರಾನ್ ಮತ್ತು ಇಸ್ರೇಲ್ ನಡುವಿನ ಉದ್ವಿಗ್ನತೆಯ ನಡುವೆ ಇರಾನ್ ಮಿಲಿಟರಿ ವಶಪಡಿಸಿಕೊಂಡ ಇಸ್ರೇಲಿ ಕಂಟೈನರ್ ಹಡಗಿನಲ್ಲಿ ಹದಿನೇಳು ಭಾರತೀಯರು ಇದ್ದಾರೆ.
ಭಾರತೀಯರ ಶೀಘ್ರ ಬಿಡುಗಡೆಯನ್ನು ಖಚಿತಪಡಿಸಿಕೊಳ್ಳಲು ಟೆಹ್ರಾನ್ ಮತ್ತು ದೆಹಲಿಯಲ್ಲಿ ರಾಜತಾಂತ್ರಿಕ ಮಾರ್ಗಗಳ ಮೂಲಕ ಭಾರತವು ಇರಾನ್ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
12 ದಿನಗಳ ಹಿಂದೆ ಸಿರಿಯಾದಲ್ಲಿರುವ ಇರಾನ್ ಕಾನ್ಸುಲೇಟ್‌ನ ಮೇಲೆ ದಾಳಿಗೆ ಪ್ರತೀಕಾರವಾಗಿ ಇರಾನ್ ಇಸ್ರೇಲ್ ನೆಲದ ಮೇಲೆ ದಾಳಿ ನಡೆಸಬಹುದು ಎಂಬ ಆತಂಕದ ನಡುವೆ ಇರಾನ್ ಈ ಕ್ರಮ ಕೈಗೊಂಡಿದೆ.
“ಎಂಎಸ್‌ಸಿ ಏರೀಸ್ ಎಂಬ ಸರಕು ಸಾಗಣೆ ಹಡಗನ್ನು ಇರಾನ್ ನಿಯಂತ್ರಣಕ್ಕೆ ತೆಗೆದುಕೊಂಡಿದ್ದು, ನೌಕೆಯಲ್ಲಿ 17 ಭಾರತೀಯ ಪ್ರಜೆಗಳಿದ್ದಾರೆ ಎಂದು ನಾವು ತಿಳಿದುಕೊಂಡಿದ್ದೇವೆ” ಎಂದು ಮೂಲವೊಂದು ತಿಳಿಸಿದೆ.
ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್‌ಗಳು ಶನಿವಾರ ಬೆಳಗ್ಗೆ ಹಾರ್ಮುಜ್ ಜಲಸಂಧಿಯ ಮೂಲಕ ನೌಕಾಯಾನ ಮಾಡುತ್ತಿದ್ದಾಗ ಹಡಗನ್ನು ವಶಪಡಿಸಿಕೊಂಡರು ಎಂದು ವರದಿಗಳು ತಿಳಿಸಿವೆ.