ಹೊಸದಿಲ್ಲಿ: ಉಕ್ರೇನ್ ವಿಚಾರವಾಗಿ ರಷ್ಯಾ ವಿರುದ್ಧ ಐರೋಪ್ಯ ರಾಷ್ಟ್ರಗಳ ನಿರ್ಬಂಧದ ನಡುವೆಯೇ ಭಾರತ ಹಾಗೂ ರಷ್ಯಾ ನಡುವಿನ ತೈಲ ವ್ಯಾಪಾರ ಉತ್ತಮಗೊಂಡಿದ್ದು, 2022ರ ಡಿಸೆಂಬರ್‌ನಲ್ಲಿ ಭಾರತವು ರಷ್ಯಾದಿಂದ ಆಮದು ಮಾಡಿಕೊಂಡಿರುವ ಕಚ್ಚಾ ತೈಲದ ಪ್ರಮಾಣ ಹೆಚ್ಚಳವಾಗಿದೆ. ದಿನವೊಂದಕ್ಕೆ ಭಾರತ ರಷ್ಯಾದಿಂದ 10 ಲಕ್ಷ ಬ್ಯಾರಲ್ ಕಚ್ಚಾ ತೈಲ ಆಮದು ಮಾಡಿಕೊಳ್ಳುತ್ತಿದೆ.
ಎನರ್ಜಿ ಕಾರ್ಗೋ ಟ್ರ್ಯಾಕರ್ ವೋರ್ಟೆಕ್ಸಾ ವರದಿಗಳ ಪ್ರಕಾರ 2022ರ ಮಾರ್ಚ್ 31ರ ವರೆಗೆ ಒಂದು ವರ್ಷದ ಅವಧಿಯಲ್ಲಿ ಭಾರತ ಆಮದು ಮಾಡಿಕೊಂಡಿದ್ದ ಒಟ್ಟು ಕಚ್ಚಾ ತೈಲದ ಪ್ರಮಾಣದಲ್ಲಿ ರಷ್ಯಾದ ಪಾಲು ಶೇ. 0.2ರಷ್ಟು ಮಾತ್ರ ಆಗಿತ್ತು. ಆದರೆ ಅಕ್ಟೋಬರ್ ಬಳಿಕ ಭಾರತ ಆಮದು ಮಾಡಿಕೊಳ್ಳುತ್ತಿರುವ ಒಟ್ಟು ಕಚ್ಚಾ ತೈಲದಲ್ಲಿ ರಷ್ಯಾದ ಪಾಲು ಶೇ. 25ಕ್ಕೆ ಏರಿದೆ. ಜೂನ್ 2022ರಲ್ಲಿ ಪ್ರತೀ ದಿನ 9.42 ಲಕ್ಷ ಬ್ಯಾರಲ್ ಆಮದು ಮಾಡಿಕೊಳ್ಳುತ್ತಿದ್ದ ಭಾರತ ಈಗ ದಿನಕ್ಕೆ 10 ಲಕ್ಷ ಬ್ಯಾರೆಲ್ ಕಚ್ಚಾ ತೈಲ ಆಮದು ಮಾಡಿಕೊಳ್ಳುತ್ತಿದೆ.