Advertisement

ಭಾರತ ಭವಿಷ್ಯದ ಉತ್ಪಾದನಾ ಹಬ್: ಸಚಿವ ಶಿವರಾಂ ಹೆಬ್ಬಾರ್

07:15 PM Nov 04, 2022 | Team Udayavani |

ಬೆಂಗಳೂರು: ಪ್ರಸ್ತುತ ಜಾಗತಿಕ ರಾಜಕೀಯ ಸನ್ನಿವೇಶದಲ್ಲಿ ವಿಶ್ವವೇ ಭಾರತದತ್ತ ತಿರುಗಿ ನೋಡುತ್ತಿದೆ. ಭವಿಷ್ಯದಲ್ಲಿ ಜಾಗತಿಕ ಉತ್ಪಾದನಾ ಹಬ್ ಆಗುವ ಸರ್ವ ಸಾಮರ್ಥ್ಯವೂ ಭಾರತಕ್ಕಿದೆ, ಇದನ್ನು ಸಾಕಾರಗೊಳಿಸಲು ದೇಶಕ್ಕೆ ಸಾಥ್ ನೀಡಲು ಕರ್ನಾಟಕ ರಾಜ್ಯ ಸಜ್ಜಾಗಿದೆ ಎಂದು ಕಾರ್ಮಿಕ ಸಚಿವ ಶಿವರಾಂ ಹೆಬ್ಬಾರ್ ಪ್ರತಿಪಾದಿಸಿದರು.

Advertisement

ನಗರದಲ್ಲಿ ನಡೆಯುತ್ತಿರುವ ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, 2016ರಿಂದಲೂ ರಾಜ್ಯವೂ ಹೂಡಿಕೆದಾರರ ನೆಚ್ಚಿನ ತಾಣವಾಗಿದೆ, ನವೀಕರಿಸಬಹುದಾದದ ಇಂಧನ ಕ್ಷೇತ್ರದಲ್ಲಿ ಕರ್ನಾಟಕ ಮುಂಚೂಣಿಯಲ್ಲಿದೆ, ರಾಜ್ಯದಲ್ಲಿ ಶೇ.63%ರಷ್ಟು ನವೀಕರಿಸಬಹುದಾದ ಇಂಧನ ಸಾಮರ್ಥ್ಯವನ್ನು ಹೊಂದಿದೆ. ಮೊದಲ ಎಲೆಕ್ಟ್ರಿಕ್ ವಾಹನ ಸೇರಿದಂತೆ ವಿದ್ಯುತ್ ವಾಹನ ಕ್ಷೇತ್ರದಲ್ಲೂ ಹಲವು ಪ್ರಥಮಗಳಿಗೆ ರಾಜ್ಯ ಸಾಕ್ಷಿಯಾಗಿದೆ ಎಂದರು.

ಬಯೋಟೆಕ್ ಉತ್ಪನ್ನ ಮತ್ತು ರಫ್ತಿನಲ್ಲಿ ಮೊದಲು, ದೇಶದ ಎಲೆಕ್ಟ್ರಾನಿಕ್, ಸಂಶೋಧನೆ ಮತ್ತು ಉತ್ಪಾದನೆಯಲ್ಲಿ ಪ್ರಥಮ, ಹೀಗಾಗಿ ರಾಜ್ಯವೂ ತನ್ನ ಯೋಜನೆಗಳ ಮೂಲಕ ಈ ಕ್ಷೇತ್ರಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡಲಾಗುತ್ತಿದೆ ಎಂದು ಜಾಗತಿಕ ಹೂಡಿಕೆದಾರರಿಗೆ ಮಾಹಿತಿ ನೀಡಿದ ಸಚಿವ ಶಿವರಾಂ ಹೆಬ್ಬಾರ್, ಕೈಗಾರಿಕೆ ಮತ್ತು ಅಂತರಾಷ್ಟ್ರೀಯ ವಹಿವಾಟಿನಲ್ಲಿ ‘ಉತ್ತಮ ಸಾಧನೆ” ಹಿರಿಮೆ ಜತೆಗೆ “ಸುಲಭ ವ್ಯಾಪಾರ ಅವಕಾಶ”ಗಳಲ್ಲಿ (ಈಸ್ ಆಫ್ ಡೂಯಿಂಗ್ ಬ್ಯುಸಿನೆಸ್) ಉತ್ತಮ ಶ್ರೇಯಾಂಕ ಪಡೆದುಕೊಂಡಿದೆ ಎಂದು ವಿವರಿಸಿದರು.

ಸ್ಟಾರ್ಟ್ ಅಪ್ ಗಳ ಸಾಲಿನಲ್ಲೂ ಕರ್ನಾಟಕ “ಅತ್ಯುತ್ತಮ ಸಾಧಕ” ಎಂಬ ಹಿರಿಮೆಗೆ ಪಾತ್ರವಾಗಿದ್ದು, ಏಪ್ರಿಲ್ 21ರಿಂದ 2022ರ ಮಾರ್ಚ್ ಅವಧಿಯಲ್ಲಿ ರಾಜ್ಯವೂ ನೇರ ವಿದೇಶಿ ಬಂಡವಾಳ ಹೂಡಿಕೆಯಲ್ಲಿ ಮೊದಲ ಸ್ಥಾನದಲ್ಲಿದೆ, ಜಾಗತಿಕ ಸಾಂಕ್ರಾಮಿಕ ಕೋವಿಡ್ ನಂತಹ ಸಂದರ್ಭದಲ್ಲೂ ದೇಶದ ಒಟ್ಟಾರೆ ವಿದೇಶೀ ನೇರ ಬಂಡವಾಳ ಹೂಡಿಕೆಯಲ್ಲಿ ರಾಜ್ಯದ ಪಾಲು ಶೇ.38ರಷ್ಟು ಎಂದು ತಿಳಿಸಿದ ಅವರು, ಮುಂದಿನ ದಿನಗಳಲ್ಲೂ ಇದೇ ಸ್ಥಾನವನ್ನು ಕಾಯ್ದುಕೊಳ್ಳುವ ಸಲುವಾಗಿ ರಾಜ್ಯ ಸರ್ಕಾರವು ಹತ್ತು ಹಲವು ಉದ್ಯಮ ಸ್ನೇಹಿ ಕ್ರಮಗಳನ್ನು ತೆಗೆದುಕೊಂಡಿದೆ ಎಂದು ನುಡಿದರು.

ಹೀಗಾಗಿಯೇ ದೇಶದಲ್ಲೇ ಮೊದಲು ಎನ್ನುವಂತಹ ಪ್ರಯತ್ನವನ್ನು ರಾಜ್ಯ ಮಾಡಿದ್ದು, ಉತ್ಪಾದನೆಗಳಿಗೆ ಅನುವಾಗುವಂತೆ ಪ್ರತ್ಯೇಕ ಕ್ಲಸ್ಟರ್ ಗಳನ್ನು ಮಾಡಿಕೊಳ್ಳಲಾಗಿದೆ. ಇದರ ಭಾಗವಾಗಿ ಧಾರವಾಡದಲ್ಲಿ ಎಫ್.ಎಂ.ಸಿ.ಜಿ., ಕೊಪ್ಪಳದಲ್ಲಿ ಆಟಿಕೆ ಕ್ಲಸ್ಟರ್, ಯಾದಗಿರಿಯಲ್ಲಿ ಔಷಧ ಕ್ಲಸ್ಟರ್, ರಾಮನಗರದಲ್ಲಿ ಇ.ವಿ. ಕ್ಲಸ್ಟರ್ ಹೀಗೆ ಪ್ರತ್ಯೇಕ ಕ್ಲಸ್ಟರ್ ಗಳ ನಿರ್ಮಾಣದ ಮೂಲಕ ಉದ್ದಿಮೆಗಳಿಗೆ ಹೊಸ ಹೊಸ ಅವಕಾಶಗಳನ್ನು ಮಾಡಿಕೊಡಲಾಗುತ್ತಿದೆ ಎಂದರು.

Advertisement

ಇಂಜಿನಿಯರಿಂಗ್, ಸಂಶೋಧನೆ ಮತ್ತು ಅಭಿವೃದ್ಧಿ, ವಿದ್ಯುತ್ ಚಾಲಿತ ವಾಹನ ಕ್ಷೇತ್ರ, ತಂತ್ರಾಂಶ, ವೈಮಾನಿಕ ಮತ್ತು ರಕ್ಷಣಾ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ರಾಜ್ಯವು ಪ್ರತ್ಯೇಕ ನೀತಿಗಳನ್ನು ಹೊಂದಿದ್ದು, ಈ ನೀತಿ ನಿಯಮಗಳ ಅಡಿಯಲ್ಲಿ ರಾಜ್ಯವು ಉದ್ದಿಮೆದಾರ ಭರವಸೆಗಳನ್ನು ಈಡೇರಿಸುವ ಮೂಲಕ ಮುಂಚೂಣಿಯಲ್ಲಿದೆ ಎಂದು ಕಾರ್ಮಿಕ ಸಚಿವ ಶಿವರಾಂ ಹೆಬ್ಬಾರ್, ರಾಜ್ಯದಲ್ಲಿನ ಹೂಡಿಕೆ ಅವಕಾಶಗಳು ಮತ್ತು ಹೂಡಿಕೆ ಸ್ನೇಹಿ ವಾತಾವರಣದ ಬಗ್ಗೆ ಜಾಗತಿಕ ಹೂಡಿಕೆದಾರರಿಗೆ ಮನವರಿಕೆ ಮಾಡಿಕೊಟ್ಟರು.

ಈ ಸಂದರ್ಭದಲ್ಲಿ ಸಚಿವರೊಂದಿಗೆ ಕಾರ್ಮಿಕ ಇಲಾಖೆ ಪ್ರಧಾನ ಕಾರ್ಯದರ್ಶಿ ಎನ್.ವಿ. ಪ್ರಸಾದ್, ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರಮಣರೆಡ್ಡಿ, ಆರ್ಥಿಕ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಐ.ಎಸ್.ಎನ್. ಪ್ರಸಾದ್, ಕಾರ್ಮಿಕ ಇಲಾಖೆ ಅಕ್ರಂ ಪಾಷ, ಸಚಿವರ ಆಪ್ತ ಕಾರ್ಯದರ್ಶಿ ಮಂಜುನಾಥ್ ಬಳ್ಳಾರಿ ಸೇರಿದಂತೆ ಇಲಾಖೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next